ಆಗಸ್ಟ್ 15 ರಂದು ಐತಿಹಾಸಿಕ ಕೆಂಪು ಕೋಟೆಯಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ, ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರೀಯ ಗೀತೆ ವಂದೇ ಮಾತರಂ (Vande Mataram) ಅನ್ನು ಹಾಡಲಾಗುವುದು ಮತ್ತು ಈ ಕಾರ್ಯಕ್ರಮದ ಥೀಮ್ 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಯುವಶಕ್ತಿಯ ಕೊಡುಗೆ ಆಗಿರಲಿದೆ ಎಂದು ಸರ್ಕಾರ ಪ್ರಕಟಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಕ್ಷಣಾ ಕಾರ್ಯದರ್ಶಿ ಆರ್. ಕೆ. ಸಿಂಗ್, ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗಿಂತ ಮುಂಚಿತವಾಗಿಯೇ ಯುವಕರ ಯಶಸ್ಸು ಮತ್ತು ಕೊಡುಗೆಯನ್ನು ಆಚರಿಸುವ ಈ ಯೋಜನೆಯನ್ನು ರೂಪಿಸಲಾಗಿತ್ತು. ವಿಕಸಿತ ಭಾರತದತ್ತ ನಮ್ಮ ಪ್ರಯಾಣದಲ್ಲಿ ಯುವಕರು ನಿರ್ಣಾಯಕ ಭಾಗವಾಗಿದ್ದಾರೆ, ಏಕೆಂದರೆ ಅವರು ಅದಕ್ಕೆ ಕೊಡುಗೆ ನೀಡುತ್ತಾರೆ ಮತ್ತು ಅದರಿಂದ ಪ್ರಯೋಜನವನ್ನೂ ಪಡೆಯುತ್ತಾರೆ, ಅದುವೇ ಏಕೈಕ ಕಾರಣ ಎಂದು ಸಿಂಗ್ ತಿಳಿಸಿದರು.
ಲಕ್ಷಾಂತರ ಹೋರಾಟಗಾರರಿಗೆ ಸ್ಫೂರ್ತಿ ನೀಡಿದ ಗೀತೆ
ಭಾರತವು ಆಗಸ್ಟ್ 15 ರಂದು ತನ್ನ 80 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯ ಕೆಂಪು ಕೋಟೆಯಿಂದ ಆಚರಣೆಯ ನೇತೃತ್ವ ವಹಿಸಲಿದ್ದಾರೆ. 2026 ಕ್ಕೆ ವಂದೇ ಮಾತರಂ ಗೀತೆಗೆ 150 ವರ್ಷಗಳು ತುಂಬುತ್ತಿರುವುದರಿಂದ, ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ ಈ ರಾಷ್ಟ್ರೀಯ ಗೀತೆಯ ಶಾಶ್ವತ ಪರಂಪರೆಗೆ ಗೌರವ ಸಲ್ಲಿಸುವ ಸಲುವಾಗಿ, ಮೊದಲ ಬಾರಿಗೆ ಕೆಂಪು ಕೋಟೆಯ ಮುಂಭಾಗದಿಂದ ಇದನ್ನು ಹಾಡಲಾಗುವುದು ಎಂದು ಸಿಂಗ್ ತಿಳಿಸಿದರು.
ಪ್ರಧಾನಿಯವರು ಕೆಂಪು ಕೋಟೆಗೆ ಆಗಮಿಸಿದ ತಕ್ಷಣ ವಂದೇ ಮಾತರಂ' ಗೀತೆಯನ್ನು ಹಾಡಲಾಗುವುದು. ತದನಂತರ, ಅವರು ರಾಷ್ಟ್ರಧ್ವಜವನ್ನು ಹಾರಿಸಿ ರಾಷ್ಟ್ರವನ್ನುದ್ದೇಶಿಸಿ ಸಾಂಪ್ರದಾಯಿಕ ಭಾಷಣ ಮಾಡಲಿದ್ದಾರೆ ಎಂದು ರಕ್ಷಣಾ ಕಾರ್ಯದರ್ಶಿ ವಿವರಿಸಿದರು.
ರಾಹುಲ್ ಗಾಂಧಿಗೆ ಆಸನ ವ್ಯವಸ್ಥೆ ಎಲ್ಲಿ..?
ಭಾರತೀಯ ವಾಯುಪಡೆಯ ಮಿ-17 (Mi-17) ಹೆಲಿಕಾಪ್ಟರ್ ವಂದೇ ಮಾತರಂಗೆ 150 ವರ್ಷಗಳು ತುಂಬಿದ ನೆನಪಿನ ಬ್ಯಾನರ್ ಹೊತ್ತು, ಕೆಂಪು ಕೋಟೆಯಲ್ಲಿ ನೆರೆದಿರುವ ಜನರ ಮೇಲೆ ಪುಷ್ಪವೃಷ್ಟಿ ಮಾಡಲಿದೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಕ್ಷಣಾ ಕಾರ್ಯದರ್ಶಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದ್ದು, ಆದ್ಯತಾ ಕೋಷ್ಟಕ (Table of Precedence - ToP) ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಆಸನದ ವ್ಯವಸ್ಥೆ ಮಾಡಲಾಗುವುದು, ಅದರ ನಿಯಮಾವಳಿಯಂತೆ ರಾಹುಲ್ ಗಾಂಧಿ ಅವರ ಆಸನವು ಕ್ಯಾಬಿನೆಟ್ ಸಚಿವರ ನಂತರ ಇರಲಿದೆ ಎಂದು ಸಿಂಗ್ ತಿಳಿಸಿದರು.
ಸ್ವಾತಂತ್ರ್ಯ ದಿನಾಚರಣೆಯು ವಿವಿಧ ಕ್ಷೇತ್ರಗಳಲ್ಲಿ ಯುವಕರ ಯಶಸ್ಸನ್ನು ಗುರುತಿಸಲಿದೆ ಎಂದು ರಕ್ಷಣಾ ಸಚಿವಾಲಯದ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ಅಂತರರಾಷ್ಟ್ರೀಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ಒಲಿಂಪಿಕ್ 2026 ರ 19 ಪದಕ ವಿಜೇತ ವಿದ್ಯಾರ್ಥಿಗಳ ಸಾಧನೆಯು ವಿಜ್ಞಾನ ಕ್ಷೇತ್ರದಲ್ಲಿ ಯುವಶಕ್ತಿಯ ಯಶಸ್ಸಿಗೆ ಉದಾಹರಣೆಯಾಗಿದೆ, ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಅವರಿಗೆ ವೇದಿಕೆಯ ಮೇಲೆ ಆಸನದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಧಿಕಾರಿ ಹೇಳಿದರು.
ವಿವಿಧ ಕ್ಷೇತ್ರಗಳ ಸಾಧಕರಾದ ಹಾಗೂ ವಿಕಸಿತ ಭಾರತದ ಪ್ರಯಾಣದಲ್ಲಿ ದೇಶವನ್ನು ಮುನ್ನಡೆಸುತ್ತಿರುವ ಸುಮಾರು 5,000 ವಿಶೇಷ ಅತಿಥಿಗಳನ್ನು ಆಚರಣೆಗೆ ಪ್ರಮುಖ ಆಹ್ವಾನಿತರನ್ನಾಗಿ ಕರೆಯಲಾಗಿದೆ ಎಂದು ಅವರು ತಿಳಿಸಿದರು. ಪ್ರತಿಯೊಬ್ಬ ಪ್ರಜೆಯ ಕಲ್ಯಾಣಕ್ಕಾಗಿ ಸಮರ್ಪಣಾ ಭಾವದಿಂದ ಮುನ್ನಡೆಯಲು ಜನರನ್ನು ಪ್ರೇರೇಪಿಸಲು ಈ ವರ್ಷದ ಮುಖ್ಯ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳಲ್ಲಿ ಸೇವಾ ತೀರ್ಥವನ್ನು ಪ್ರದರ್ಶಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಆಹ್ವಾನ ಪತ್ರಿಕೆಯಲ್ಲಿರುವ ಧರ್ಮ ಚಕ್ರವು ಧಾರ್ಮಿಕ ಕರ್ತವ್ಯದ ಶಾಶ್ವತ ಚಲನೆ ಮತ್ತು ನಿರಂತರ ಸ್ವಾರ್ಥರಹಿತ ಸೇವೆಯನ್ನು ಸಂಕೇತಿಸುತ್ತದೆ ಎಂದು ಅವರು ವಿವರಿಸಿದರು.
ಆಸನ ವಿಭಾಗಗಳಿಗೆ ಭಾರತದ ಸರೋವರಗಳ ಹೇಸರೇಕೆ..?
ಪ್ರಧಾನಿ ಮೋದಿ ಅವರು ಸೇವಾ ತೀರ್ಥವನ್ನು ರಾಷ್ಟ್ರಕ್ಕೆ ಸಮರ್ಪಿಸುವಾಗ, ಇದು ಕರ್ತವ್ಯ, ಕರುಣೆ ಮತ್ತು ರಾಷ್ಟ್ರ ಮೊದಲು ಎಂಬ ತತ್ವಕ್ಕೆ ಬದ್ಧತೆಯ ಉಜ್ವಲ ಹಾಗೂ ಶಕ್ತಿಶಾಲಿ ಸಂಕೇತವಾಗಿದೆ ಎಂದು ಉಲ್ಲೇಖಿಸಿದ್ದನ್ನು ಅಧಿಕಾರಿ ನೆನಪಿಸಿಕೊಂಡರು. ವಿಐಪಿ ಸಂಸ್ಕೃತಿಯನ್ನು ಅಂತ್ಯಗೊಳಿಸಲು ಮತ್ತು ಜಲ ಸಂರಕ್ಷಣೆಯ ಮಹತ್ವವನ್ನು ಎತ್ತಿಹಿಡಿಯಲು, ಗಣರಾಜ್ಯೋತ್ಸವದಲ್ಲಿ ಆಸನ ಆವರಣಗಳಿಗೆ ನದಿಗಳ ಹೆಸರನ್ನು ಇಡಲಾಗಿತ್ತು ಎಂದು ಅಧಿಕಾರಿ ಹೇಳಿದರು. ಅದರಂತೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗಾಗಿ, ಆಸನದ ವಿಭಾಗಗಳಿಗೆ ಭಾರತದ ಪ್ರಮುಖ ಸರೋವರಗಳ ಹೆಸರನ್ನು ಇಡಲಾಗಿದೆ ಎಂದು ಅವರು ತಿಳಿಸಿದ್ದಾರೆ(ಏಜೆನ್ಸೀಸ್).