ಅಮಿತ್ ಶಾ ಮತ್ತು ಸೋನಿಯಾ ಗಾಂಧಿ  
ದೇಶ

ವಂದೇ ಮಾತರಂ ವಿವಾದ; ಇದು ನಿಜವಾದ ಸಮಸ್ಯೆಗಳಿಂದ ಬೇರೆಡೆ ಸೆಳೆಯುವ ತಂತ್ರ: ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಆಕ್ರೋಶ | Congress

ನವದೆಹಲಿ: ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ವಂದೇ ಮಾತರಂ ಹಾಡಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಡ್ಡಿಪಡಿಸಿದ್ದಾರೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್(Congress), ಇದು ನಿಜವಾದ ಸಮಸ್ಯೆಗಳು ಮತ್ತು ಸರ್ಕಾರದ ಬೃಹತ್ ವೈಫಲ್ಯಗಳಿಂದ ಬೇರೆಡೆ ಸೆಳೆಯುವ ತಂತ್ರ ಎಂದು ಕಿಡಿಕಾರಿದೆ.
ಈ ಕುರಿತು ಎಕ್ಸ್​ನಲ್ಲಿ ಅಮಿತ್ ಶಾ ಹೆಸರು ಉಲ್ಲೇಖಿಸದೇ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, 2024 ಡಿಸೆಂಬರ್ 17ರಂದು ರಾಜ್ಯಸಭೆಯಲ್ಲಿ ಡಾ. ಅಂಬೇಡ್ಕರ್ ಅವರನ್ನು ಅವಮಾನಿಸಿದ ವ್ಯಕ್ತಿ. 2002 ಜನವರಿ ತಿಂಗಳವರೆಗೆ ತಮ್ಮ ಪ್ರಧಾನ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದು ಸೂಕ್ತವೆಂದು ಭಾವಿಸದ ಸಿದ್ಧಾಂತದಿಂದ ಬಂದ ವ್ಯಕ್ತಿ.
ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಯುವಕರ ವಿರುದ್ಧ ದೆಹಲಿ ಪೊಲೀಸರ ಕ್ರೌರ್ಯಕ್ಕೆ ನೇರ ಹೊಣೆಗಾರನಾಗಿರುವ ವ್ಯಕ್ತಿ. ಈಗ ನಿಜವಾದ ಸಮಸ್ಯೆಗಳು ಮತ್ತು ತನ್ನ ಮತ್ತು ತನ್ನ ಯಜಮಾನನ ಬೃಹತ್ ವೈಫಲ್ಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್‌ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಮಿತ್ ಶಾ ಹೇಳಿದ್ದೇನು?

ರಾಜಸ್ಥಾನದ ಚಿತ್ತೋರಗಢದಲ್ಲಿ ನಡೆದ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್​ ಷಾ, ಸ್ವಾತಂತ್ರ್ಯ ದಿನಾಚರಣೆಯಂದು ಸೋನಿಯಾ ಮತ್ತು ಕಾಂಗ್ರೆಸ್ ರಾಷ್ಟ್ರಗೀತೆಯನ್ನು ಅಪಮಾನಗೊಳಿಸಿದ್ದು, ಅವರು ಇಡೀ ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತಾ, ವೋಟ್ ಬ್ಯಾಂಕ್ ರಾಜಕಾರಣದ ಆಸೆಯಿಂದ ಕಾಂಗ್ರೆಸ್ ವಂದೇ ಮಾತರಂ ಅನ್ನು ಮರೆತಿದೆ ಎಂದು ಕಿಡಿಕಾರಿದ್ದರು.

ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯಲ್ಲಿ ವಂದೇ ಮಾತರಂ ಗೀತೆಯನ್ನು ಹಾಡಲಾಗುತ್ತಿತ್ತು, ಈ ಸಮಯದಲ್ಲಿ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ಗಾಯನವನ್ನು ನಿಲ್ಲಿಸುವಂತೆ ಎಐಸಿಸಿ ಅಧ್ಯಕ್ಷರಿಗೆ ಹೇಳಿದರು ಎಂದು ಷಾ ಆರೋಪಿಸಿದರು. ನಾವೆಲ್ಲರೂ ಟಿವಿಯಲ್ಲಿ ನೋಡುತ್ತಿದ್ದೆವು, ಸೋನಿಯಾ ಜೀ, 140 ಕೋಟಿ ಜನರು ನಿಮ್ಮನ್ನು ನೋಡುತ್ತಿದ್ದಾರೆ. ನೀವು ಮಾಡಿದ ಈ ಪಾಪವನ್ನು ಈ ದೇಶದ ಜನ ಎಂದಿಗೂ ಕ್ಷಮಿಸುವುದಿಲ್ಲ. ವಂದೇ ಮಾತರಂ ಗೀತೆಯನ್ನು ಅಪೂರ್ಣವಾಗಿ ಬಿಡುವ ಕನಸನ್ನು ಯಾರಾದರೂ ಹೇಗೆ ಕಾಣಲು ಸಾಧ್ಯ..? ಕಾಂಗ್ರೆಸ್‌ನ ಜನರು ನಾಚಿಕೆಪಡಬೇಕು ಎಂದು ಅವರು ವಾಗ್ದಾಳಿ ನಡೆಸಿದ್ದರು (ಏಜೆನ್ಸೀಸ್).