US Supreme Court | ಟ್ರಂಪ್ ವಿಧಿಸಿದ್ದ ಸುಂಕಗಳನ್ನು ರದ್ದುಗೊಳಿಸಿದ ಅಮೆರಿಕಾ ಸುಪ್ರೀಂ ಕೋರ್ಟ್!
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ವಿವಾದಾತ್ಮಕ ಮತ್ತು ಆಕ್ರಮಣಕಾರಿ ಆರ್ಥಿಕ ನೀತಿಯಾದ ಸಾರ್ವತ್ರಿಕ ಸುಂಕ ವಿಧಿಸಿರುವುದಕ್ಕೆ, ಸ್ವತಃ ಅಲ್ಲಿನ ಸುಪ್ರೀಂ ಕೋರ್ಟ್ (US Supreme Court) ಶುಕ್ರವಾರ ತಡೆ ನೀಡಿದ್ದು, ಟ್ರಂಪ್ ವಿಧಿಸಿದ್ದ ಎಲ್ಲಾ ಸುಂಕಗಳನ್ನು ರದ್ದುಗೊಳಿಸಿರುವ ನ್ಯಾಯಾಲಯವು, ಅಧ್ಯಕ್ಷರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
ಈ ತೀರ್ಪು ಟ್ರಂಪ್ ಸರ್ಕಾರಕ್ಕೆ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಭಾರಿ ಮುಖಭಂಗ ಉಂಟುಮಾಡಿದೆ.
ಎರಡನೇ ಬಾರಿಗೆ ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡೊನಾಲ್ಡ್ ಟ್ರಂಪ್, ಅಮೆರಿಕಾ ಫಸ್ಟ್ ಎಂಬ ನೀತಿಯ ಅಡಿಯಲ್ಲಿ ಚೀನಾ, ಮೆಕ್ಸಿಕೋ, ಕೆನಡಾ ಮತ್ತು ಯುರೋಪಿಯನ್ ಒಕ್ಕೂಟ ಸೇರಿದಂತೆ ಹಲವು ದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ. 10 ರಿಂದ ಶೇ. 60 ರಷ್ಟು ಭಾರಿ ಸುಂಕಗಳನ್ನು ವಿಧಿಸಿದ್ದರು. ಇದು ಅಮೆರಿಕದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಕಾರಣವಾಗಿತ್ತು ಮತ್ತು ಜಾಗತಿಕ ವ್ಯಾಪಾರ ಸಮರಕ್ಕೆ ದಾರಿ ಮಾಡಿಕೊಟ್ಟಿತ್ತು.
ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಬರೆದ 6-3 ತೀರ್ಪಿನಲ್ಲಿ, ಟ್ರಂಪ್ ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (IEEPA) ಯನ್ನು ಬಳಸಿಕೊಂಡು ವ್ಯಾಪಕ ಆಮದು ತೆರಿಗೆಗಳನ್ನು ವಿಧಿಸುವ ಮೂಲಕ ತಮ್ಮ ಅಧಿಕಾರವನ್ನು ಮೀರಿದ್ದಾರೆ ಎಂಬ ಕೆಳ ನ್ಯಾಯಾಲಯದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಕೋರ್ಟ್ ಹೇಳಿದ್ದೇನು..?
ಟ್ರಂಪ್ ಸುಂಕಗಳನ್ನು ವಿಧಿಸುವ ಮೂಲಕ ಸಂವಿಧಾನವು ನೀಡಿದ ಅಧಿಕಾರವನ್ನು ಮೀರಿದ್ದು, ತೆರಿಗೆ ಮತ್ತು ಸುಂಕಗಳ ನಿರ್ಧಾರವು ಕಾಂಗ್ರೆಸ್ (ಅಮೆರಿಕದ ಸಂಸತ್ತು) ವ್ಯಾಪ್ತಿಗೆ ಬರುತ್ತದೆಯೇ ಹೊರತು ಕೇವಲ ಅಧ್ಯಕ್ಷರ ನಿರ್ಧಾರವಲ್ಲ ಎಂದು ಕೋರ್ಟ್ ಹೇಳಿದೆ.
ಟ್ರಂಪ್ 'ಇಂಟರ್ನ್ಯಾಷನಲ್ ಎಮರ್ಜೆನ್ಸಿ ಎಕನಾಮಿಕ್ ಪವರ್ಸ್ ಆಕ್ಟ್' (IEEPA) ಅಡಿಯಲ್ಲಿ ಈ ಸುಂಕಗಳನ್ನು ಜಾರಿಗೆ ತಂದಿದ್ದರು. ಈ ಕಾನೂನನ್ನು ರಾಷ್ಟ್ರೀಯ ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕು ಎನ್ನುವ ನಿಯಮವಿದ್ದು, ಆದರೆ ಈಗ ಅದನ್ನು ಸಾಮಾನ್ಯ ವ್ಯಾಪಾರ ನೀತಿಗಾಗಿ ಬಳಸಿರುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಟ್ರಂಪ್ ಸರ್ಕಾರಕ್ಕೆ ಬಿಗ್ ಶಾಕ್
ಡೊನಾಲ್ಡ್ ಟ್ರಂಪ್ ಈ ಸುಂಕಗಳ ಮೂಲಕ ಅಮೆರಿಕದ ಉತ್ಪಾದನಾ ವಲಯವನ್ನು ಬಲಪಡಿಸುತ್ತೇನೆ ಎಂದಿದ್ದರು, ಇದು ಟ್ರಂಪ್ರ ಚುನಾವಣಾ ಭರವಸೆಗಳಲ್ಲೂ ಸ್ಥಾನ ಪಡೆದಿದೆ ಎನ್ನಲಾಗಿದ್ದು, ಆದರೆ, ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾಗಿ ಈಗ ವಿಧಿಸಲಾದ ಎಲ್ಲಾ ಸುಂಕಗಳು ತಕ್ಷಣದಿಂದಲೇ ರದ್ದಾಗಲಿವೆ. ಈಗ ಅದು ಕಾನೂನು ಸಂಕಷ್ಟಕ್ಕೆ ಸಿಲುಕಿದೆ.
ನ್ಯಾಯಾಲಯದ ಈ ತೀರ್ಪು ಹೊರಬೀಳುತ್ತಿದ್ದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬಂದಿದೆ ಎನ್ನುವ ವರದಿಗಳು ಹೊರಹೊಮ್ಮಿದ್ದು, ವಿಶೇಷವಾಗಿ ಚೀನಾ ಮತ್ತು ಮೆಕ್ಸಿಕೋದ ರಫ್ತುದಾರರು ನಿಟ್ಟುಸಿರು ಬಿಟ್ಟಿದ್ದಾರೆ ಎನ್ನಲಾಗಿದೆ. ಆಪಲ್, ವಾಲ್ಮಾರ್ಟ್ ನಂತಹ ದೈತ್ಯ ಕಂಪನಿಗಳು ಈ ತೀರ್ಪನ್ನು ಸ್ವಾಗತಿಸಿವೆ ಎಂದು ವರದಿಯಾಗಿದೆ.
ಸುಪ್ರೀಂ ಕೋರ್ಟ್‌ನ ಈ ತೀರ್ಪು ಅಮೆರಿಕದ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲಾಗಲಿದ್ದು, ಇದು ಸರ್ವಾಧಿಕಾರಿ ಧೋರಣೆಗೆ ನ್ಯಾಯಾಂಗ ಹಾಕಿದ ಬ್ರೇಕ್ ಎಂದೇ ವಿಶ್ಲೇಷಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಟ್ರಂಪ್ ಸರ್ಕಾರವು ಹೊಸ ಕಾನೂನು ತರಲು ಪ್ರಯತ್ನಿಸುತ್ತದೆಯೇ ಅಥವಾ ನ್ಯಾಯಾಲಯದ ಆದೇಶಕ್ಕೆ ತಲೆ ಬಾಗುತ್ತದೆಯೋ ಕಾದು ನೋಡಬೇಕಿದೆ(ಏಜೆನ್ಸೀಸ್).