- ವಂದೇ ಭಾರತ್ ಸ್ಲೀಪರ್: ಪ್ರೀಮಿಯಂ ರೈಲಿನಲ್ಲಿ ಕಳಪೆ ಆಹಾರ, ಪ್ರಯಾಣಿಕರ ಪ್ರತಿಭಟನೆ!
- ಕಮಾಖ್ಯ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ನಲ್ಲಿ ವೈರಲ್ ಆದವು ಫೋಟೋಗಳು
- ಊಟದ ವ್ಯತ್ಯಾಸದ ಆರೋಪ ತಳ್ಳಿಹಾಕಿದ ರೈಲ್ವೆ; 'ಸೈಕ್ಲಿಕ್ ಮೆನು' ಅನ್ವಯವೇ ಆಹಾರ ವಿತರಣೆ
ಬೆಂಗಳೂರು: ದೇಶದ ಮೊದಲ 'ವಂದೇ ಭಾರತ್ ಸ್ಲೀಪರ್' ರೈಲಿನಲ್ಲಿ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಮತ್ತು ಪ್ರಮಾಣದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದ್ದ ಟೀಕೆಗಳಿಗೆ ಐಆರ್‌ಸಿಟಿಸಿ (IRCTC) ಅಧಿಕೃತ ಸ್ಪಷ್ಟನೆ ನೀಡಿದೆ.
ಹೌದು, ಉದ್ಘಾಟನಾ ದಿನದ ಊಟಕ್ಕೂ ಮತ್ತು ಸಾಮಾನ್ಯ ದಿನದ ಊಟಕ್ಕೂ ಭಾರಿ ವ್ಯತ್ಯಾಸವಿದೆ ಎಂಬ ಪ್ರಯಾಣಿಕರ ಆರೋಪವನ್ನು ಇಲಾಖೆ ಇದೀಗ ತಳ್ಳಿಹಾಕಿದೆ.
ಐಆರ್‌ಸಿಟಿಸಿ ನೀಡಿದ ಸಮರ್ಥನೆ
ಪ್ರಯಾಣಿಕರೊಬ್ಬರು ಹಂಚಿಕೊಂಡಿದ್ದ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಐಆರ್‌ಸಿಟಿಸಿ, "ರೈಲಿನಲ್ಲಿ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸ ಮಾಡಲಾಗಿಲ್ಲ. ಉದ್ಘಾಟನಾ ಸಂಚಾರ ಮತ್ತು ಸಾಮಾನ್ಯ ಸಂಚಾರ ಎರಡರಲ್ಲೂ ಒಂದೇ ರೀತಿಯ ಸೇವೆಯನ್ನು ನೀಡಲಾಗುತ್ತಿದೆ," ಎಂದು ತಿಳಿಸಿದೆ.
ರೈಲ್ವೆ ಇಲಾಖೆಯ ಪ್ರಕಾರ, ನಿಗದಿಪಡಿಸಿದ 'ಸೈಕ್ಲಿಕ್ ಮೆನು' (Cyclic Menu) ಅನ್ವಯವೇ ಆಹಾರ ಪೂರೈಕೆಯಾಗುತ್ತಿದೆ. ಇದರಲ್ಲಿ ಬೇಳೆ ಸಾರು (ದಾಲ್), ಅನ್ನ ಅಥವಾ ಪುಲಾವ್, ಪನೀರ್ ಅಥವಾ ತರಕಾರಿ ಗ್ರೇವಿ, ಒಣ ಪಲ್ಯ, ಚಪಾತಿ ಅಥವಾ ಪರೋಟ ಮತ್ತು ಸಿಹಿ ತಿಂಡಿಗಳನ್ನು ಒಳಗೊಂಡ ಸಂಪೂರ್ಣ ಊಟವನ್ನು ಪ್ರಯಾಣಿಕರಿಗೆ ನೀಡಲಾಗುತ್ತಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಕಮಾಖ್ಯ-ಹೌರಾ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಪ್ರಯಾಣಿಸಿದ ಕೆಲವರು, ತಮಗೆ ನೀಡಲಾದ ಆಹಾರವು ಕಳಪೆಯಾಗಿದೆ ಮತ್ತು ಪ್ರಮಾಣವು ಅತ್ಯಲ್ಪವಾಗಿದೆ ಎಂದು ಫೋಟೋ ಸಹಿತ 'X' ನಲ್ಲಿ ದೂರಿದ್ದರು. ಉದ್ಘಾಟನಾ ದಿನದಂದು ನೀಡಲಾದ ಅದ್ದೂರಿ ಊಟಕ್ಕೂ, ನಂತರದ ದಿನಗಳಲ್ಲಿ ನೀಡುತ್ತಿರುವ ಸಾಧಾರಣ ಊಟಕ್ಕೂ ಹೋಲಿಕೆ ಮಾಡಿ ರೈಲ್ವೆ ಇಲಾಖೆಯನ್ನು ಪ್ರಶ್ನಿಸಿದ್ದರು. ರೊಟ್ಟಿಗಳು ಗಟ್ಟಿಯಾಗಿವೆ ಮತ್ತು ದಾಲ್ ಚೆಲ್ಲಿ ಹೋಗಿದೆ ಎಂಬ ದೂರುಗಳು ಕೇಳಿಬಂದಿದ್ದವು.
ಆಹಾರದ ಮೆನು ಬಗ್ಗೆ ಸ್ಪಷ್ಟನೆ ನೀಡಿದ್ದರೂ, ಪ್ರಯಾಣಿಕರು ಸಿಬ್ಬಂದಿಯ ಗೊಂದಲ ಮತ್ತು ಊಟ ವಿತರಣೆಯಲ್ಲಿನ ವಿಳಂಬದ ಬಗ್ಗೆ ಅಸಮಾಧಾನ ಮುಂದುವರಿಸಿದ್ದಾರೆ. ಪ್ರೀಮಿಯಂ ದರ ಪಾವತಿಸುವ ಪ್ರಯಾಣಿಕರಿಗೆ ದೂರು ನೀಡಲು ಅವಕಾಶವಿಲ್ಲದಂತೆ ಸೇವೆ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಸದ್ಯಕ್ಕೆ ಐಆರ್‌ಸಿಟಿಸಿ ತನ್ನ ಆಹಾರ ಪದ್ಧತಿಯನ್ನು ಸಮರ್ಥಿಸಿಕೊಂಡಿದ್ದು, ಸೇವೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಭರವಸೆ ನೀಡಿದೆ,(ಏಜೆನ್ಸೀಸ್).