ರಾಮ ಮಂದಿರ ಕಾಣಿಕೆ ಲೂಟಿ ಪ್ರಕರಣ
- ಅಯೋಧ್ಯೆ ರಾಮ ಮಂದಿರ ಕಾಣಿಕೆ ಲೂಟಿ ಪ್ರಕರಣ
- ದೇಣಿಗೆಯಲ್ಲಿ ಭಕ್ತಿ ತುಂಬಿರದ ಕಾರಣಕ್ಕೆ ಲೂಟಿ
- ಉತ್ತರ ಪ್ರದೇಶದ ವಿಧಾನಸಭಾ ಸ್ಪೀಕರ್ ವಿವಾದಾತ್ಮಕ ಹೇಳಿಕೆ
ಅಯೋಧ್ಯೆ: ಮೊದಲೇ ರಾಮ ಮಂದಿರದ ದೇಣಿಗೆಯನ್ನು ಆಡಳಿತ ಮಂಡಳಿ ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಸಿಟ್ಟಾಗಿದ್ದ ಭಕ್ತರು, ಇದೀಗ ಸದನದಲ್ಲಿ ಉತ್ತರ ಪ್ರದೇಶದ ಸ್ಪೀಕರ್ ನೀಡಿದ ವಿವಾದಾತ್ಮಕ ಹೇಳಿಕೆಗೆ ದೇಶವ್ಯಾಪಿ ಭಾರಿ ಆಕ್ರೋಶ ಹೊರಹಾಕಿದ್ದಾರೆ.
ಭಕ್ತರು ನೀಡಿದ್ದ ದೇಣಿಗೆ ಹಣ ಲೂಟಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿಧಾನಸಭಾ ಸ್ಪೀಕರ್ ಸತೀಶ್ ಮಹಾನಾ, "ಬಹುಶಃ ಯಾರ ಹಣ ಕಳ್ಳತನವಾಗಿದೆಯೋ, ಅವರು ಮಂದಿರಕ್ಕೆ ಶುದ್ಧವಾದ ನಂಬಿಕೆ ಮತ್ತು ಭಕ್ತಿಯಿಂದ ದೇಣಿಗೆ ನೀಡಿಲ್ಲ. ನಾವು ಸಂಪೂರ್ಣ ಭಕ್ತಿಯಿಂದ ಕಾಣಿಕೆ ಕೊಟ್ಟಿದ್ದೇವೆ. ಹೀಗಾಗಿ, ಹಣ ಇಂದಿಗೂ ಮಂದಿರದಲ್ಲೇ ಸುರಕ್ಷಿತವಾಗಿದೆ" ಎಂದು ಹೇಳಿದ್ದೇ ಸದ್ಯ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಸ್ಪೀಕರ್ ಆಗಿ ಇಂತಹ ಹೇಳಿಕೆ ನೀಡಿದ್ದೇ ತಡ ದೇಶವ್ಯಾಪಿ ರಾಮನ ಭಕ್ತರು ಕೆಂಡಾಮಂಡಲಗೊಂಡಿದ್ದು, ಸತೀಶ್ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಮತ್ತೊಂದೆಡೆ, ಈ ವಿವಾದ ರಾಜಕೀಯ ವಲಯದಲ್ಲೂ ತೀವ್ರ ಟೀಕೆಗೆ ಗುರಿಯಾಗಿದೆ. ಸ್ಪೀಕರ್ ಹೇಳಿಕೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿದ್ದು, ಇದು ಕೋಟ್ಯಂತರ ಭಕ್ತರ ನಂಬಿಕೆಗೆ ಮಾಡಿದ ಅವಮಾನ ಎಂದು ಆಕ್ರೋಶ ಹೊರಹಾಕಿವೆ.
ವಿಧಾನಸಭೆಯ ಸ್ಪೀಕರ್ ಸ್ಥಾನದಲ್ಲಿರುವ ಜವಾಬ್ದಾರಿಯುತ ವ್ಯಕ್ತಿಯೊಬ್ಬರು ಕೋಟ್ಯಂತರ ಭಕ್ತರ ಕಾಣಿಕೆ ಮತ್ತು ಸಾರ್ವಜನಿಕ ನಂಬಿಕೆಗೆ ಸಂಬಂಧಿಸಿದ ಇಷ್ಟು ಗಂಭೀರ ವಿಷಯವನ್ನು ಅಷ್ಟೊಂದು ಲಘುವಾಗಿ ತೆಗೆದುಕೊಂಡಿದ್ದು ಮೊದಲೇ ತಪ್ಪು. ಕಳ್ಳತನವನ್ನು ಖಂಡಿಸುವ ಬದಲು ಭಕ್ತರ ಭಕ್ತಿಯನ್ನೇ ಪ್ರಶ್ನಿಸಿದ್ದು ಎಷ್ಟು ಸರಿ? ಎಂಬ ವಿರೋಧ ಪಕ್ಷಗಳು ನೇರವಾಗಿ ಕುಟುಕಿವೆ.
ಕಾಂಗ್ರೆಸ್ ತರಾಟೆ
ಕಾಂಗ್ರೆಸ್ ಪಕ್ಷದ ವಕ್ತಾರ ಅನ್ಶು ಅವಸ್ತಿ ಮಾತನಾಡಿ, ಸ್ಪೀಕರ್ ಮತ್ತು ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಮಮಂದಿರಕ್ಕೆ ಬಂದ ದೇಣಿಗೆಯನ್ನು ರಕ್ಷಿಸುವಲ್ಲಿ ಬಿಜೆಪಿ ನಾಯಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಯಾರು ಎಷ್ಟು ಭಕ್ತಿಯಿಂದ ದೇಣಿಗೆ ನೀಡಿದ್ದಾರೆ ಎಂದು ಅಳೆಯಲು ಸ್ಪೀಕರ್ ಬಳಿ ಏನಾದರೂ ಜಿಪಿಎಸ್ (GPS) ಉಪಕರಣ ಇದೆಯೇ? ಈ ಕಳ್ಳತನ ಪ್ರಕರಣವು ವಿಶ್ವಾದ್ಯಂತ ಇರುವ 140 ಕೋಟಿ ಭಾರತೀಯರ ಮತ್ತು ರಾಮಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕಿಡಿಕಾರಿದ್ದಾರೆ.
ಏನಿದು ವಿವಾದ
ವಿಶ್ವದ ಅತ್ಯಂತ ಪ್ರಸಿದ್ಧ ಮತ್ತು ಪಾವಿತ್ರ್ಯತೆ ಹೊಂದಿರುವ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿರುವ ಅಯೋಧ್ಯೆಯ ಶ್ರೀರಾಮಮಂದಿರದ ಕಾಣಿಕೆ ಹಣ ಲೂಟಿಯಾದ ಬಗ್ಗೆ ಆರೋಪಗಳು ಕೇಳಿಬಂದ ಬೆನ್ನಲ್ಲೇ ತನಿಖೆಗಳು ಚುರುಕುಗೊಂಡಿತು. ಅಯೋಧ್ಯೆಯ ರಾಮಮಂದಿರ ಟ್ರಸ್ಟ್‌ಗೆ ಬಂದ ಕೋಟ್ಯಂತರ ರೂಪಾಯಿ ದೇಣಿಗೆಯನ್ನು ಬ್ಯಾಂಕ್ ನಕಲಿ ದಾಖಲೆಗಳು ಮತ್ತು ಕ್ಲೋನ್ ಮಾಡಿದ ಚೆಕ್‌ಗಳ ಮೂಲಕ ದೋಚಲು ಯತ್ನಿಸಿದ ಪ್ರಕರಣವು ಬ್ಯಾಂಕ್ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಬೆಳಕಿಗೆ ಬಂದಿತು.ವಂಚಕರು ರಾಮಮಂದಿರ ಟ್ರಸ್ಟ್ ಹೆಸರಿನಲ್ಲಿದ್ದ ನಕಲಿ ಚೆಕ್‌ಗಳನ್ನು ಪ್ರಸ್ತುತಪಡಿಸಿ ಲಕ್ಷಾಂತರ ರೂಪಾಯಿ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು, ಆದರೆ ಮೂರನೇ ಬಾರಿ ದೊಡ್ಡ ಮೊತ್ತದ ಚೆಕ್ ನಗದೀಕರಣಕ್ಕೆ ಬಂದಾಗ ಬ್ಯಾಂಕ್ ಸಿಬ್ಬಂದಿಗೆ ಅನುಮಾನ ಬಂದು ಟ್ರಸ್ಟ್ ಪದಾಧಿಕಾರಿಗಳನ್ನು ವೆರಿಫಿಕೇಶನ್‌ಗಾಗಿ ಸಂಪರ್ಕಿಸಿದಾಗ ಈ ಬೃಹತ್ ವಂಚನೆ ಬಹಿರಂಗವಾಗಿದೆ.
ಪ್ರಕರಣದ ಗಂಭೀರತೆ ಅರಿತ ಉತ್ತರ ಪ್ರದೇಶ ಸರ್ಕಾರವು ತಕ್ಷಣವೇ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಇದುವರೆಗೆ ದೇಶದ ವಿವಿಧೆಡೆ ಕಾರ್ಯಾಚರಣೆ ನಡೆಸಿ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ನಕಲಿ ಚೆಕ್ ಸೃಷ್ಟಿಸಿದ ಮತ್ತು ಹಣ ವರ್ಗಾವಣೆಗೆ ಸಹಕರಿಸಿದ ಪ್ರಮುಖ ಕಿಂಗ್‌ಪಿನ್ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದೆ. ಸದ್ಯ ಎಸ್‌ಐಟಿ ತಂಡವು ದುರುಪಯೋಗವಾಗಿರುವ ಹಣದ ಜಾಲವನ್ನು ಪತ್ತೆಹಚ್ಚಲು ಆಳವಾದ ತನಿಖೆಯನ್ನು ಮುಂದುವರಿಸಿದೆ, (ಏಜೆನ್ಸೀಸ್).