Aligarh man Pakistan jail
- ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯ ಮೇಲಿನ ಪ್ರೀತಿಗಾಗಿ ಪಾಕಿಸ್ತಾನದ ಗಡಿ ದಾಟಿದ ಯುವಕ
- ಉತ್ತರ ಪ್ರದೇಶದ ಅಲಿಗಢ್ ಮೂಲದ ಬಾದಲ್ ಬಾಬು ಲಾಹೋರ್ ಜೈಲುಪಾಲು
- ಶಿಕ್ಷೆಯ ಅವಧಿ ಮುಗಿದಿದ್ದರೂ ಆತ ಇನ್ನೂ ಜೈಲಿನಲ್ಲೇ ಬಂಧಿ
Aligarh man Pakistan jail: ಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯ ಮೇಲಿನ ಪ್ರೀತಿಗಾಗಿ ಯುವಕನೊಬ್ಬ ಯಾವುದೇ ವೀಸಾ ಇಲ್ಲದೆ ಅಕ್ರಮವಾಗಿ ಪಾಕಿಸ್ತಾನದ ಗಡಿ ದಾಟಿ ಹೋಗಿ, ಇದೀಗ ಅಲ್ಲಿನ ಜೈಲು ಪಾಲಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಶಿಕ್ಷೆಯ ಅವಧಿ ಮುಗಿದಿದ್ದರೂ ಆತ ಇನ್ನೂ ಜೈಲಿನಲ್ಲೇ ಬಂಧಿಯಾಗಿದ್ದು, ಆತನನ್ನು ವಾಪಸ್ ಕರೆತರಲು ಕುಟುಂಬಸ್ಥರು ಭಾರತ ಸರ್ಕಾರದ ಮೊರೆ ಹೋಗಿದ್ದಾರೆ.
ಲಾಹೋರ್‌ನ ಜೈಲಿನಲ್ಲಿರುವ ಬಾದಲ್ ಬಾಬು ದೆಹಲಿಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಫೇಸ್ಬುಕ್ ಮೂಲಕ ಪಾಕಿಸ್ತಾನ ಮೂಲದ ಸನಾ ಎಂಬ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದನು. ಇಬ್ಬರ ಸ್ನೇಹ, ದಿನಪೂರ್ತಿ ಚಾಟಿಂಗ್ ಹಾಗೂ ಕರೆ ಮಾಡಿ ಮಾತನಾಡುವ ಮಟ್ಟಕ್ಕೆ ತಿರುಗಿ, ನಂತರ ಇಬ್ಬರು ಪ್ರೇಮಿಸತೊಡಗಿದ್ದರು. ಒಮ್ಮೆ ಆಕೆಯನ್ನು ನೋಡಬೇಕು ಎಂಬ ಕಾರಣಕ್ಕೆ ಪಾಕಿಸ್ತಾನ ಗಡಿ ದಾಟಿ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ.
2024 ಅಕ್ಟೋಬರ್ 30ರಂದು ಟೈಲರ್ ಬಾದಲ್ ಅವರು ತಮ್ಮ ಎಲ್ಲಾ ದಾಖಲೆಗಳನ್ನು ಮನೆಯಲ್ಲಿಯೇ ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ್ದರು. ಆ ಬಗ್ಗೆ 20 ತಿಂಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿದಾಡಿತ್ತು. ಅಕ್ರಮವಾಗಿ ಗಡಿ ದಾಟಿದ್ದಾನೆ. ಹೀಗಾಗಿ ಅವನನ್ನು ಬಂಧಿಸಲಾಗಿದೆ ಎನ್ನುವ ಬಗ್ಗೆ ಪ್ರಚಾರ ಮಾಡಲಾಗಿತ್ತು.
ಕುಟುಂಬಸ್ಥರು ಹೇಳಿದ್ದಿಷ್ಟು
ಆಗಸ್ಟ್ 2024ರಲ್ಲಿ ಬಾದಲ್ ಪಾಕಿಸ್ತಾನಕ್ಕೆ ಪ್ರಯಾಣಿಸಲು ಪ್ರಯತ್ನಿಸಿದ್ದ ಆದರೆ ಅಂದು ಅದು ವಿಫಲವಾಗಿತ್ತು. ಅಕ್ಟೋಬರ್ 15ರಂದು ಮತ್ತೊಂದು ಪ್ರಯತ್ನ ಮಾಡಿದಾಗ ಯಶಸ್ವಿಯಾಯಿತು. ಅಕ್ಟೋಬರ್ 30, 2024 ರಂದು ಆತ ಕೊನೆಯ ಬಾರಿಗೆ ತನ್ನ ಮನೆಯವರೊಂದಿಗೆ ಮಾತನಾಡಿದ್ದ, ಆ ಬಳಿಕ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆತ ಹೋಗುವಾಗ ತನ್ನ ಎಲ್ಲಾ ದಾಖಲೆಗಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದ.
ಪಾಕಿಸ್ತಾನ ತಲುಪಿದ ಬಾದಲ್‌ನನ್ನು ಮದುವೆಯಾಗಲು ಸನಾ ನಿರಾಕರಿಸಿದಳು. ಇದರಿಂದಾಗಿ ಆತ ಅಲ್ಲಿಯೇ ಉಳಿದುಕೊಂಡು ಮಾಲೀಕನೊಬ್ಬನ ಬಳಿ ಕೆಲಸಕ್ಕೆ ಸೇರಿಕೊಂಡಿದ್ದ. ಡಿಸೆಂಬರ್ 27, 2024 ರಂದು ಬಾದಲ್ ಮೇಕೆಗಳನ್ನು ಮೇಯಿಸುತ್ತಿದ್ದಾಗ, ಆತನ ಆಡುಭಾಷೆ ಮತ್ತು ಭಾರತೀಯ ಶೈಲಿಯ ಉಚ್ಚಾರಣೆಯನ್ನು ಗಮನಿಸಿದ ಸ್ಥಳೀಯರಿಗೆ ಸಂಶಯ ಬಂದಿದೆ. ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಕ್ರಮವಾಗಿ ದೇಶ ಪ್ರವೇಶಿಸಿದ ಆರೋಪದ ಮೇಲೆ ಪಾಕಿಸ್ತಾನ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
'ನಾನು ಮತಾಂತರವಾಗಿದ್ದೇನೆ'
ಸುಮಾರು 20 ತಿಂಗಳುಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಹರಿದಾಡಿದಾಗಷ್ಟೇ ಬಾದಲ್ ಪಾಕಿಸ್ತಾನದಲ್ಲಿ ಬಂಧಿಯಾಗಿರುವ ವಿಷಯ ಆತನ ಕುಟುಂಬಕ್ಕೆ ತಿಳಿಯಿತು. ನ್ಯಾಯಾಲಯದ ಆವರಣದಿಂದ ವಕೀಲರ ಸಹಾಯದೊಂದಿಗೆ ಮಾಡಿದ ವಿಡಿಯೋ ಕರೆಯಲ್ಲಿ ಬಾದಲ್, "ನನ್ನ ಬಗ್ಗೆ ಚಿಂತಿಸಬೇಡಿ, ನಾನು ಇನ್ನು ವಾಪಸ್ ಬರುವುದಿಲ್ಲ, ನಾನು ಮತಾಂತರಗೊಂಡಿದ್ದೇನೆ" ಎಂದು ಕುಟುಂಬಸ್ಥರಿಗೆ ಹೇಳಿರುವುದು ವೈರಲ್ ಆಗಿತ್ತು.
ಬಿಡುಗಡೆಗಾಗಿ ಕುಟುಂಬದ ಅಳಲು
ಸದ್ಯ ಲಾಹೋರ್‌ನ ಕೋಟ್ ಲಖ್‌ಪತ್ ಜೈಲಿನಲ್ಲಿರುವ ಬಾದಲ್, ಈಗಾಗಲೇ ತನಗೆ ವಿಧಿಸಲಾಗಿದ್ದ ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿದ್ದಾನೆ. ಆದರೆ ತಾಯ್ನಾಡಿಗೆ ವಾಪಸ್ ಕಳುಹಿಸುವ ಪ್ರಕ್ರಿಯೆಗಳು ಪೂರ್ಣಗೊಳ್ಳದ ಕಾರಣ ಆತ ಇನ್ನೂ ಜೈಲಿನಲ್ಲೇ ಕೊಳೆಯುತ್ತಿದ್ದಾನೆ. ಅಲಿಗಢ್ ಆಡಳಿತ ಮಂಡಳಿ ಹಲವು ಬಾರಿ ಅಗತ್ಯ ದಾಖಲೆಗಳನ್ನು ಒದಗಿಸಿದ್ದು, ಸ್ಥಳೀಯ ಸಂಸದ ಸತೀಶ್ ಗೌತಮ್ ಕೂಡ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಲಂಡನ್ ಮೂಲದ ಭಾರತೀಯ ಮಹಿಳೆಯೊಬ್ಬರು ಪಾಕಿಸ್ತಾನದಲ್ಲಿರುವ ಬಾದಲ್‌ನ ವಕೀಲರೊಂದಿಗೆ ಸಂಪರ್ಕದಲ್ಲಿದ್ದು, ಆತನ ಬಿಡುಗಡೆಗಾಗಿ ನೆರವಾಗುತ್ತಿದ್ದಾರೆ. ತನ್ನ ಮಗನನ್ನು ಹೇಗಾದರೂ ಮಾಡಿ ಭಾರತಕ್ಕೆ ವಾಪಸ್ ಕರೆತರಬೇಕೆಂದು ಆತನ ಕುಟುಂಬ ಸರ್ಕಾರವನ್ನು ವಿನಂತಿಸಿದೆ, (ಏಜೆನ್ಸೀಸ್).