ದೇಶದ ಸಂಸತ್ತು ಸೋಮವಾರದಂದು (ಡಿಸೆಂಬರ್ 8) ಹೊಸ ಇತಿಹಾಸ ಬರೆಯಿತು. ವಂದೇ ಮಾತರಂ ಗೀತರಚನೆಗೆ 150 ವರ್ಷಗಳಾಗಿರುವ ಪ್ರಯುಕ್ತ ನಡೆದ ವಿಶೇಷ ಚರ್ಚೆ ಇತಿಹಾಸದ ಪ್ರಮಾದಗಳನ್ನು, ವಂದೇ ಮಾತರಂ ಗೀತೆ ವಿಭಜನೆ ಸೃಷ್ಟಿಸಿದ ಅಪಾಯವನ್ನು ಮತ್ತು ವಂದೇ ಮಾತರಂ ಗೀತೆ ದೇಶವನ್ನು ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ ಜೋಡಿಸಿರುವ ಪರಿಯನ್ನು ಅನಾವರಣಗೊಳಿಸಿತು. ದೇಶ ವಿಭಜನೆಯ ಹಾದಿ, ಮೊಹಮ್ಮದ್ ಅಲಿ ಜಿನ್ನಾರ ಹಠ, ಬಂಗಾಳದ ಸ್ಥಿತಿ, ಕ್ರಾಂತಿಕಾರಿಗಳ ಬಲಿದಾನ ಸೇರಿದಂತೆ ಹಲವು ಮಹತ್ವದ ಅಂಶಗಳು ಚರ್ಚೆಗೆ ಬಂದವು. ಪ್ರಧಾನಿ ನರೇಂದ್ರ ಮೋದಿ ತಮ್ಮ 60 ನಿಮಿಷಗಳ ಭಾಷಣದಲ್ಲಿ 121 ಬಾರಿ ವಂದೇ ಮಾತರಂನ್ನು ಉಲ್ಲೇಖಿಸಿದ್ದು, ಗಮನಾರ್ಹವಾಗಿತ್ತು. ಪ್ರತಿಪಕ್ಷಗಳ ಸದಸ್ಯರು ಕೂಡ ಚರ್ಚೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
‘ಸಾಮಾಜಿಕ ಸಾಮರಸ್ಯದ ನೆಪದಲ್ಲಿ ಕಾಂಗ್ರೆಸ್ ಪಕ್ಷ ವಂದೇ ಮಾತರಂ ಗೀತೆಯನ್ನು ತುಂಡು ತುಂಡಾಗಿ ವಿಭಜಿಸಿತಲ್ಲದೆ, ಈಗಲೂ ಓಲೈಕೆ ರಾಜಕಾರಣದಲ್ಲಿ ನಿರತವಾಗಿದೆ. ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ವಂದೇ ಮಾತರಂ ಗೀತೆಯ ಪ್ರಮುಖ ಸಾಲುಗಳನ್ನು ತೆಗೆದುಹಾಕುವ ಮೂಲಕ ದೇಶ ವಿಭಜನೆಯ ಬೀಜ ಬಿತ್ತಿದರು’ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ವಂದೇ ಮಾತರಂ ಗೀತೆ ರಚನೆಯಾಗಿ 150 ವರ್ಷವಾಗಿರುವ ಪ್ರಯುಕ್ತ ಸೋಮವಾರ ಲೋಕಸಭೆಯಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ, ಮೊಹಮ್ಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ಲಖನೌದಲ್ಲಿ ವಂದೇ ಮಾತರಂ ಗೀತೆಯನ್ನು ವಿರೋಧಿಸಿ 1936ರ ಅಕ್ಟೋಬರ್ 15ರಂದು ಪ್ರತಿಭಟನೆ ನಡೆಸಿತ್ತು. ಆದರೆ, ಕಾಂಗ್ರೆಸ್ ಮತ್ತು ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅದನ್ನು ವಿರೋಧಿಸುವ ಬದಲು ವಂದೇ ಮಾತರಂ ಗೀತೆಯ ಪರಿಷ್ಕರಣೆಗೆ ಮುಂದಾದರು. ಏಕೆಂದರೆ, ನೆಹರು ಅವರಿಗೆ ಅವರ ಸಿಂಹಾಸನ ಅಲುಗಾಡಿದಂತೆ ಭಾಸವಾಯಿತು. ‘ವಂದೇ ಮಾತರಂ ಎಷ್ಟು ಜನಪ್ರಿಯವಾಗಿದೆ ಎಂದರೆ ಅದು ರಾಷ್ಟ್ರೀಯ ಗೀತೆಯಾಗಿ ಹೊರಹೊಮ್ಮಿದೆ’ ಎಂದು ಗಾಂಧೀಜಿ 1905ರಲ್ಲಿ ಹೇಳಿದ್ದರು. ಆದರೆ, ವಂದೇ ಮಾತರಂ ಬಗ್ಗೆ ಗಾಂಧಿ ಹೊಂದಿದ್ದ ಆಶಯ ಗಳನ್ನು ಕಾಂಗ್ರೆಸ್ ಹೊಸಕಿ ಹಾಕಿದೆ ಎಂದು ಗುಡುಗಿದರು.
50ವರ್ಷ ಭಾರತ ವಸಾಹತುಶಾಹಿಯ ಅಡಿಯಲ್ಲಿ ತತ್ತರಿಸುತ್ತಿತ್ತು.
100 ವರ್ಷ ಭಾರತದಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು. ಪ್ರಮುಖ ರಾಜಕೀಯ ನಾಯಕರು ಜೈಲಿನಲ್ಲಿದ್ದರು.
150 ವರ್ಷ ದೇಶಾದ್ಯಂತ ವಂದೇ ಮಾತರಂ-150ನೇ ವರ್ಷ ಸಂಭ್ರಮದಿಂದ ಆಚರಿಸಲಾಗುತ್ತಿದೆ. ವರ್ಷಪೂತಿ ನಡೆಯಲಿರುವ ಕಾರ್ಯಕ್ರಮಗಳಿಗೆ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 7ರಂದು ಚಾಲನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ ವಿಶೇಷ ಅಂಚೆಚೀಟಿ ಹಾಗೂ ನಾಣ್ಯವನ್ನು ಬಿಡುಗಡೆ ಮಾಡಿದ್ದಾರೆ. ವಂದೇ ಮಾತರಂ ಗೀತೆಯ ಪ್ರಾಮುಖ್ಯ ಮತ್ತು ದೇಶಭಕ್ತಿಯ ಪ್ರಬಲ ಭಾವವನ್ನು ಜನರಿಗೆ ಅದರಲ್ಲೂ ಯುವಪೀಳಿಗೆಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ.
ಇತಿಹಾಸದ ಹಾದಿ
1875ರಲ್ಲಿ ಬಂಕಿಮಚಂದ್ರರಿಂದ ‘ವಂದೇ ಮಾತರಂ’ ಗೀತೆ ರಚನೆ.
1882ರಲ್ಲಿ ‘ಅನಂದಮಠ’ ಕಾದಂಬರಿಯಲ್ಲಿ ಪ್ರಕಟ.
‘ಬಂಗದರ್ಶನ’ ಪತ್ರಿಕೆಯಲ್ಲಿ ‘ವಂದೇ ಮಾತರಂ’ ಪ್ರಕಟವಾಗು ತ್ತಿದ್ದಂತೆ ಜನಸಾಮಾನ್ಯರ ನಡುವೆ ಪ್ರಸಿದ್ಧ ವಾಯಿತು. 1896ರಲ್ಲಿ ರವೀಂದ್ರನಾಥ ಟ್ಯಾಗೋರ್ ವಂದೇ ಮಾತರಂ ಗೀತೆ ಹಾಡಿದರು.
ಖ್ಯಾತ ಗಾಯಕ ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್ 1896ರಲ್ಲಿ ಕಲ್ಕತ್ತದ ಸಾರ್ವಜನಿಕ ಸಭೆಯಲ್ಲಿ ಹಾಡಿದ ವಂದೇ ಮಾತರಂ ಬಹುಜನಪ್ರಿಯವಾಯಿತು.
1905ರ ಹೊತ್ತಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ‘ವಂದೇ ಮಾತರಂ’ ಬಹು ಜನಪ್ರಿಯವಾಯಿತು. ಯುವ ಕ್ರಾಂತಿಕಾರಿಗಳನ್ನು ಆಕರ್ಷಿಸಿತು.
1938ರಲ್ಲಿ ಮುಸ್ಲಿಂ ಲೀಗ್ ಅಧ್ಯಕ್ಷ ಮೊಹಮ್ಮದ್ ಅಲಿ ಜಿನ್ನಾ ಅವರಿಂದ ‘ವಂದೇ ಮಾತರಂ’ಗೆ ವಿರೋಧ. ಪರಿಣಾಮವಾಗಿ, ರೇಡಿಯೋದಲ್ಲಿ ವಂದೇ ಮಾತರಂ ಪ್ರಸಾರ ನಿಂತುಹೋಯಿತು.
1947ರಲ್ಲಿ ಮತ್ತೆ ರೇಡಿಯೋದಲ್ಲಿ ಪ್ರಸಾರ ಆರಂಭವಾಯಿತು. 1950ರಲ್ಲಿ ಈ ಗೀತೆಯನ್ನು ಪೂರ್ಣಪ್ರಮಾಣದಲ್ಲಿ ದೇಶದ ರಾಷ್ಟ್ರೀಯ ಗೀತೆ (ನ್ಯಾಷನಲ್ ಸಾಂಗ್) ಎಂದು ಅಂಗೀಕರಿಸಲಾಯಿತು.
ತುಷ್ಟೀಕರಣದ ರಾಜಕೀಯ
ಕಾಂಗ್ರೆಸ್ ಮೊದಲಿನಿಂದಲೂ ತುಷ್ಟೀಕರಣದ ರಾಜಕೀಯ ಮಾಡಿಕೊಂಡು ಬರುತ್ತಿದೆ. ಅದು ಈಗಲೂ ಮುಂದುವರಿದಿದೆ. ವಂದೇ ಮಾತರಂ ಗೀತೆಯ ವಿಷಯದಲ್ಲಿ ಕಾಂಗ್ರೆಸ್ ರಾಜಿ ಮಾಡಿಕೊಂಡಿತ್ತು. ಕಾಂಗ್ರೆಸ್ಸಿಗರು ಸಾಮಾಜಿಕ ಸಾಮರಸ್ಯದ ಮುಖವಾಡದಡಿಯಲ್ಲಿ ವಂದೇಮಾತರಂ ಗೀತೆಯ ಕೆಲವು ಭಾಗಗಳನ್ನು ತೆಗೆದು ಹಾಕಿದ್ದರು. ಓಲೈಕೆ ರಾಜಕಾರಣದ ಭಾಗವಾಗಿ ವಂದೇ ಮಾತರಂ ಗೀತೆಯನ್ನು ವಿಭಜಿಸಿಲು ಒಪ್ಪಿಕೊಂಡಿದ್ದರು. ಮುಸ್ಲಿಂ ಲೀಗ್ನ ಮೊಹಮ್ಮದ್ ಅಲಿ ಜಿನ್ನಾ ಅವರು ವಂದೇ ಮಾತರಂ ಗೀತೆಯನ್ನು ವಿರೋಧಿಸಿದ ನಂತರ, ಜವಾಹರಲಾಲ್ ನೆಹರು ಸುಭಾಷ ಚಂದ್ರ ಬೋಸ್ ಅವರಿಗೆ ಬರೆದ ಪತ್ರದಲ್ಲಿ, ‘ವಂದೇ ಮಾತರಂ ಗೀತೆಯ ಹಿನ್ನೆಲೆಯನ್ನು ಓದಿದ್ದೇನೆ ಮತ್ತು ಅದು ಮುಸ್ಲಿಮರಲ್ಲಿ ದ್ವೇಷ ಬಿತ್ತಬಹುದು’ ಎಂದು ಹೇಳಿದ್ದರು.
ಸದನದ ಸೌಭಾಗ್ಯ
ಯಾವ ಮಂತ್ರ, ಯಾವ ಜಯಘೋಶ ದೇಶದ ಸ್ವಾತಂತ್ರ್ಯ ಆಂದೋಲನಕ್ಕೆ ಶಕ್ತಿ ಮತ್ತು ಪ್ರೇರಣೆಯನ್ನು ನೀಡಿತೋ, ತ್ಯಾಗ ಮತ್ತು ತಪಸ್ಸಿನ ಮಾರ್ಗವನ್ನು ತೋರಿಸಿತೋ, ಅಂಥ ವಂದೇ ಮಾತರಂನ ಸ್ಮರಣೆ ಸದನದಲ್ಲಿ ಮಾಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ನಾವೆಲ್ಲರೂ ವಂದೇ ಮಾತರಂನ ವೈಭವವನ್ನು ಮರು ಸ್ಥಾಪಿಸಬೇಕಿದೆ. ವಂದೇ ಮಾತರಂಗೆ 150 ವರ್ಷ ತುಂಬಿರುವ ಸಂದರ್ಭದಲ್ಲಿ ಭಾರತ ವಿಶ್ವದ ಐದನೇ ದೊಡ್ಡ ಅರ್ಥವ್ಯವಸ್ಥೆಯಾಗಿ ಹೊರಹೊಮ್ಮಿದೆ ಮತ್ತು ಇನ್ನೂ ವೇಗವಾಗಿ ಬೆಳೆಯುತ್ತಿದೆ.
ಹಿಂದೂ- ಮುಸ್ಲಿಮರಿದ್ದರು
1906ರ ಮೇ 20ರಂದು ಬಾರಿಸಾಲ್ (ಈಗ ಈ ಪ್ರದೇಶ ಬಾಂಗ್ಲಾದೇಶದಲ್ಲಿದೆ) ದಲ್ಲಿ ವಂದೇ ಮಾತರಂ ಜಯಘೋಷ ಹಾಕುತ್ತ ಸ್ವಾತಂತ್ರ್ಯ ಹೋರಾಟಗಾರರು ಬೃಹತ್ ಮೆರವಣಿಗೆ ನಡೆಸಿದರು. ಇದರಲ್ಲಿ 10 ಸಾವಿರಕ್ಕಿಂತ ಅಧಿಕ ಜನರು ಪಾಲ್ಗೊಂಡಿದ್ದರು. ಮಾತ್ರವಲ್ಲ, ಮೆರವಣಿಗೆಯಲ್ಲಿ ಹಿಂದೂ, ಮುಸ್ಲಿಮರ ಸಮೇತ ಎಲ್ಲ ಧರ್ಮ, ಜಾತಿಗಳ ಜನರು ಪಾಲ್ಗೊಂಡು, ಕೈಯಲ್ಲಿ ವಂದೇ ಮಾತರಂ ಧ್ವಜ ಹಿಡಿದು, ಬಾಯಲ್ಲಿ ವಂದೇ ಮಾತರಂ ಘೋಷಣೆ ಹಾಕುತ್ತಿದ್ದರು.
ಕ್ರಾಂತಿಕಾರಿಗಳಿಗೆ ಪ್ರೇರಣೆ
ದೇಶದ ಅಸಂಖ್ಯ ಕ್ರಾಂತಿಕಾರಿಗಳು ಬದುಕಿನ ಕೊನೆಯ ಕ್ಷಣದವರೆಗೂ ವಂದೇ ಮಾತರಂ ಘೋಷಣೆಯನ್ನು ಹೇಳುತ್ತ, ನೇಣುಗಂಬಕ್ಕೆ ಕೊರಳೊಡ್ಡಿದರು. ಬಂಗಾಳದ ಏಕತೆಗಾಗಿ ವಂದೇ ಮಾತರಂ ಎಲ್ಲ ಕಡೆಗಳಲ್ಲಿ ಮೊಳಗಿತ್ತು ಮತ್ತು ಬಂಗಾಳಕ್ಕೂ ಪ್ರೇರಣೆ ನೀಡಿತು.
ಚರ್ಚೆಗೆ ರಾಜಕೀಯ ಬಣ್ಣ
ಪ್ರಧಾನಿ ನರೇಂದ್ರ ಮೋದಿ ಅವರು ಇತಿಹಾಸವನ್ನು ಪುನಃ ಬರೆಯಲು ಪ್ರಯತ್ನಿಸುತ್ತಿದ್ದು, ವಂದೇ ಮಾತರಂ ಚರ್ಚೆಗೆ ರಾಜಕೀಯ ಬಣ್ಣ ನೀಡಿದ್ದಾರೆ. ಬಿಜೆಪಿಗರು ಎಷ್ಟೇ ಪ್ರಯತ್ನಿಸಿದರೂ ಜವಾಹರಲಾಲ್ ನೆಹರು ಅವರ ಕೊಡುಗೆಯನ್ನು ಮರೆಮಾಚಲು ಸಾಧ್ಯವಾಗುವುದಿಲ್ಲ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪ ನಾಯಕ ಗೌರವ್ ಗೊಗೊಯ್ ಹೇಳಿದರು. ವಂದೇ ಮಾತರಂ ಗೀತೆಗೆ ಅರ್ಹವಾದ ಪ್ರಾಮುಖ್ಯ ಮತ್ತು ರಾಷ್ಟ್ರೀಯ ಗೀತೆಯ ಸ್ಥಾನಮಾನವನ್ನು ನೀಡಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿಯಲ್ಲ. ಯಾವುದೇ ವಿಷಯದ ಬಗ್ಗೆ ಮಾತನಾಡುವಾಗ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಕಾಂಗ್ರೆಸ್ ಅನ್ನು ಗುರಿಯಾಗಿಸುವುದು ಮೋದಿಯವರಿಗೆ ಅಭ್ಯಾಸವಾಗಿದೆ ಎಂದು ಗೊಗೊಯ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.ಪಾಕಿಸ್ತಾನ ವಿರುದ್ಧದ ‘ಆಪರೇಷನ್ ಸಿಂಧೂರ’ ಕುರಿತಾದ ಚರ್ಚೆಯ ವೇಳೆ ಮೋದಿಯವರು ನೆಹರು ಅವರ ಹೆಸರನ್ನು 14 ಬಾರಿ ಮತ್ತು ಕಾಂಗ್ರೆಸ್ ಹೆಸರನ್ನು 50 ಬಾರಿ ಉಲ್ಲೇಖಿಸಿದ್ದರು. ಸಂವಿಧಾನದ 75ನೇ ವಾರ್ಷಿಕೋತ್ಸವದ ಪ್ರಯುಕ್ತ ಚರ್ಚೆ ನಡೆದಾಗ ನೆಹರು ಹೆಸರನ್ನು 10 ಬಾರಿ, ಕಾಂಗ್ರೆಸ್ ಹೆಸರನ್ನು 26 ಬಾರಿ ಪ್ರಸ್ತಾಪಿಸಿದ್ದರು ಎಂದು ಗೊಗೊಯ್ ಕುಟುಕಿದರು.
ರಾಜ್ಯಸಭೆಯಲ್ಲಿ ಇಂದು ಚರ್ಚೆ
ಗೃಹ ಸಚಿವ ಅಮಿತ್ ಷಾ ಇಂದು (ಮಂಗಳವಾರ) ರಾಜ್ಯಸಭೆಯಲ್ಲಿ ‘ವಂದೇ ಮಾತರಂ-150 ವರ್ಷ’ ವಿಶೇಷ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಲಿದ್ದಾರೆ. ಬಳಿಕ ಕೇಂದ್ರ ಸಚಿವ ಜೆ.ಪಿ.ನಡ್ಡಾ ಮಾತನಾಡಲಿದ್ದಾರೆ.
ಪರಿಣಾಮ ಏನು?
ಲೋಕಸಭೆಯಲ್ಲಿ ವಂದೇ ಮಾತರಂ ಬಗ್ಗೆ ಚರ್ಚೆ ಮಾಡುವುದರ ಮುಖಾಂತರ ಸಾಂಸ್ಕೃತಿಕ ಗೌರವ ಮತ್ತು ಏಕತೆಯ ಸಂದೇಶವನ್ನು ನೀಡಲು ಪ್ರಯತ್ನಿಸಲಾಯಿತು. ಹೊಸಪೀಳಿಗೆಗೆ ವಂದೇ ಮಾತರಂ ಬಗ್ಗೆ ಅಭಿಮಾನ ಮೂಡಲು ಪೂರಕ.
ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದ ಮೇಲೆ ಸವಾಲುಗಳು ಬದಲಾದವು, ಆದ್ಯತೆಗಳು ಬದಲಾದವು. ಆದರೆ, ಭಾರತದ ಮೇಲೆ ಯಾವಾಗೆಲ್ಲ ಸಂಕಟ ಆವರಿಸಿತೋ ದೇಶವು ಪ್ರತಿ ಬಾರಿ ವಂದೇ ಮಾತರಂನ ಪ್ರೇರಣೆಯಿಂದ ಮುಂದೆ ಸಾಗಿತು. ಇಂದಿಗೂ ಆಗಸ್ಟ್ 15 ಮತ್ತು ಜನವರಿ 26ರಂದು ದೇಶಾದ್ಯಂತ ಈ ಭಾವ ನೋಡಲು ಸಿಗುತ್ತದೆ.
ವಂದೇ ಮಾತರಂ ಗೀತೆ 150 ವರ್ಷಗಳಿಂದ ದೇಶದ ಆತ್ಮದ ಭಾಗವಾಗಿದೆ. ಕಳೆದ 75 ವರ್ಷಗಳಿಂದ ಜನರ ಹೃದಯದಲ್ಲಿ ನೆಲೆಸಿದೆ. ಹೀಗಿರುವಾಗ ವಂದೇ ಮಾತರಂ ಬಗ್ಗೆ ಇಂದು ಏಕೆ ಚರ್ಚೆ ಆಗುತ್ತಿದೆ? ಏಕೆಂದರೆ, ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ ಸಮೀಪಿಸಿದೆ. ಮೋದಿಯವರು ಈಗ ಮೊದಲಿನಂತಿಲ್ಲ. ಅಷ್ಟಕ್ಕೂ, ಮೋದಿ ಎಷ್ಟು ವರ್ಷ ಪ್ರಧಾನಿಯಾಗಿದ್ದಾರೋ, ಜವಾಹರಲಾಲ್ ನೆಹರು ಅಷ್ಟು ವರ್ಷ ಜೈಲಿನಲ್ಲಿದ್ದರು. ವಂದೇ ಮಾತರಂ ಗೀತೆಯನ್ನು ಮೊದಲ ಬಾರಿ 1896ರಲ್ಲಿ ರವಿಂದ್ರನಾಥ ಟ್ಯಾಗೋರ್ ಹಾಡಿದ್ದರು. ಈ ಗೀತೆಯನ್ನು ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಗಿತ್ತೆ ಹೊರತು ಆರೆಸ್ಸೆಸ್ ಅಥವಾ ಹಿಂದೂ ಮಹಾಸಭಾ ಕಾರ್ಯಕ್ರಮದಲ್ಲಿ ಅಲ್ಲ.
| ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ನಾಯಕಿ