ಸಿಎಂ ವಿ.ಡಿ.ಸತೀಶನ್ ಮತ್ತು ಪಿಣರಾಯಿ ವಿಜಯನ್
ತಿರುವನಂತಪುರಂ: ಕೇರಳಂ ವಿಧಾನಸಭೆy ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ವೇಳೆ ವಂದೇ ಮಾತರಂ ಗೀತೆಯನ್ನು(Vande Mataram) ಪೂರ್ಣವಾಗಿ ಹಾಡದಿರುವುದು ವಿವಾದಕ್ಕೀಡಾಗಿದ್ದು, ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಆಡಳಿತರೂಢ ಯುಡಿಎಫ್ ಮತ್ತು ವಿಪಕ್ಷ ಎಲ್ಡಿಎಫ್ ಎರಡೂ ಪೂರ್ಣವಾಗಿ ಹಾಡದಿರುವುದನ್ನು ಸಮರ್ಥಿಸಿಕೊಂಡಿವೆ.
ಈ ಕುರಿತು ಮಾತನಾಡಿರುವ ಯುಡಿಎಫ್ ಮುಖ್ಯಸ್ಥ ಮತ್ತು ಸಿಎಂ ವಿ.ಡಿ.ಸತೀಶನ್, ರಾಷ್ಟ್ರಗೀತೆ ವಂದೇ ಮಾತರಂ ಅನ್ನು ಪೂರ್ಣವಾಗಿ ಹಾಡುವುದು ಕಡ್ಡಾಯವಲ್ಲ ಏಕೆಂದರೆ ಆ ನಿಟ್ಟಿನಲ್ಲಿ ಸಂಸತ್ತು ಯಾವುದೇ ಕಾನೂನು ಜಾರಿಗೆ ತಂದಿಲ್ಲ. ಕೇವಲ ಸಂಸತ್ತೂ ರೂಪಿಸಿದ ಮಾರ್ಗಸೂಚಿಗಳಿವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಅದರ ಮೈತ್ರಿಕೂಟ ಯುಡಿಎಫ್ ರಾಜಕೀಯ ಸಿದ್ಧಾಂತದ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತದೆ. ಮತ್ತು ಪಕ್ಷದ ಕೇಂದ್ರ ನಾಯಕತ್ವದ ನಿರ್ಧಾರಗಳ ಪ್ರಕಾರ ಆಡಳಿತ ನಡೆಸುತ್ತದೆ. ಕೇಂದ್ರ ನಾಯಕತ್ವವು ಈ ವಿಷಯದ ಬಗ್ಗೆ ಸ್ಪಷ್ಟವಾದ ನಿಲುವನ್ನು ಹೊಂದಿದೆ. ಮತ್ತು ಅದು ಮೈತ್ರಿಕೂಟಕ್ಕೂ ಅನ್ವಯಿಸುತ್ತದೆ ಎಂದಿದ್ದಾರೆ.
ಇನ್ನೂ ಪ್ರಮುಖ ವಿರೋಧ ಪಕ್ಷದ ಕೂಟ ಎಲ್ಡಿಎಫ್ ಕೂಡ ಪೂರ್ಣವಾಗಿ ಹಾಡದಿರುವುದನ್ನು ಸಮರ್ಥಸಿದೆ. ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ಮಾತನಾಡಿದ್ದು, ವಂದೇ ಮಾತರಂ ಗೀತೆಯನ್ನು ಪೂರ್ಣ ಪ್ರಮಾಣದಲ್ಲಿ ಹಾಡುವ ಅಗತ್ಯವಿಲ್ಲ ಎಂದು ಈ ಹಿಂದೆಯೇ ಸ್ಪಷ್ಟಪಡಿಸಲಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಬೇರೆ ಯಾವುದೇ ಅಡೆತಡೆಗಳಿಲ್ಲ. ವಾಸ್ತವವಾಗಿ, ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಾಗ ಎದ್ದು ನಿಲ್ಲುವ ಅಗತ್ಯವೂ ಇಲ್ಲ ಎಂದಿದ್ದಾರೆ.
ವಂದೇ ಮಾತರಂ ಗೀತೆಯ ಪೂರ್ಣ ಆವೃತ್ತಿಯನ್ನು ಹಾಡುವುದು ಆರ್‌ಎಸ್‌ಎಸ್ ಕಾರ್ಯಸೂಚಿಯ ಭಾಗವಾಗಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಇಡೀ ಗೀತೆಯನ್ನು ಹಾಡಲಾಗಿತ್ತು, ಅದು ಆಗಬಾರದಾಗಿತ್ತು. ಆ ಅನುಭವದ ನಂತರ, ಸರ್ಕಾರವು ಕಠಿಣ ನಿರ್ಧಾರ ಕೈಗೊಂಡಿರುವಂತೆ ತೋರುತ್ತಿದೆ. ಇದೇ ನಿಲುವನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಅಸಮಾಧಾನ ವ್ಯಕ್ತಪಡಿಸಿದ್ದ ರಾಜ್ಯಪಾಲ
ಕೇರಳ ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ಮೊದಲು ಮತ್ತು ನಂತರ ಬ್ಯಾಂಡ್ ತಂಡವು 'ವಂದೇ ಮಾತರಂ' ಹಾಡಿನ ಮೊದಲ ಚರಣಗಳನ್ನು ಮಾತ್ರ ನುಡಿಸಿತು. ಇದು ರಾಜ್ಯಪಾಲರ ಅಸಮಾಧಾನಕ್ಕೆ ಕಾರಣವಾಯಿತು.
ವಿಧಾನಸಭೆಯಿಂದ ಹೊರಬಂದು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಪಾಲರು, ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡುವುದು ಶಿಷ್ಟಚಾರ. ರಾಜ್ಯಪಾಲರು ಹಾಜರಿದ್ದಾಗಲೆಲ್ಲಾ ವಂದೇ ಮಾತರಂನ ಸಂಪೂರ್ಣ ಹಾಡನ್ನು ಹಾಡಬೇಕು. ಆದರೆ ಈ ವೇಳೆ ಆ ಹಾಡನ್ನು ಹಾಡಲಾಗಿಲ್ಲ, ಕೇವಲ ನುಡಿಸಲಾಯಿತು. ವಿಧಾನಸಭಾ ಸ್ಪೀಕರ್ ತಿರುವಂಚೂರು ರಾಧಾಕೃಷ್ಣನ್ ಜೊತೆ ಮಾತನಾಡಿದ್ದೇನೆ. ಮುಂದೆ ಸರಿಪಡಿಸಿಕೊಳ್ಳುತ್ತಾರೆ ಅಂದುಕೊಂಡಿದ್ದೇವೆ ಮತ್ತು ಏನಾಗುತ್ತದೆ ಕಾದು ನೋಡೋಣ ಎಂದು ಹೇಳಿದ್ದರು (ಏಜೆನ್ಸೀಸ್)