ದೇಶ

ಉತ್ತರ ಪ್ರದೇಶದಲ್ಲಿ ದುರಂತ: ಗುರುಕುಲದ ಹಾಸ್ಟೆಲ್​ನಲ್ಲಿ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಹೋಗಿ ನಾಲ್ವರು ವಿದ್ಯಾರ್ಥಿಗಳು ಸಾವು | Uttar Pradesh

ಉತ್ತರ ಪ್ರದೇಶದ ಬೃಂದಾವನದಲ್ಲಿ ಬುಧವಾರ(ಅ. 07) ದುರಂತವೊಂದು ಸಂಭವಿಸಿದ್ದು, ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವಾಗ ವಿಷಕಾರಿ ಅನಿಲ ಸೇವಿಸಿ ಸ್ಥಳದಲ್ಲೇ ಉಸಿರುಗಟ್ಟಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಲಖನೌ: ಉತ್ತರ ಪ್ರದೇಶದ ಬೃಂದಾವನದಲ್ಲಿ ಬುಧವಾರ(ಅ. 07) ದುರಂತವೊಂದು ಸಂಭವಿಸಿದ್ದು, ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವಾಗ ವಿಷಕಾರಿ ಅನಿಲ ಸೇವಿಸಿ ಸ್ಥಳದಲ್ಲೇ ಉಸಿರುಗಟ್ಟಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಬೃಂದಾವನದ ಚೈತನ್ಯ ವಿಹಾರ್‌ನಲ್ಲಿರುವ ಸಂಸ್ಕೃತ ಶಾಲೆ ಗುರುಕುಲದಲ್ಲಿ ಈ ಘಟನೆ ನಡೆದಿದೆ. ವಿಷಾನಿಲ ಸೇವಿಸಿ ನಾಲ್ವರು ವಿದ್ಯಾರ್ಥಿಗಳ ಮೃತಪಟ್ಟರೇ, ಓರ್ವನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಮಧ್ಯಪ್ರದೇಶದ ಆಶಿಶ್ ಕುಮಾರ್ ಶರ್ಮಾ ಈ ಗುರುಕುಲವನ್ನು ನಡೆಸುತ್ತಿದ್ದು, ಸುಮಾರು 200 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರೆ, ಸುಮಾರು 100 ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್​ನಲ್ಲಿ ಉಳಿದುಕೊಂಡಿದ್ದಾರೆ.

ಘಟನೆಯ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಚಂದ್ರ ಪ್ರಕಾಶ್ ಸಿಂಗ್, ಮಂಗಳವಾರ ರಾತ್ರಿ ಹಾಸ್ಟೆಲ್​ನಲ್ಲಿರುವ ನೆಲದ ಟ್ಯಾಂಕ್​ನಿಂದ ದುರ್ವಾಸನೆ ಬರುತ್ತಿರುವುದನ್ನು ಕಂಡುಕೊಂಡು ವಿದ್ಯಾರ್ಥಿಗಳು, ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲು ನಿರ್ಧರಿಸಿದ್ದಾರೆ. ಅದರಲ್ಲಿದ್ದ ನೀರನ್ನು ಮೋಟಾರ್ ಮೂಲಕ ಪಂಪ್ ಮಾಡಿದ್ದಾರೆ. ಬಳಿಕ ಓರ್ವ ವಿದ್ಯಾರ್ಥಿ, ಅದನ್ನು ಸ್ವಚ್ಛಗೊಳಿಸಲು ಕೆಳಗೆ ಇಳಿದಿದ್ದಾನೆ.

ಕೆಲ ಸಮಯದಲ್ಲಿ ವಿಷಾಕಾರಿ ವಾಸನೆಯಿಂದ ಪ್ರಜ್ಞೆ ತಪ್ಪಿದ್ದಾನೆ. ಅವನನ್ನು ಹೊರತೆಗೆಯಲು ಇತರ ನಾಲ್ವರು ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಟ್ಯಾಂಕ್‌ಗೆ ಇಳಿದರು. ಅವರು ಕೂಡ ವಿಷಕಾರಿ ಅನಿಲವನ್ನು ಉಸಿರಾಡಿದ ಬಳಿಕ ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ತಕ್ಷಣ ಐವರನ್ನೂ ಟ್ಯಾಂಕ್‌ನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ. ರುದ್ರ ಎಂಬ ವಿದ್ಯಾರ್ಥಿ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೃತ ನಾಲ್ವರು ವಿದ್ಯಾರ್ಥಿಗಳು 17 ರಿಂದ 20 ವರ್ಷ ವಯಸ್ಸಿನವರು ಎನ್ನಲಾಗಿದ್ದು, ಪ್ರಕರಣ ದಾಖಲಾಗಿದೆ. ಮತ್ತು ಮೃತದೇಹಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ (ಏಜೆನ್ಸೀಸ್).