ವಂದೇ ಮಾತರಂ ಅನುರಣನ 
ದೇಶ

ವಂದೇ ಮಾತರಂ ಅನುರಣನ

ಶಾಲೆಗಳಲ್ಲಿ ‘ಜನಗಣಮನ’ ಕೇಳಿ, ‘ಭಾರತ ಮಾತಾ ಕೀ ಜೈ’ ಘೋಷಣೆ ಹಾಕುತ್ತಿದ್ದ ಮಕ್ಕಳಿಗೆ ಈಗ ಹೊಸ ಪುಳಕ. ರಾಷ್ಟ್ರಗೀತೆ ‘ಜನಗಣಮನ’ದ ಮುಂಚೆಯೇ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಮೊಳಗಲಿದೆ. ಅದೂ ಎಲ್ಲ ಆರು ಚರಣಗಳು ಎಂಬುದು ಗಮನಾರ್ಹ. ಕೇಂದ್ರದ ಗೃಹ ಸಚಿವಾಲಯ 2026ರ ಜನವರಿ 28ರಂದು ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ರಾಷ್ಟ್ರೀಯ ಗೀತೆಗೆ ಸಂಬಂಧಿಸಿದ ಹೊಸ ನಿಯಮಗಳನ್ನು ರೂಪಿಸಿದೆ. ಅದರಂತೆ. ಪರೇಡ್​ನಲ್ಲಿ ರಾಷ್ಟ್ರೀಯ ಧ್ವಜವನ್ನು ತರುತ್ತಿದ್ದಂತೆ ವಂದೇ ಮಾತರಂ ಗೀತೆಯನ್ನು ನುಡಿಸಲಾಗುತ್ತದೆ ಅಥವಾ ಹಾಡಲಾಗುತ್ತದೆ. ಧ್ವಜಾರೋಹಣದ ಸಮಯದಲ್ಲಿ ಆರು ಚರಣಗಳ ಈ ರಾಷ್ಟ್ರೀಯ ಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದ್ದು, ಇದಕ್ಕೆ 190 ಸೆಕೆಂಡ್ ಸಮಯ ಮಿತಿ ನಿಗದಿ ಪಡಿಸಲಾಗಿದೆ.

150 ವರ್ಷಗಳು ಪೂರ್ಣ

ವಂದೇ ಮಾತರಂ ಘೋಷಣೆ ಮತ್ತು ಗೀತೆ ಭಾರತದಲ್ಲಿ ಸೃಷ್ಟಿಸಿದ ಸಂಚಲನ ಅಸಾಧಾರಣ. ತಾಯ್ನಾಡನ್ನು ಸಾಕ್ಷಾತ್ ಭಗವತಿಯ ರೂಪದಲ್ಲಿ ಕಂಡು ವಂದಿಸುವ ಈ ಗೀತೆಯ ಪ್ರತಿ ಸಾಲು ದೇಶಭಕ್ತಿಯ ಅಮೃತವನ್ನು ಉಣಬಡಿಸುತ್ತದೆ. ಹಾಗಾಗಿಯೇ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕ್ರಾಂತಿಕಾರಿಗಳು ‘ವಂದೇ ಮಾತರಂ’ ಎಂದು ಹೆಮ್ಮೆಯಿಂದ ಘೋಷಿಸುತ್ತ, ನೇಣಿಗೆ ಕೊರಳೊಡ್ಡಿದರು. ಆ ಮೂಲಕ ಸ್ವಾತಂತ್ರ್ಯ ಹೋರಾಟದ ಪಥದಲ್ಲಿ ಮತ್ತೆ ಸಾವಿರಾರು ಕ್ರಾಂತಿಕಾರಿಗಳು ಸೇರಿಕೊಳ್ಳುತ್ತಿದ್ದರು. ಹೀಗೆ, ರಾಷ್ಟ್ರೀಯತೆಯ ಭಾವವನ್ನು ಬಡಿದೆಬ್ಬಿಸುವ ವಂದೇ ಮಾತರಂ ಗೀತೆಯನ್ನು ಬಂಕಿಮಚಂದ್ರ ಚಟರ್ಜಿ ಅವರು ರಚಿಸಿ 150 ವರ್ಷಗಳು ಪೂರ್ಣಗೊಂಡ ಬೆನ್ನಲ್ಲೇ, ವಂದೇ ಮಾತರಂಗೆ ಕವಿದಿದ್ದ ರಾಜಕೀಯ ಗ್ರಹಣವೂ ಮೋಕ್ಷ ಕಂಡಿದೆ. ದೇಶದ ಎಲ್ಲ ಸಾರ್ವಜನಿಕ ಸಮಾರಂಭ ಮತ್ತು ಶಾಲೆಗಳಲ್ಲಿ ವಂದೇ ಮಾತರಂ ನುಡಿಸಲು/ಹಾಡಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿರುವುದು ರಾಜಕೀಯ ಸಂಚಲನ ಮೂಡಿಸಿದೆ.

ಅಮರಗಾನ

ಹಿಂದೂ-ಮುಸ್ಲಿಂ ಸಂಖ್ಯಾ ಧಾರದಲ್ಲಿ 1905ರಲ್ಲಿ ಬಂಗಾಳವನ್ನು ವಿಭಜಿಸಲು ಹವಣಿಸಿದ ಕರ್ಜನ್​ನ ದುಸ್ಸಾಹಸದ ವಿರುದ್ಧ ದೇಶವಾಸಿ ಗಳನ್ನು ಒಗ್ಗೂಡಿಸಿದ್ದು ವಂದೇ ಮಾತರಂ ಘೊಷಣೆ. ವಂದೇ ಮಾತರಂ ಅದೆಷ್ಟು ಜನಪ್ರಿಯವಾಯಿತೆಂದರೆ ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರನ ಹುಟ್ಟು-ಸಂಘರ್ಷದ ಬದುಕು-ವೀರೋಚಿತ ಅಂತ್ಯಕ್ಕೆ ಈ ಮಂತ್ರದುಚ್ಚಾರ ಅನಿವಾರ್ಯವಾಗಿತ್ತು. ನಿಗಿನಿಗಿ ತಾರುಣ್ಯದ ಪರ್ವಕಾಲದಲ್ಲಿ ಹೌತಾತ್ಮ್ಯದ ಶಿಖರವೇರಿದ ಭಗತ್ ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ್ ಆಜಾದ್, ಮದನ್ ಲಾಲ್ ಧಿಂಗ್ರಾ ಮೊದಲಾದ ಸಹಸ್ರ ಸಹಸ್ರ ಕ್ರಾಂತಿಕಾರಿ ಕಂಠಗಳಿಂದ ಮೊಳಗಿದ ಅಮರಗಾನ ವಂದೇ ಮಾತರಂ. ಬಿಪಿನ್ ಚಂದ್ರಪಾಲ್, ಲಾಲಾ ಲಜಪತರಾಯರು ವಂದೇ ಮಾತರಂ ಹೆಸರಿನಲ್ಲಿ ಪುರವಣಿಗಳನ್ನು ಆರಂಭಿಸಿದರು.
ಅಂದಿನಿಂದ ಇಂದಿನವರೆಗೂ ದೇಶದ ಆಧ್ಯಾತ್ಮಿಕ ಅಖಂಡತೆ, ಅಸೀಮ ಪರಾಕ್ರಮ, ಸಾಂಸ್ಕೃತಿಕ ಅನನ್ಯತೆ, ರಾಷ್ಟ್ರೀಯ ದೃಷ್ಟಿಕೋನಗಳಿಗೆ ಬೆಳಕಾಗಿರುವುದು ಬಂಕಿಮರ ಲೇಖನಿಯಿಂದ ಮೂಡಿಬಂದ ವಂದೇ ಮಾತರಂ. ಬಂಕಿಮಚಂದ್ರರು ಮಾತೃಭೂಮಿಯನ್ನು ಆರಾಧ್ಯದೈವ ‘ದುರ್ಗಾ’ ಎಂಬಂತೆ ಭಾವಿಸಿ ಸ್ತೋತ್ರ ಮಾಡಿದ್ದಾರೆ. ಅವಳು ‘ಸುಜಲಾ’, ‘ಸುಫಲಾ’- ನಮಗೆ ನೀರನ್ನು (ಹಾಲು), ಆಹಾರವನ್ನು ಕೊಟ್ಟು ಸಾಕುತ್ತಿರುವವಳು; ಅವಳು ‘ಸುಮಧುರ ಭಾಷಿಣಿ’- ಅವಳ ಮಾತು ಹಿತ, ಪ್ರಿಯ. ಹಾಗೆಯೇ ಅವಳು ಖಡ್ಗ ಹಿಡಿದಿರುವ ‘ರಿಪುದಲವಾರಿಣಿ’ (ಶತ್ರು ಸಂಹಾರಕಳು). ಹಾಗಾಗಿಯೇ, ಈ ಗೀತೆ ಭಾರತದ ರಾಷ್ಟ್ರೀಯತೆಯ, ಸನಾತನ ಸಂಸ್ಕೃತಿಯ ದ್ಯೋತಕವಾಯಿತು.

ಹೊಸ ನಿಯಮಗಳು...

- ಸರ್ಕಾರದ ಅಧಿಕೃತ ಕಾರ್ಯಕ್ರಮ ಮತ್ತು ರಾಷ್ಟ್ರಪತಿಗಳ ಆಗಮನ ಹಾಗೂ ನಿರ್ಗಮನದ ಸಮಯದಲ್ಲಿ ಈ ಗೀತೆ ಅನುರಣಿಸಲಿದೆ.
- ದೂರದರ್ಶನ, ಆಕಾಶವಾಣಿಯಂಥ ಸರ್ಕಾರಿ ಮಾಧ್ಯಮ ವೇದಿಕೆಗಳಲ್ಲಿ ರಾಷ್ಟ್ರಪತಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ ಮೊದಲು ಮತ್ತು ನಂತರ ವಂದೇ ಮಾತರಂ ನುಡಿಸಲಾಗುತ್ತದೆ.
- ಭಾರತ ರತ್ನ ಮತ್ತು ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಂದೇ ಮಾತರಂ ನುಡಿಸಲಾಗುತ್ತದೆ.
- ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ಸಮಯದಲ್ಲಿ ಮೊದಲಿಗೆ ಸಾಮೂಹಿಕವಾಗಿ ವಂದೇ ಮಾತರಂ ಹಾಡುವುದು.

ಕ್ರಾಂತಿ ಸೃಷ್ಟಿಸಿದ ಕಾದಂಬರಿ

‘ಆನಂದಮಠ’ ಕಾದಂಬರಿ ಬರೆಯಲು ಪ್ರೇರಣೆ ಉತ್ತರ ಬಂಗಾಳದಲ್ಲಿ 1773-74ರಲ್ಲಿ ನಡೆದ ‘ಸಂನ್ಯಾಸಿ ವಿದ್ರೋಹ’ ಎಂದೇ ಪ್ರಸಿದ್ಧವಾಗಿರುವ ‘ಸಿಪಾಯಿ ದಂಗೆ’. ಆ ದಂಗೆಯಲ್ಲಿ ಭಾಗವಹಿಸಿದ ಆಯುಧಧಾರಿ ಸಿಪಾಯಿಗಳು ಸಂನ್ಯಾಸಿಗಳೇ ಆಗಿದ್ದರು. 1700ರ ಸುಮಾರಿನಲ್ಲಿ ಬಂಗಾಳವು ಮುಸ್ಲಿಮರ ವಶದಲ್ಲಿತ್ತು. ಆಗ ಅನೇಕ ಹಿಂದೂಗಳು ಬಲಾತ್ಕಾರದ ಮತಾಂತರಕ್ಕೆ ಒಳಗಾದರು ಅಥವಾ ಕೊಲೆಗೀಡಾದರು. ಹಲವು ದೇವಾಲಯಗಳು ನಾಶವಾದವು. ಮುಸ್ಲಿಮರನ್ನು ಸೋಲಿಸಿ ಇಂಗ್ಲಿಷರು ಬಂಗಾಳವನ್ನು ವಶಪಡಿಸಿಕೊಂಡರೂ ಹಿಂದಿನ ವಿಧ್ವಂಸಕ ಕಾರ್ಯ ಮುಂದುವರಿಯಿತು.
ಇದನ್ನು ನೋಡಿ ಕೋಪಾ ವಿಷ್ಟರಾದ ‘ನಾಗಾ’ ಸಂಪ್ರದಾಯದ ಸಂನ್ಯಾಸಿಗಳು ಅವರ ವಿರುದ್ಧ ದಂಗೆ ಎದ್ದು ಆಯುಧಧಾರಿಗಳಾಗಿ ತಿರುಗಿಬಿದ್ದರು. ಒಂದು ಕೈಯಲ್ಲಿ ‘ಶಾಸ್ತ್ರ’, ಇನ್ನೊಂದು ಕೈಯಲ್ಲಿ ‘ಶಸ್ತ್ರ’- ಇದು ಅವರ ನೀತಿಯಾಗಿತ್ತು. ಆ ‘ಸಿಪಾಯಿ ದಂಗೆ’ ವಿಫಲವಾದರೂ ಅದು ಜನರ ಮನಸ್ಸಿನ ಸಾತ್ವಿಕ ಕೋಪವನ್ನು ಹೆಚ್ಚಿಸಿ ಅವರಲ್ಲಿ ದೇಶಾಭಿಮಾನ ಮೂಡಲು ಕಾರಣವಾಯಿತು. ಅಂತಹ ‘ಸಿಪಾಯಿದಂಗೆ’ಯೇ ಒಂದು ರೀತಿಯಲ್ಲಿ ಬಂಕಿಮಚಂದ್ರರು ‘ಆನಂದಮಠ’ ಕಾದಂಬರಿ ಬರೆಯಲು ಕಾರಣವಾಯ್ತು. ಇದನ್ನು ಅವರೇ ಕೃತಿಯಲ್ಲಿ ಸೂಚಿಸಿದ್ದಾರೆ.

6 ಚರಣಗಳ ಸಂಪೂರ್ಣ ವಂದೇ ಮಾತರಂ ಗೀತೆ

1. ವಂದೇ ಮಾತರಂ
ಸುಜಲಾಂ, ಸುಫಲಾಂ, ಮಲಯಜ ಶೀತಲಾಂ,
ಸಸ್ಯಶ್ಯಾಮಲಾಂ, ಮಾತರಂ ||ವಂದೇ||
ಶುಭ್ರಜ್ಯೋತ್ಸಾ್ನ ಪುಲಕಿತಯಾಮಿನೀಂ,
ಫುಲ್ಲಕುಸುಮಿತ ದ್ರುಮದಲ ಶೋಭಿನೀಂ,
ಸುಹಾಸಿನೀಂ ಸುಮಧುರ ಭಾಷಿಣೀಂ,
ಸುಖದಾಂ ವರದಾಂ, ಮಾತರಂ
ವಂದೇ ಮಾತರಂ |
2. ಕೋಟಿ ಕೋಟಿ ಕಂಠ ಕಲಕಲ ನಿನಾದ-ಕರಾಲೇ,
ಕೋಟಿ ಕೋಟಿ ಭುಜೈರ್ಧೃತ-ಖರ-ಕರವಾಲೇ,
ಅಬಲಾ ಕೇನ ಮಾ ಏತೋ ಬಲೇ?
ಬಹುಬಲ ಧಾರಿಣೀಂ ನಮಾಮಿ ತಾರಿಣೀಂ,
ರಿಪುದಲ-ವಾರಿಣೀಂ ಮಾತರಂ
ವಂದೇ ಮಾತರಂ|
3. ತುಮಿ ವಿದ್ಯಾ, ತುಮಿ ಧರ್ಮ,
ತುಮಿ ಹೃದಿ, ತುಮಿ ಮರ್ಮ,
ತ್ವಂ ಹಿ ಪ್ರಾಣಾಃ ಶರೀರೇ
ಬಾಹುತೇ ತುಮಿ ಮಾ ಶಕ್ತಿ,
ಹೃದಯೇ ತುಮಿ ಮಾ ಭಕ್ತಿ,
ತೋಮಾರೈ ಪ್ರತಿಮಾ ಗಡಿ ಮಂದಿರೇ-ಮಂದಿರೇ ವಂದೇ ಮಾತರಂ |
4 ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣೀ,
ಕಮಲಾ ಕಮಲದಲ ವಿಹಾರಿಣೀ,
ವಾಣೀ ವಿದ್ಯಾದಾಯಿನೀ, ನಮಾಮಿ ತ್ವಾಮ್
ನಮಾಮಿ ಕಮಲಾಂ ಅಮಲಾಂ ಅತುಲಾಂ,
ಸುಜಲಾಂ ಸುಫಲಾಂ ಮಾತರಂ| ವಂದೇ ಮಾತರಂ
5. ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ,
ಧರಣೀಂ ಭರಣೀಂ ಮಾತರಂ ವಂದೇ ಮಾತರಂ|
6. ವಂದೇ ಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ,
ಸಸ್ಯಶ್ಯಾಮಲಾಂ ಮಾತರಂ ವಂದೇ ಮಾತರಂ|

ಇತಿಹಾಸದ ಹಾದಿ

1. 1875ರ ನವೆಂಬರ್ 7ರಂದು ಬಂಕೀಮ ಚಂದ್ರರಿಂದ ‘ವಂದೇ ಮಾತರಂ’ ಗೀತೆ ರಚನೆ.
2. 1882ರಲ್ಲಿ ಬಂಕೀಮಚಂದ್ರರಿಂದ ರಚಿತ ‘ಅನಂದಮಠ’ ಕಾದಂಬರಿಯಲ್ಲಿ ಪ್ರಕಟ.
3. ‘ಬಂಗದರ್ಶನ’ ಪತ್ರಿಕೆಯಲ್ಲಿ ‘ವಂದೇ ಮಾತರಂ’ ಪ್ರಕಟವಾಗುತ್ತಿದ್ದಂತೆ ಜನಸಾಮಾನ್ಯರ ನಡುವೆ ಪ್ರಸಿದ್ಧವಾಯಿತು.
4. 1896ರಲ್ಲಿ ರವೀಂದ್ರನಾಥ ಟ್ಯಾಗೋರ್ ವಂದೇ ಮಾತರಂ ಗೀತೆ ಹಾಡಿದರು. ಬಳಿಕ, ಸ್ವಾತಂತ್ರ್ಯ ಆಂದೋಲನಕ್ಕೆ ಈ ಗೀತೆ-ಘೋಷಣೆ ಹೊಸ ಶಕ್ತಿಯನ್ನೇ ತುಂಬಿತು.
5. ಖ್ಯಾತ ಗಾಯಕ ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್ 1896ರಲ್ಲಿ ಕಲ್ಕತ್ತದ ಸಾರ್ವಜನಿಕ ಸಭೆಯಲ್ಲಿ ‘ಕಾಪಿ ಬಂಗಿಯಾ’ ರಾಗದಲ್ಲಿ ಹಾಡಿದ ವಂದೇ ಮಾತರಂ ಬಹುಜನಪ್ರಿಯವಾಯಿತು.
6. 1900ರ ಸುಮಾರಿಗೆ ವಂದೇ ಮಾತರಂ ಕೋಲ್ಕತ್ತದ ಗಡಿ ದಾಟಿ ಭಾರತದ ಹಳ್ಳಿ-ಹಳ್ಳಿಗಳಿಗೂ ತಲುಪಿತು. ಚಳವಳಿಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಈ ಗೀತೆ ಅನುರಣಿಸತೊಡಗಿತು. ಮಹಿಳೆಯರು ಮದುವೆ ಸಮಾರಂಭಗಳಲ್ಲೂ ಸುಶ್ರಾವ್ಯ ಕಂಠದಲ್ಲಿ ವಂದೇ ಮಾತರಂ ಹಾಡತೊಡಗಿದರು.
7. 1905ರ ಹೊತ್ತಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ‘ವಂದೇ ಮಾತರಂ’ ಬಹು ಜನಪ್ರಿಯವಾಯಿತು. ಯುವ ಕ್ರಾಂತಿಕಾರಿಗಳನ್ನು ಆಕರ್ಷಿಸಿತು.
8. 1938ರಲ್ಲಿ ಮುಸ್ಲಿಂ ಲೀಗ್ ಅಧ್ಯಕ್ಷ ಮೊಹಮ್ಮದ್ ಅಲಿ ಜಿನ್ನಾ ಅವರಿಂದ ‘ವಂದೇ ಮಾತರಂ’ಗೆ ವಿರೋಧ. ಪರಿಣಾಮವಾಗಿ, ರೇಡಿಯೋದಲ್ಲಿ ವಂದೇ ಮಾತರಂ ಪ್ರಸಾರ ನಿಂತುಹೋಯಿತು.
9. 1947ರಲ್ಲಿ ಮತ್ತೆ ರೇಡಿಯೋದಲ್ಲಿ ಪ್ರಸಾರ ಆರಂಭವಾಯಿತು.
10. 1950ರಲ್ಲಿ ಈ ಗೀತೆಯನ್ನು ಪೂರ್ಣಪ್ರಮಾಣದಲ್ಲಿ ದೇಶದ ರಾಷ್ಟ್ರೀಯ ಗೀತೆ ಎಂದು ಅಂಗೀಕರಿಸಲಾಯಿತು.
11. 2025: ವಂದೇ ಮಾತರಂ ಗೀತೆ ರಚನೆಯಾಗಿ 150 ವರ್ಷ. ಕೇಂದ್ರ ಸರ್ಕಾರ ಇದರ ನೆನಪಿನಲ್ಲಿ ನಾಣ್ಯ ಮತ್ತು ಅಂಚೆಚೀಟಿ ಬಿಡುಗಡೆ ಮಾಡಿತು. ಅಲ್ಲದೆ, 2025ರ ಡಿಸೆಂಬರ್​ನಲ್ಲಿ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ವಂದೇ ಮಾತರಂ ಕುರಿತಂತೆ ವಿಶೇಷ ಚರ್ಚೆ ನಡೆಯಿತು.
12. ಶಾಲೆಗಳು ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ವಂದೇ ಮಾತರಂ ಹಾಡಲು 2026ರ ಫೆಬ್ರವರಿ 11ರಂದು ಆದೇಶ ಹೊರಡಿಸಿದ ಕೇಂದ್ರ ಸರ್ಕಾರ.

ಅಧಿಕೃತ ಮಾನ್ಯತೆ

ಭಾರತಕ್ಕೆ ಸ್ವಾತಂತ್ರ್ಯ ದೊರಕಿದ (15.08.1947) ಬಳಿಕ 26.01.1950ರಂದು ರವೀಂದ್ರನಾಥ ಟ್ಯಾಗೋರರ ‘ಜನಗಣಮನ ಅಧಿನಾಯಕ ಜಯಹೇ| ಭಾರತ ಭಾಗ್ಯವಿಧಾತ’ ಮತ್ತು ಬಂಕಿಮಚಂದ್ರರ ‘ವಂದೇ ಮಾತರಂ’ ಕವನಗಳನ್ನು ಭಾರತದ ಅಧಿಕೃತ ಗೀತೆಗಳೆಂದು ಸಂವಿಧಾನವು ಒಪ್ಪಿಕೊಂಡು ಒಂದನ್ನು ‘"National Anthem' ಎಂದೂ, ಇನ್ನೊಂದನ್ನು "National Song' ಎಂದೂ ಗುರುತಿಸಿ, ಎರಡಕ್ಕೂ ಸಮಾನಗೌರವದ ಸ್ಥಾನ ನೀಡಿತು.