ಪ್ರಧಾನಿ ಮೋದಿ 
ದೇಶ

ವಂದೇ ಮಾತರಂ ಸ್ವಾತಂತ್ರ್ಯ ಹೋರಾಟದ ಸ್ಪೂರ್ತಿ; ಬಂಗಾಳ ಒಡೆಯುವ ಬ್ರಿಟಿಷ್ ನೀತಿ ವಿರುದ್ಧ ಬಂಡೆಯಂತೆ ನಿಂತಿತು: ಪ್ರಧಾನಿ ಮೋದಿ | PM Modi

ನವದೆಹಲಿ: ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ವಂದೇ ಮಾತರಂ ಗೀತೆ ಭಾರತಕ್ಕೆ ಶಕ್ತಿ ಮತ್ತು ಸ್ಫೂರ್ತಿ ನೀಡಿತು. ಬಂಗಾಳ ಒಡೆಯುವ ಬ್ರಿಟಿಷರ ನೀತಿ ವಿರುದ್ಧ ಬಂಡೆಯಂತೆ ನಿಂತಿತು ಎಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ(PM Modi) ಹೇಳಿದ್ದಾರೆ.
ರಾಷ್ಟ್ರೀಯ ಗೀತೆ ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಅಂಗವಾಗಿ ಇಂದು(ಡಿ. 08) ಲೋಕಸಭೆಯಲ್ಲಿ 10 ಗಂಟೆಗಳ ಚರ್ಚೆಯನ್ನು ಪ್ರಾರಂಭಿಸಿ ಮಾತನಾಡಿದ ಅವರು, ವಂದೇ ಮಾತರಂನ 150 ವರ್ಷಗಳನ್ನು ವೀಕ್ಷಿಸುತ್ತಿರುವುದು ದೇಶಕ್ಕೆ ಮಹಾ ಹೆಮ್ಮೆಯ ವಿಷಯ. ಹಾಡಿನ ಸಂದೇಶವು ಇಂದಿಗೂ ಪ್ರತಿಧ್ವನಿಸುತ್ತಿದೆ, ಭಾರತದ ಸಾಂಸ್ಕೃತಿಕ ಪರಂಪರೆ, ಸಾಮೂಹಿಕ ಸಂಕಲ್ಪ ಹಾಗೂ ಸ್ವಾತಂತ್ರ್ಯವನ್ನು ಪಡೆಯಲು ಮಾಡಿದ ತ್ಯಾಗಗಳನ್ನು ನಾಗರಿಕರಿಗೆ ನೆನಪಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ವಂದೇ ಮಾತರಂ ಅನ್ನು ಬ್ರಿಟಿಷ್ ಆಡಳಿತಗಾರರು ತಮ್ಮ 'ಗಾಡ್ ಸೇವ್ ದಿ ಕ್ವೀನ್' ಗೀತೆಯನ್ನು ಪ್ರತಿ ಮನೆಗೂ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದ ಸಮಯದಲ್ಲಿ ಬರೆಯಲಾಯಿತು. ಲಕ್ಷಾಂತರ ಜನ ಅದನ್ನು ಜಪಿಸಿದ್ದರಿಂದ ನಾವು ಇಲ್ಲಿ ಕುಳಿತಿದ್ದೇವೆ. ಅಂತಹ ರಾಷ್ಟ್ರೀಯ ಗೀತೆಯನ್ನು ಈ ಸದನದಲ್ಲಿ ನೆನಪಿಸಿಕೊಳ್ಳುವುದು ನಮ್ಮೆಲ್ಲರಿಗೂ ಒಂದು ದೊಡ್ಡ ಸೌಭಾಗ್ಯ ಎಂದು ತಿಳಿಸಿದ್ದಾರೆ.
ವಂದೇ ಮಾತರಂ 50 ವರ್ಷಗಳನ್ನು ಪೂರೈಸಿದಾಗ ದೇಶವು ವಸಾಹತುಶಾಹಿ ಆಳ್ವಿಕೆಯಲ್ಲಿತ್ತು. ಆದರೆ 100ನೇ ವಾರ್ಷಿಕೋತ್ಸವದಂದು ರಾಷ್ಟ್ರವು ತುರ್ತು ಪರಿಸ್ಥಿತಿಯಲ್ಲಿತ್ತು. ಆ ಸಮಯದಲ್ಲಿ ಸಂವಿಧಾನವನ್ನು ಕತ್ತರಿಸಲಾಯಿತು ಮತ್ತು ತುರ್ತು ಪರಿಸ್ಥಿತಿಯಿಂದ ದೇಶವು ಸರಪಳಿಯಲ್ಲಿ ಬಂಧಿಸಲ್ಪಟ್ಟಿತು ಎಂದು ಹೇಳಿದ್ದಾರೆ. 
ಇದೇ ವೇಳೆ ಗೀತೆಯಲ್ಲಿ ಕೆಲವು ಬದಲಾವಣೆ ಮಾಡಿದ್ದಕ್ಕೆ ಮಾಜಿ ಪ್ರಧಾನಿ ನೆಹರೂ ವಿರುದ್ಧ ಟೀಕಿಸಿದ ಅವರು, ವಂದೇ ಮಾತರಂ ಮುಸ್ಲಿಮರನ್ನು ಪ್ರಚೋದಿಸಬಹುದು ಎಂದು ನೆಹರೂ ಹೇಳಿದ್ದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಬರೆದ ಪತ್ರದಲ್ಲಿ ಬರೆದಿದ್ದಾರೆ. ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ಒತ್ತಡದಿಂದ ಹಾಡನ್ನು ಬದಲಾವಣೆ ಮಾಡಲಾಯಿತು. ಈ ಶರಣಾಗತಿ ಅಂತಿಮವಾಗಿ ಭಾರತ ಮತ್ತು ಪಾಕಿಸ್ತಾನ ವಿಭಜನೆಗೆ ಕಾರಣವಾಯಿತು  ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).