ಲಖನೌ: ಉತ್ತರ ಪ್ರದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಅಂಕಿಅಂಶಗಳು ಮತ್ತು ಕರಡು ಮತದಾರರ ಪಟ್ಟಿಯನ್ನು ಡಿಸೆಂಬರ್ 31 ರಂದು ಬಿಡುಗಡೆ ಮಾಡಲಾಗುವುದು ಎಂದು ವರದಿಯಾಗಿದೆ.
ರಾಜ್ಯದಲ್ಲಿ ಸುಮಾರು 2.89 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದಕ್ಕೂ ಮೊದಲು, ಉತ್ತರ ಪ್ರದೇಶದಲ್ಲಿ ಒಟ್ಟು 15.44 ಲಕ್ಷ ನೋಂದಾಯಿತ ಮತದಾರರಿದ್ದರು.
1.25 ಕೋಟಿ ಮತದಾರರನ್ನು ಶಾಶ್ವತ ಸ್ಥಳಾಂತರ
2.89 ಕೋಟಿ ಮತದಾರರಲ್ಲಿ ಸುಮಾರು 1.25 ಕೋಟಿ ಮತದಾರರು ಶಾಶ್ವತವಾಗಿ ಬೇರೆ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದರು. ಈ ಮತದಾರರೇ ತಮ್ಮ ಸದ್ಯದ ವಿಳಾಸದ ಬಗ್ಗೆ ಬೂತ್ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸುಮಾರು 45.95 ಲಕ್ಷ ಮತದಾರರು ಸಾವನ್ನಪ್ಪಿದ್ದು, 23.59 ಲಕ್ಷ ನಕಲಿ ಮತದಾರರು ಕಂಡುಬಂದಿದ್ದಾರೆ.
84 ಲಕ್ಷ ಮತದಾರರು ಕಾಣೆ
ಸುಮಾರು 9.57 ಲಕ್ಷ ಮತದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿಲ್ಲ, 84 ಲಕ್ಷ ಮತದಾರರು ಕಾಣೆಯಾಗಿದ್ದಾರೆ. ರಾಜ್ಯ ರಾಜಧಾನಿ ಲಖನೌದಲ್ಲಿ ಈ ಹಿಂದೆ ಸುಮಾರು 40 ಲಕ್ಷ ಮತದಾರರಿದ್ದರು. ಇಲ್ಲಿಯವರೆಗೆ, ಸುಮಾರು 70 ಪ್ರತಿಶತ ಅಂದರೆ ಸರಿಸುಮಾರು 28 ಲಕ್ಷ ಮತದಾರರು ತಮ್ಮ ದಾಖಲೆಗಳನ್ನು ಸಲ್ಲಿಸಿದ್ದಾರೆ. ಸುಮಾರು 12 ಲಕ್ಷ ಮತದಾರರ ಹೆಸರುಗಳನ್ನು ಕೈ ಬಿಡಲಾಗಿದೆ. ಇದರಲ್ಲಿ 5.36 ಲಕ್ಷ ನಕಲಿ ಮತದಾರರು ಸೇರಿದ್ದಾರೆ ಎನ್ನಲಾಗಿದೆ.
ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ: ಅಖಿಲೇಶ್
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದು, 2.8 ಕೋಟಿ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ಮಾಹಿತಿ ಸೋರಿಕೆಯಾಗಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನು ಆತಂಕಕ್ಕೆ ದೂಡಿದೆ, ಇದರಲ್ಲಿ ಬಿಜೆಪಿ ಮತದಾರರೆ ಹೆಚ್ಚಿದ್ದಾರೆ ಎಂದರು.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಯಾದವ್, ಎಸ್ಐಆರ್ ಪ್ರಕ್ರಿಯೆ ಯುಪಿ ಬಿಜೆಪಿಯಲ್ಲಿ ಆಂತರಿಕ ಗದ್ದಲಕ್ಕೆ ಕಾರಣವಾಗಿದೆ. ಈ ಸುದ್ದಿ ಈಗಾಗಲೇ ಬಿಜೆಪಿ ಶಾಸಕರಲ್ಲಿ ಹರಡಿದ್ದು, 2.89 ಕೋಟಿ ಮತದಾರರ ಹೆಸರುಗಳನ್ನು ಎಸ್‌ಐಆರ್‌ನಿಂದ ಅಳಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ(ಏಜೆನ್ಸೀಸ್).