- ವಂದೇ ಭಾರತ್ ರೈಲಿನಲ್ಲಿ ಸಿಗುವ ಆಹಾರದಲ್ಲಿ ಹುಳು ಪತ್ತೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡ ಪ್ರಯಾಣಿಕ
- ಸೇವಾ ಪೂರೈಕೆದಾರರಿಗೆ ಹತ್ತು ಲಕ್ಷ ದಂಡ ವಿಧಿಸಿದ ಐಆರ್ಸಿಟಿಸಿ
- ಆಹಾರ ಪೂರೈಕೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಯಾಣಿಕನಿಂದ ಒತ್ತಾಯ
Vande Bharat Passenger Finds Insect: ವೇಗಕ್ಕೆ, ಸ್ವಚ್ಛತೆಗೆ ಹೆಸರಾದ ವಂದೇ ಭಾರತ್ ರೈಲಿನಲ್ಲಿ ಇತ್ತೀಚೆಗೆ ಆಹಾರದಲ್ಲಿ ನೈರ್ಮಲ್ಯತೆ ಕಾಣದ ಬಗ್ಗೆ ಪ್ರಯಾಣಿಕರು ಆಕ್ರೋಶ ಹೊರ ಹಾಕುತ್ತಲೇ ಇದ್ದಾರೆ. ರೈಲ್ವೆ ಇಲಾಖೆಯೂ ಸಹ ಈ ಬಗ್ಗೆ ಕ್ರಮ ಕೈಗೊಂಡು ದಂಡ ವಿಧಿಸುತ್ತಿದೆ. ತುರ್ತು ಕ್ರಮ ಕೈಗೊಳ್ಳುತ್ತಿದ್ದರೂ ಸಹ ಸಮಸ್ಯೆಗೆ ಕೊನೆ ಮಾತ್ರ ಕಾಣುತ್ತಿಲ್ಲ.
ಕಳೆದ ಕೆಲ ವಾರದ ಹಿಂದೆಯೂ ವ್ಯಕ್ತಿಯೊಬ್ಬ ಆಹಾರದಲ್ಲಿ ಕಂಡ ಹುಳದ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡು ಕಿಡಿಕಾರಿದ್ದ, ಸದ್ಯ ಅಹಮದಾಬಾದ್ನಿಂದ ಮುಂಬೈಗೆ ವಂದೇ ಭಾರತ್ ಪ್ರಯಾಣಿಸುತ್ತಿದ್ದ ಆದಿತ್ಯ ದಿದ್ವಾನಿಯಾ ಅವರು ದಾಲ್ ಆಹಾರವನ್ನು ಆರ್ಡರ್ ಮಾಡಿಕೊಂಡಿದ್ದರು. ಅದರಲ್ಲಿ ಹುಳ ಕಂಡುಬಂದಿದೆ ಎಂದು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಜೊತೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಭಾರತೀಯ ರೈಲ್ವೆ ಇಲಾಖೆಯನ್ನು ಟ್ಯಾಗ್ ಮಾಡಿದ್ದಾರೆ.
ಆದಿತ್ಯ ಪೋಸ್ಟ್ನಲ್ಲಿ ಏನಿದೆ?
ಆದಿತ್ಯ ದಿದ್ವಾನಿಯಾ ಅವರು ಹಂಚಿಕೊಂಡಿರುವ ಪೋಸ್ಟ್ನಲ್ಲಿ ನಾಲ್ಕು ಫೋಟೋ ಇದೆ. ಅದರಲ್ಲಿ ಅವರಿಗೆ ಕಂಡ ಹುಳವನ್ನು ಮಾರ್ಕ್ ಮಾಡಿದ್ದಾರೆ. ಅದರ ಜೊತೆಗೆ ಬರೆದುಕೊಂಡಿದ್ದು ಹೀಗೆ, ನಾನು ಅಹಮದಾಬಾದ್ನಿಂದ ಮುಂಬೈಗೆ ಪ್ರಯಾಣಿಸುತ್ತಿದೆ.ಇಲ್ಲಿ ನಾನು ದಾಲ್ ಊಟ ಆರ್ಡರ್ ಮಾಡಿಕೊಂಡೆ. ನನ್ನ ಟೇಬಲ್ಗೆ ಮತ್ತು ಕೋಚ್ನಲ್ಲಿದ್ದವರಿಗೆ ಸಿಕ್ಕಿದ್ದು, ಮೆಸ್ಸರ್ಸ್ ಬ್ರಾಂಡವನ್ ಫುಡ್ ಪ್ರಾಡಕ್ಟ್ಸ್ಸ್ನಿಂದ ತಯಾರಿಸಿದ ಆಹಾರ. ನಾವು ತಿನ್ನುವಾಗ ನಮಗೆ ಹುಳ ಸಿಕ್ಕಿತು. ಇದು ನನಗೆ ಮಾತ್ರವಲ್ಲ ಇಬ್ಬರು ಪ್ರಯಾಣಿಕರಿಗೂ ಇದೇ ಅನುಭವ. ಅಶ್ವಿನಿ ವೈಷ್ಣವ್ ಅವರೇ ಹಾಗು ಭಾರತೀಯ ರೈಲ್ವೆ ಇಲಾಖೆಯ ಅಧಿಕಾರಿಗಳೇ ದಯವಿಟ್ಟು ಇವರ ಕಂಪನಿ ಮೇಲೆ, ಆಹಾರ ತಯಾರಿ ಸ್ಥಳದ ಮೇಲೆ ದಾಳಿ ಮಾಡಿ ಕ್ರಮ ಕೈಗೊಳ್ಳಿ ಎಂದು ಬರೆದುಕೊಂಡಿದ್ದಾರೆ.
ಇವರು FSSAI ಮಾನದಂಡಗಳ ಪ್ರಕಾರ ಆಹಾರವನ್ನು ತಯಾರಿಸುತ್ತಿಲ್ಲ. ಇವರು ತಪ್ಪಿತಸ್ಥರೆಂದು ಕಂಡುಬಂದರೆ, ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ನಿಮಗಾದ ಅನಾನೂಕೂಲತೆ ಬಗ್ಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಆಹಾರ ಸೇವಾ ಪೂರೈಕೆದಾರರಿಗೆ 10 ಲಕ್ಷ ರೂಪಾಯಿಗಳ ಭಾರಿ ದಂಡ ವಿಧಿಸಲಾಗುವುದು. ಪರವಾನಗಿ ರದ್ದು ಮಾಡುವ ಬಗ್ಗೆ ಸೂಚನೆ ನೀಡಲಾಗುತ್ತದೆ. ಅಡುಗೆಮನೆಯನ್ನು ಸೀಜ್ ಮಾಡಲಾಗಿದೆ. ನೈರ್ಮಲ್ಯ ಮತ್ತು ಪ್ರಯಾಣಿಕರ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಐಆರ್ಸಿಟಿಸಿ ಬರೆದುಕೊಂಡಿದೆ.
ಜಿರಳೆಯಲ್ಲಿ ಎಷ್ಟು ಪ್ರೋಟಿನ್ ಸಿಗುತ್ತದೆ ಎಂದು ಗೂಗಲ್ ಮಾಡಿ ಸ್ಕ್ರೀನ್ ಶಾಟ್ ತೆಗೆದು ಆದಿತ್ಯಾ ಅವರ ಪೋಸ್ಟ್ಗೆ ನೆಟ್ಟಿಗನೊಬ್ಬ ಟ್ಯಾಗ್ ಮಾಡಿದ್ದಾನೆ. ಭಾರತೀಯ ರೈಲ್ವೆ ಯಾವಾಗಲೂ ಪ್ರಯಾಣಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತದೆ, ಅವರು ನೀಡುವ ಹೆಚ್ಚುವರಿ ಪ್ರೋಟೀನ್ ಬಗ್ಗೆ ಜನರು ಏಕೆ ದೂರು ನೀಡುತ್ತಾರೆ ಎಂದು ನೆಟ್ಟಿಗನೊಬ್ಬ ಕಾಲೆಳೆದಿದ್ದಾನೆ, (ಏಜೆನ್ಸೀಸ್).