Vande Mataram | ಶಾಲೆ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಕಡ್ಡಾಯ 
ದೇಶ

ಕಾಂಗ್ರೆಸ್​ ನಿರ್ಧಾರಕ್ಕೆ ಬ್ರೇಕ್​... 'ವಂದೇ ಮಾತರಂ'ಗೆ ಮತ್ತೇ ಪೂರ್ಣ ರೂಪ ನೀಡಿದ ಎನ್​ಡಿಎ ಸರ್ಕಾರ..ಹೀಗಿದೆ ನೋಡಿ ಕೇಂದ್ರದ ಹೊಸ ಗೈಡ್‌ಲೈನ್ಸ್ | Vande Mataram

ದೆಹಲಿ: ವಂದೇ ಮಾತರಂ (Vande Mataram ) ಗೀತೆಯ ಎಲ್ಲಾ 6 ಮೂಲ ಚರಣಗಳೊಂದಿಗೆ ಹಾಡಲಾಗುವುದು ಅಥವಾ ನುಡಿಸಲಾಗುವುದು ಎಂದು ಬುಧವಾರ (ಫೆ-11) ಗೃಹ ಸಚಿವಾಲಯವು ತನ್ನ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ತಿಳಿಸಿದೆ, 1937 ರಲ್ಲಿ ಕಾಂಗ್ರೆಸ್ ತೆಗೆದುಹಾಕಿದ್ದ 4 ಚರಣಗಳನ್ನು ಈಗ ಮರಳಿ ತಂದಿದೆ.
ರಾಷ್ಟ್ರೀಯ ಗೀತೆಯ ಹಾಡಿದಾಗ ಮತ್ತು ನುಡಿಸಿದಾಗಲೆಲ್ಲಾ ಪ್ರೇಕ್ಷಕರು ಎದ್ದು ನಿಲ್ಲಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ವಂದೇ ಮಾತರಂಗೆ ಅಡ್ಡಿಪಡಿಸುವ ಅಥವಾ ಇತರರು ಗೌರವಿಸದಂತೆ ತಡೆಯುವ ವ್ಯಕ್ತಿಗೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು ಎಂದು ವರದಿಯಾಗಿದೆ.

ವಂದೇ ಮಾತರಂ ಕುರಿತು ಹೊಸ ಮಾರ್ಗಸೂಚಿಗಳು

  1. ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂ ಗೀತೆಯ ಎಲ್ಲಾ 6 ಚರಣಗಳನ್ನು ಹಾಡಬೇಕು.
  2. 1937 ರಲ್ಲಿ ಕಾಂಗ್ರೆಸ್ ತೆಗೆದುಹಾಕಿದ 4 ಚರಣಗಳು ಸೇರಿದಂತೆ ಬಂಕಿಮ್ ಚಂದ್ರ ಚಟರ್ಜಿ ಬರೆದ ಹಾಡಿನ ಎಲ್ಲಾ 6 ಚರಣಗಳು ಪ್ಲೇ ಆಗುತ್ತವೆ.
  3. ಪದ್ಮ ಪ್ರಶಸ್ತಿಗಳಂತಹ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಮತ್ತು ರಾಷ್ಟ್ರಪತಿಗಳು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ, ಆಗಮನ ಮತ್ತು ನಿರ್ಗಮನದ ಸಮಯದಲ್ಲಿ 'ವಂದೇ ಮಾತರಂ' ಗೀತೆಯನ್ನು ನುಡಿಸಲಾಗುತ್ತದೆ.
  4. ರಾಷ್ಟ್ರೀಯ ಗೀತೆಯನ್ನು ಹಾಡುವ ಎಲ್ಲಾ ಸಂದರ್ಭಗಳಲ್ಲಿ, ಅಧಿಕೃತ ಆವೃತ್ತಿಯನ್ನು ಪಠಿಸಬೇಕು ಮತ್ತು ಸಾಮೂಹಿಕ ಗಾಯನದೊಂದಿಗೆ ಇರಬೇಕು ಎಂದು ಇಲಾಖೆ ತಿಳಿಸಿದೆ.
  5. ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆ ಹಾಡುವುದನ್ನು ಜನಪ್ರಿಯಗೊಳಿಸಲು ಮತ್ತು ವಿದ್ಯಾರ್ಥಿಗಳಲ್ಲಿ ರಾಷ್ಟ್ರಧ್ವಜದ ಗೌರವವನ್ನು ಉತ್ತೇಜಿಸಲು ಶಾಲಾ ಅಧಿಕಾರಿಗಳು ತಮ್ಮ ಕಾರ್ಯಕ್ರಮಗಳಲ್ಲಿ ಸಾಕಷ್ಟು ಅವಕಾಶಗಳನ್ನು ಕಲ್ಪಿಸುವಂತೆ ಸಚಿವಾಲಯವು ಸೂಚನೆ ನೀಡಿದೆ.

ವಂದೇ ಮಾತರಂ ಗದ್ದಲ

ವಂದೇ ಮಾತರಂ ಗೀತೆಯನ್ನು ಜನಪ್ರಿಯಗೊಳಿಸಲು ಇತ್ತೀಚೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಕಳೆದ ವರ್ಷ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಈ ಹಾಡಿನ ಕುರಿತಾಗಿ ಸಂಸತ್ತಿನಲ್ಲಿ ದೊಡ್ಡ ಮಟ್ಟದ ಆರೋಪ ಪ್ರತ್ಯಾರೋಪ ನಡೆದಿತ್ತು.
ಬಂಕಿಮ್ ಚಂದ್ರ ಚಟರ್ಜಿ ಬಂಗಾಳಿ ಭಾಷೆಯಲ್ಲಿ ಬರೆದ 3 ನಿಮಿಷ 10 ಸೆಕೆಂಡುಗಳ ಈ ಹಾಡನ್ನು ಮೊದಲು ಸ್ವಾತಂತ್ರ್ಯ ಚಳವಳಿಯು ಮಾತೃಭೂಮಿಯನ್ನು ಸ್ತುತಿಸಲು ಅಳವಡಿಸಿಕೊಂಡಿತು. ಜನ ಗಣ ಮನದಂತೆ, ವಂದೇ ಮಾತರಂ ಹಾಡಲು ಈ ಹಿಂದೆ ಯಾವುದೇ ಅಧಿಕೃತ ಶಿಷ್ಟಾಚಾರವಿರಲಿಲ್ಲ.
6 ಚರಣಗಳ ಈ ಸ್ತುತಿಗೀತೆಯನ್ನು ಮೊದಲು ಚಟರ್ಜಿಯವರ 1882 ರ ಕಾದಂಬರಿ ಆನಂದಮಠದಲ್ಲಿ ಪ್ರಕಟಿಸಲಾಯಿತು. 1950 ರಲ್ಲಿ, ಮೊದಲ 2 ಚರಣಗಳನ್ನು ಭಾರತದ ರಾಷ್ಟ್ರೀಯ ಗೀತೆಯಾಗಿ ಸ್ವೀಕರಿಸಲಾಯಿತು.
2025 ರ ಡಿಸೆಂಬರ್​ನಲ್ಲಿ ನಡೆದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ, ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಹಾಡಿನ ಮೂಲ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಅದರ ಪಾತ್ರವನ್ನು ಎತ್ತಿ ತೋರಿಸುವ ಚರ್ಚೆಯ ನೇತೃತ್ವ ವಹಿಸಿದ್ದರು. ಪ್ರಮುಖ ಪದ್ಯಗಳನ್ನು ತೆಗೆದುಹಾಕುವ ಮೂಲಕ ಕಾಂಗ್ರೆಸ್ ಹಾಡಿಗೆ ದ್ರೋಹ ಬಗೆದಿದೆ ಮತ್ತು ಹಾಳುಮಾಡಿದೆ ಎಂದು ಆರೋಪಿಸಿದರು(ಏಜೆನ್ಸೀಸ್​​).