Suryakumar Yadav | ಸೂರ್ಯಕುಮಾರ್ ಯಾದವ್
Suryakumar Yadav: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ಟಿ20 ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಿದ್ದು, ತಂಡದಲ್ಲಿ ಭಾರಿ ಬದಲಾವಣೆಗಳಾಗಿವೆ, ಹಿರಿಯ ಬ್ಯಾಟರ್ ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸಲಿದ್ದರೆ, ಯುವ ಆಟಗಾರ ತಿಲಕ್ ವರ್ಮಾ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.
ಎಲ್ಲಕ್ಕಿಂತ ದೊಡ್ಡ ಆಘಾತಕಾರಿ ನಿರ್ಧಾರವೆಂದರೆ, ಇತ್ತೀಚೆಗಷ್ಟೇ ಭಾರತ ತಂಡಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಅಷ್ಟೇ ಅಲ್ಲದೆ, ಕಳೆದ ಕೆಲವು ಸಮಯದಿಂದ ಅವರು ಫಾರ್ಮ್ ಕಳೆದುಕೊಂಡು ಕಳಪೆ ಪ್ರದರ್ಶನ ನೀಡುತ್ತಿರುವ ಕಾರಣಕ್ಕಾಗಿ ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಯಿಂದಲೇ ಅವರನ್ನು ಕೈಬಿಡಲಾಗಿದೆ.
ಟ್ರೋಫಿ ಗೆದ್ದ ನಾಯಕನನ್ನು!...ಆಕಾಶ್ ಚೋಪ್ರಾ ಅಸಮಾಧಾನ
ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಕೈಬಿಟ್ಟಿರುವುದರ ಕುರಿತು ಮಾಜಿ ಭಾರತೀಯ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ತೀವ್ರ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸೂರ್ಯಕುಮಾರ್ ಅವರಿಗೆ ಗೌರವಯುತವಾಗಿ ವಿದಾಯ ಹೇಳಲು ಮತ್ತೊಂದು ಸರಣಿಯ ಅವಕಾಶ ನೀಡಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನ ವಿಡಿಯೋದಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, ಇದು ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ, ಸೂರ್ಯಕುಮಾರ್ ಯಾದವ್ ಅವರ ಕೊನೆಯ ಚಿತ್ರಣ ನೆನಪಿಸಿಕೊಳ್ಳುವುದಾದರೆ, ಅವರು ವಿಶ್ವಕಪ್ ಟ್ರೋಫಿ ಹಿಡಿದು ಸಂಭ್ರಮಿಸುತ್ತಿರುವುದು ಕಣ್ಣಮುಂದೆ ಬರುತ್ತದೆ. ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ತಂಡದಿಂದಲೇ ಡ್ರಾಪ್ ಮಾಡುವುದು ಸಾಮಾನ್ಯವಾಗಿ ಕ್ರಿಕೆಟ್‌ನಲ್ಲಿ ಎಲ್ಲೂ ನಡೆಯುವುದಿಲ್ಲ. ನನ್ನ ಪ್ರಕಾರ ಬಿಸಿಸಿಐ ಅವರಿಗೆ ಮತ್ತೊಂದು ಗೌರವಯುತ ಅವಕಾಶ ನೀಡಬೇಕಿತ್ತು.
ಇವೇ ನಿನ್ನ ಕೊನೆಯ ಎರಡು ಸರಣಿಗಳು, ನೀನೇ ನಾಯಕನಾಗಿ ಮುನ್ನಡೆಸು, ಇದರ ನಂತರ ನಿನಗೆ ಗುಡ್‌ಬೈ ಹೇಳ್ತೀವಿ ಎಂದು ನೇರವಾಗಿ ಚರ್ಚಿಸಬೇಕಿತ್ತು. ಒಂದು ವೇಳೆ ಆ ಚರ್ಚೆ ನಡೆದಿಲ್ಲ ಎಂದರೆ, ಹೀಗೆ ದಿಢೀರ್ ಎಂದು ತಂಡದಿಂದ ಕೈಬಿಟ್ಟಿರುವುದು ಸರಿಯಾದ ಕ್ರಮವಲ್ಲ ಎಂದು ಚೋಪ್ರಾ ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್ ವೃತ್ತಿಜೀವನದ ಅಂಕಿ-ಅಂಶಗಳು
ಒಟ್ಟು ಪಂದ್ಯಗಳು: 113 ಅಂತರರಾಷ್ಟ್ರೀಯ ಟಿ20
ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ ತಂಡ ಸೂರ್ಯಕುಮಾರ್ ನೇತೃತ್ವದಲ್ಲಿ ವಿಶ್ವಕಪ್ ಮುಕುಟ ಮುಡಿಗೇರಿಸಿಕೊಂಡಿತ್ತು. ಆದರೆ, ಟೂರ್ನಿ ಗೆದ್ದ ಕೆಲವೇ ತಿಂಗಳುಗಳಲ್ಲಿ, ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕಾಗಿ ಅವರನ್ನು ಭಾರತದ ಟಿ20 ತಂಡದಿಂದ ಹೊರದಬ್ಬಲಾಗಿದೆ. ಈ ಹಿರಿಯ ಬ್ಯಾಟರ್ ಮುಂಬರುವ ದಿನಗಳಲ್ಲಿ ದೇಶಿ ಕ್ರಿಕೆಟ್‌ನಲ್ಲಿ ಪ್ರದರ್ಶನ ಉತ್ತಮಪಡಿಸಿಕೊಂಡು ಮತ್ತೆ ಕಂಬ್ಯಾಕ್ ಮಾಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ(ಏಜೆನ್ಸೀಸ್).