ಸಾಂದರ್ಭಿಕ ಚಿತ್ರ 
ದೇಶ

ನಿರಂತರ ಮಳೆ, ಭೂಕುಸಿತ ಹಿನ್ನೆಲೆ ತಾತ್ಕಾಲಿಕವಾಗಿ ಚಾರ್ ಧಾಮ್ ಯಾತ್ರೆ ಸ್ಥಗಿತಗೊಳಿಸಿದ ಉತ್ತರಾಖಂಡ ಸರ್ಕಾರ | Char Dham Yatra

ಡೆಹ್ರಾಡೂನ್: ನಿರಂತರ ಮಳೆ, ಭೂಕುಸಿತದಿಂದಾಗಿ ರಾಜ್ಯಾದ್ಯಂತ ತೀರ್ಥಯಾತ್ರೆ ಮಾರ್ಗಗಳಲ್ಲಿ ವ್ಯತ್ಯಯ ಉಂಟಾಗಿ ಸಮಸ್ಯೆಯಾಗಿದ್ದು, ಯಾತ್ರಾರ್ಥಿಗಳ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಉತ್ತರಾಖಂಡ ಸರ್ಕಾರ ಸೋಮವಾರ(ಜು. 20) ಚಾರ್ ಧಾಮ್ ಯಾತ್ರೆಯನ್ನು(Char Dham Yatra) ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ಹವಾಮಾನ ಮತ್ತು ರಸ್ತೆ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಯಾತ್ರಿಕರ ಸುರಕ್ಷತೆಯು ನಮ್ಮ ಹೆಚ್ಚಿನ ಆದ್ಯತೆಯಾಗಿದೆ. ಮಾರ್ಗಗಳು ಸುರಕ್ಷಿತವೆಂದು ತಿಳಿದ ಬಳಿಕ, ಪರಿಸ್ಥಿತಿಗಳು ಸಹಜ ಸ್ಥಿತಿಗೆ ಮರಳಿದ ನಂತರವೇ ಯಾತ್ರೆ ಪುನರಾರಂಭವಾಗಲಿದೆ ಎಂದು ಹೇಳಿದ್ದಾರೆ.
ಇನ್ನೂ ಕೇದಾರನಾಥ, ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಮಾರ್ಗಗಳಲ್ಲಿನ ಯಾತ್ರಾರ್ಥಿಗಳ ಸಂಚಾರಕ್ಕೂ ಇದು ಅನ್ವಯವಾಗುತ್ತದೆ. ಯಾತ್ರಿಕರು ವದಂತಿಗಳಿಗೆ ಕಿವಿಗೊಡಬಾರದು. ಹವಾಮಾನ ಮತ್ತು ರಸ್ತೆ ಪರಿಸ್ಥಿತಿ ಸುಧಾರಿಸುವವರೆಗೆ ಅವರು ಅಧಿಕೃತ ಸಲಹೆಗಳನ್ನು ಮಾತ್ರ ಅವಲಂಬಿಸಬೇಕು ಮತ್ತು ಜಿಲ್ಲಾಡಳಿತದ ನಿರ್ದೇಶನಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಈಗಾಗಲೇ ಮಾರ್ಗಗಳಲ್ಲಿರುವ ಯಾತ್ರಾರ್ಥಿಗಳಿಗೆ ಸುರಕ್ಷಿತ ಸ್ಥಳಗಳಲ್ಲಿ ಸ್ಥಳಾವಕಾಶ ಕಲ್ಪಿಸುವಂತೆ ಗರ್ವಾಲ್ ಆಯುಕ್ತರು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ಇತರ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ (ಏಜೆನ್ಸೀಸ್).