Vaibhav Suryavanshi | ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಭಾಜನರಾದ ಸಾಧಕರು (ಕೃಪೆ-ಡಿಡಿ ನ್ಯೂಸ್​) 
ದೇಶ

ವೈಭವ್​ ಸೂರ್ಯವಂಶಿ ಸೇರಿ 19 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ಮುರ್ಮು | Vaibhav Suryavanshi

ದೆಹಲಿ: ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಭಾಜನರಾಗಿರುವ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರಿಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದರು.
ಶೌರ್ಯ, ಕಲೆ ಮತ್ತು ಸಂಸ್ಕೃತಿ, ಪರಿಸರ, ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಾಮಾಜಿಕ ಸೇವೆ ಮತ್ತು ಕ್ರೀಡೆಗಳಲ್ಲಿನ ಅಸಾಧಾರಣ ಸಾಧನೆಗಳಿಗಾಗಿ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಕಾರ್ಯಕ್ರಮದ ಹಿನ್ನಲೆಯಲ್ಲಿ ವೈಭವ್ ಇಂದು ಮಣಿಪುರ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಪಂದ್ಯದಿಂದ ದೂರ ಉಳಿದರು.
ವೈಭವ ಸೇರಿದಂತೆ ಒಟ್ಟು 19 ಮಕ್ಕಳಿಗೆ ಆಯಾ ಕ್ಷೇತ್ರಗಳಲ್ಲಿನ ಸಾಧನೆಗಾಗಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ನಿಮ್ಮ ಸಾಧನೆಗಳು ಇಡೀ ರಾಷ್ಟ್ರಕ್ಕೆ ಸ್ಫೂರ್ತಿ ನೀಡುತ್ತವೆ. ಇಂದು ಗೌರವಿಸಲ್ಪಟ್ಟ ಪ್ರತಿಯೊಂದು ಮಗುವೂ ಅಷ್ಟೇ ಮುಖ್ಯ ಮತ್ತು ಮೌಲ್ಯಯುತವಾಗಿದ್ದು. ನಿಮ್ಮಂತಹ ಪ್ರತಿಭಾನ್ವಿತ ಮಕ್ಕಳ ಕಾರಣದಿಂದಾಗಿ ಭಾರತವು ಇಂದು ಜಾಗತಿಕ ವೇದಿಕೆಯಲ್ಲಿ ಮಿಂಚುತಿದೆ ಎಂದು ಹೇಳಿದರು.
ನಿಮ್ಮ ಅಸಾಧಾರಣ ಪ್ರತಿಭೆಗಳು ಶೌರ್ಯ, ಕಲೆ ಮತ್ತು ಸಂಸ್ಕೃತಿ, ಪರಿಸರ, ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ಸೇವೆ ಮತ್ತು ಕ್ರೀಡೆಗಳಲ್ಲಿ ಪ್ರದರ್ಶನಗೊಂಡಿವೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಗಮನಾರ್ಹ ಕೆಲಸ ಮಾಡಿದ್ದೀರಿ. ಸಮಯದ ಮಿತಿಯಿಂದಾಗಿ ನಾನು ಕೆಲವನ್ನು ಮಾತ್ರ ಉಲ್ಲೇಖಿಸಬಹುದಾದರೂ, ಇಂದು ಗೌರವಿಸಲ್ಪಡುವ ಪ್ರತಿಯೊಂದು ಮಗುವೂ ಅಷ್ಟೇ ಮುಖ್ಯ ಎಂದರು. ಇಂತಹ ಪ್ರತಿಭಾನ್ವಿತ ಮಕ್ಕಳ ಕಾರಣದಿಂದಾಗಿಯೇ ಭಾರತವು ಜಾಗತಿಕವಾಗಿ ಚೆಸ್ ಶಕ್ತಿ ಕೇಂದ್ರವಾಗಿದ್ದು, ಇದು ಚಪ್ಪಾಳೆ ತಟ್ಟುವ ಕ್ಷಣ. ಇಂದು ಅವರ ಹೆತ್ತವರನ್ನು ಗೌರವಿಸಲಾಗಿದೆ. ನಾನು ಅವರಿಗೆಲ್ಲಾ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು(ಏಜೆನ್ಸೀಸ್​).