ಬಂಗಾಳದ ಶಾಲೆಗಳಲ್ಲಿ ಇನ್ಮುಂದೆ 'ವಂದೇ ಮಾತರಂ' ಕಡ್ಡಾಯ: ಹಾಡದಿದ್ದರೆ ಬೀಳುತ್ತೆ ದಂಡ? ಸಿಎಂ ಸುವೇಂದು ಬಿಗ್ ಮಾಸ್ಟರ್ ಸ್ಟ್ರೋಕ್!
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಹೊಸ ಯುಗ ಆರಂಭವಾಗಿದೆ. ಅಧಿಕಾರಕ್ಕೆ ಬಂದ ಬೆನ್ನಲ್ಲೇ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ರಾಜ್ಯದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಹರೆಯನ್ನು ಬದಲಿಸುವಂತಹ ದೃಢ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಂದೇ ಮಾತರಂ(Vande Mataram Mandatory) ಗೀತೆಯನ್ನು ಹಾಡುವುದನ್ನು ಕಡ್ಡಾಯಗೊಳಿಸಿ ಎಂದು ಆದೇಶ ಹೊರಡಿಸಲಾಗಿದೆ.
ಈ ಬಗ್ಗೆ ಗುರುವಾರ ವಿಧಾನಸಭೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸುವೇಂದು, ಬಂಗಾಳದ ಅಸ್ಮಿತೆ ಮತ್ತು ರಾಷ್ಟ್ರೀಯತೆಯ ಸಂಗಮವಾಗಿ ಈ ನಿರ್ಧಾರವನ್ನು ಜಾರಿಗೆ ತರುತ್ತಿರುವುದಾಗಿ ಘೋಷಿಸಿದ್ದಾರೆ.
ಸೋಮವಾರದಿಂದಲೇ ಜಾರಿ: ಸಿಎಂ ಖಡಕ್ ಸೂಚನೆ
ಮುಂದಿನ ಸೋಮವಾರದಿಂದ ರಾಜ್ಯದ ಪ್ರತಿಯೊಂದು ಶಾಲೆಯಲ್ಲೂ ವಂದೇ ಮಾತರಂ ಗೀತೆ ಮೊಳಗಲಿದೆ. ಈ ಬಗ್ಗೆ ಈಗಾಗಲೇ ಶಿಕ್ಷಣ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ನಬನ್ನಾ ಮೂಲಕ ಈ ಆದೇಶದ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ನಾನು ಸ್ವತಃ ಮೇಲ್ವಿಚಾರಣೆ ನಡೆಸುತ್ತೇನೆ ಎಂದು ಸುವೇಂದು ಅಧಿಕಾರಿ ಗುಡುಗಿದ್ದಾರೆ. ಮೇ 13 ರಂದು ಶಿಕ್ಷಣ ನಿರ್ದೇಶಕರು ಹೊರಡಿಸಿದ ಪತ್ರದ ಅನ್ವಯ, ತರಗತಿಗಳು ಆರಂಭವಾಗುವ ಮೊದಲು ನಡೆಯುವ ಬೆಳಗಿನ ಪ್ರಾರ್ಥನಾ ಸಭೆಯಲ್ಲಿ ಈ ರಾಷ್ಟ್ರೀಯ ಗೀತೆಯನ್ನು ಹಾಡುವುದು ಇನ್ಮುಂದೆ ಅನಿವಾರ್ಯವಾಗಿದೆ.
ವೀಡಿಯೊ ಸಾಕ್ಷ್ಯ ಕಡ್ಡಾಯ: ತಪ್ಪಿದರೆ ಕ್ರಮ ಖಚಿತ!
ಈ ಆದೇಶ ಕೇವಲ ಕಾಗದದ ಮೇಲೆ ಉಳಿಯಬಾರದು ಎಂದು ಸರ್ಕಾರವು ಕಠಿಣ ನಿಯಮಗಳನ್ನು ರೂಪಿಸಿದೆ. ಶಾಲೆಗಳಲ್ಲಿ ವಂದೇ ಮಾತರಂ ಹಾಡುತ್ತಿರುವುದಕ್ಕೆ ಪುರಾವೆಯಾಗಿ ವೀಡಿಯೊ ರೆಕಾರ್ಡಿಂಗ್ ಮಾಡಬೇಕು ಮತ್ತು ಅದನ್ನು ದಾಖಲೆ ರೂಪದಲ್ಲಿ ಇಟ್ಟುಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಅನುಷ್ಠಾನದಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಶಾಲಾ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.
ಕೇಂದ್ರದ ಕಾನೂನಿಗೆ ಬಂಗಾಳದ ಸಾಥ್
ಕೇಂದ್ರ ಸರ್ಕಾರವು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971 ಕ್ಕೆ ತಿದ್ದುಪಡಿ ತಂದು, ವಂದೇ ಮಾತರಂ ಗೀತೆಗೆ ಅಡ್ಡಿಪಡಿಸುವುದನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಲು ಮುಂದಾಗಿದೆ. ಈ ರಾಷ್ಟ್ರೀಯ ಬದಲಾವಣೆಗಳ ಬೆನ್ನಲ್ಲೇ ಸುವೇಂದು ಅಧಿಕಾರಿ ಅವರು ಈ ನಿರ್ಧಾರ ಕೈಗೊಂಡಿರುವುದು ರಾಜಕೀಯವಾಗಿ ಮಹತ್ವ ಪಡೆದಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಮನ್ವಯದ ಸಂಕೇತ ಎಂದೂ ವಿಶ್ಲೇಷಿಸಲಾಗುತ್ತಿದೆ.
ಸಂಪ್ರದಾಯದ ಹಾದಿಯಲ್ಲಿ ಮಹತ್ವದ ಬದಲಾವಣೆ
ಬಂಗಾಳದ ಶಾಲೆಗಳಲ್ಲಿ ಇಲ್ಲಿಯವರೆಗೆ ರವೀಂದ್ರನಾಥ ಟ್ಯಾಗೋರರ 'ಜನ ಗಣ ಮನ' ರಾಷ್ಟ್ರಗೀತೆ ಮತ್ತು ಹಿಂದಿನ ಟಿಎಮ್‌ಸಿ ಸರ್ಕಾರ ಘೋಷಿಸಿದ್ದ ಬಾಂಗ್ಲಾರ್ ಮಾತಿ ಬಾಂಗ್ಲಾರ್ ಜಲ್ ರಾಜ್ಯ ಗೀತೆಯನ್ನು ಹಾಡಲಾಗುತ್ತಿತ್ತು. ಈಗ ಬಂಕಿಮ ಚಂದ್ರ ಚಟರ್ಜಿಯವರ ವಂದೇ ಮಾತರಂ ಈ ಪಟ್ಟಿಗೆ ಸೇರ್ಪಡೆಯಾಗಿದೆ.
ಶಿಕ್ಷಕರಲ್ಲಿ ಮೂಡಿದೆ ಗೊಂದಲ
ಸೀಮಿತ ಅವಧಿಯ ಪ್ರಾರ್ಥನಾ ಸಭೆಯಲ್ಲಿ ಇಷ್ಟೊಂದು ಗೀತೆಗಳನ್ನು ಹಾಡುವುದು ಹೇಗೆ ಎಂಬುದು ಶಿಕ್ಷಕರಲ್ಲಿ ಗೊಂದಲ ಮೂಡಿಸಿದೆ. ಸಮಯದ ಹೊಂದಾಣಿಕೆ ಮತ್ತು ಕ್ರಮದ ಬಗ್ಗೆ ಶಿಕ್ಷಕರ ಒಂದು ವರ್ಗ ಆತಂಕ ವ್ಯಕ್ತಪಡಿಸಿದೆ. ಆದರೆ, ರಾಷ್ಟ್ರಪ್ರೇಮದ ವಿಚಾರದಲ್ಲಿ ಸಮಯದ ನೆಪ ಸಲ್ಲದು ಎಂಬುದು ಸರ್ಕಾರದ ನಿಲುವು.
ಬಂಗಾಳದ ಮಣ್ಣಿನಲ್ಲಿ ಹುಟ್ಟಿದ 'ವಂದೇ ಮಾತರಂ' ದಶಕಗಳ ನಂತರ ತನ್ನದೇ ನೆಲದ ಶಾಲೆಗಳಲ್ಲಿ ಕಡ್ಡಾಯವಾಗಿ ಮೊಳಗುತ್ತಿರುವುದು ಒಂದು ದೊಡ್ಡ ಸಾಂಸ್ಕೃತಿಕ ಬದಲಾವಣೆಯ ಮುನ್ನುಡಿಯಾಗಿದೆ. ಈ ನಿರ್ಧಾರವು ರಾಜ್ಯದ ರಾಜಕಾರಣದಲ್ಲಿ ಯಾವ ರೀತಿಯ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).