Mary Millben > ಆರ್‌ಎಸ್‌ಎಸ್ ಕಾರ್ಯಕ್ರಮ ವಿರೋಧಿಸಿದ ಮಮ್ದಾನಿಗೆ ಅಮೆರಿಕನ್ ನಟಿ ಮಿಲ್‌ಬೆನ್ ತಿರುಗೇಟು 
ದೇಶ

ಅವ್ರಿಗೆ ಮೋದಿ-ಬಿಜೆಪಿ ಅಂದ್ರೆ ದ್ವೇಷ!: ಆರ್‌ಎಸ್‌ಎಸ್ ಕಾರ್ಯಕ್ರಮ ವಿರೋಧಿಸಿದ ಮಮ್ದಾನಿಗೆ ಅಮೆರಿಕನ್ ನಟಿ ಮಿಲ್‌ಬೆನ್ ಖಡಕ್ ತಿರುಗೇಟು | Mary Millben

ನ್ಯೂಯಾರ್ಕ್‌ನ ಐಕಾನಿಕ್ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾಗವಹಿಸಲಿರುವ ಕಾರ್ಯಕ್ರಮವನ್ನು ವಿರೋಧಿಸುತ್ತಿರುವ ನ್ಯೂಯಾರ್ಕ್ ಮೇಯರ್ ಝೋಹ್ರಾನ್ ಮಮ್ದಾನಿ ಸೇರಿದಂತೆ ಇತರ ಟೀಕಾಕಾರರನ್ನು ಅಮೆರಿಕದ ಪ್ರಸಿದ್ಧ ಗಾಯಕಿ ಹಾಗೂ ನಟಿ ಮೇರಿ ಮಿಲ್‌ಬೆನ್ (Mary Millben) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮೋಹನ್ ಭಾಗವತ್ ಅವರ ವಿರೋಧಿಗಳು ಕೇವಲ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮೇಲಿನ ದ್ವೇಷದಿಂದ ಪ್ರಚೋದಿತರಾಗಿದ್ದಾರೆ ಎಂದು ಆಫ್ರಿಕನ್-ಅಮೆರಿಕನ್ ನಟಿ ಆರೋಪಿಸಿದ್ದಾರೆ.

ಮೋಹನ್ ಭಾಗವತ್ ಭಾಗವಹಿಸುತ್ತಿರುವ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಕಾರ್ಯಕ್ರಮವನ್ನು ಮಮ್ದಾನಿ ಹಾಗೂ ಸಮಾಜವಾದಿಗಳು ವಿರೋಧಿಸುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮೇಲಿನ ಅವರ ದ್ವೇಷವೇ ಕಾರಣ ಎಂದು ಮಿಲ್‌ಬೆನ್ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಭಾಗವತ್ ಅವರ ವಿರೋಧಿಗಳ ರಾಜಕೀಯ ಸಿದ್ಧಾಂತವನ್ನು ಟೀಕಿಸಿದ ನಟಿ, ಈ ಸಮಾಜವಾದಿ ಸಿದ್ಧಾಂತವನ್ನು ಒಪ್ಪಿಕೊಳ್ಳುವ ಜನರಿಗೆ ಬಂಡವಾಳಶಾಹಿ ಅರ್ಥವಾಗುವುದಿಲ್ಲ. ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಸಂಸ್ಥೆಯು ಸಮಾಜವಾದಿಗಳ ಮಾತುಗಳನ್ನು ಕೇಳುವುದಿಲ್ಲ. ಅವರು ಬಂಡವಾಳಶಾಹಿಗೆ ಉತ್ತರಿಸುತ್ತಾರೆ. ಹಾಗಾಗಿ ಈ ಕಾರ್ಯಕ್ರಮ ಖಂಡಿತವಾಗಿಯೂ ನಡೆಯುತ್ತದೆ ಎಂದಿದ್ದಾರೆ.

2023ರಲ್ಲಿ ವಾಷಿಂಗ್ಟನ್‌ನ ರೋನಾಲ್ಡ್ ರೇಗನ್ ಭವನದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವ ಮೊದಲು ಭಾರತದ ರಾಷ್ಟ್ರಗೀತೆಯನ್ನು ಹಾಡಿದ್ದ ಗಾಯಕಿ, ನೀವು ಬಂಡವಾಳಶಾಹಿಗಳಾಗಿ, ಹಣ ಸಂಗ್ರಹಿಸಿ, ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಅನ್ನು ಬಾಡಿಗೆಗೆ ಪಡೆಯಿರಿ ಮತ್ತು ನಿಮ್ಮ ಮೋದಿ ವಿರೋಧಿ ಮೂರ್ಖತನಕ್ಕಾಗಿ ನಿಮ್ಮದೇ ಆದ ರ್ಯಾಲಿಯನ್ನು ಆಯೋಜಿಸಿ ಎಂದು ನ್ಯೂಯಾರ್ಕ್ ಮೇಯರ್ ಮತ್ತು ಸಮಾಜವಾದಿಗಳಿಗೆ ಮೇರಿ ಮಿಲ್‌ಬೆನ್ ಸಲಹೆಯೊಂದನ್ನು ನೀಡಿದ್ದಾರೆ.
ಕಾರ್ಯಕ್ರಮದ ಏಕತೆ ಎಂಬ ಶೀರ್ಷಿಕೆ ನನಗೆ ಇಷ್ಟವಾಯಿತು. ನಾವೆಲ್ಲರೂ ಒಂದೇ ಕುಟುಂಬ. ಈ ರ್ಯಾಲಿಯು ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅರ್ಥಪೂರ್ಣ ಸಂವಾದಕ್ಕೆ ವೇದಿಕೆಯಾಗಲಿದೆ ಎಂಬ ಭರವಸೆ ಇದೆ ಎಂದು ಮೇರಿ ಮಿಲ್‌ಬೆನ್ ಹೇಳಿದ್ದಾರೆ. ಹಾಲಿವುಡ್ ನಟಿ ಹಾಗೂ ಗಾಯಕಿಯಾಗಿರುವ ಇವರು, ರಾಷ್ಟ್ರಗೀತೆ ಜನ ಗಣ ಮನ ಮತ್ತು ಓಂ ಜೈ ಜಗದೀಶ್ ಹರೇ ಭಜನೆ ಹಾಡುವ ಮೂಲಕ ಭಾರತೀಯರಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ.
ಕಾರ್ಯಕ್ರಮದ ವೆಬ್‌ಸೈಟ್ ಪ್ರಕಾರ, ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್ ಶನಿವಾರ ಮ್ಯಾನ್‌ಹ್ಯಾಟನ್ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ಆಗಸ್ಟ್ 29 ರಂದು ನಡೆಯಲಿರುವ ಈ ಸಮಾವೇಶವನ್ನು ಯುನಿವರ್ಸಲ್ ಒನ್‌ನೈಸ್ ಸೆಲೆಬ್ರೇಷನ್ (ಜಾಗತಿಕ ಏಕತಾ ಆಚರಣೆ) ಎಂದು ಕರೆಯಲಾಗಿದ್ದು, ಹಿಂದೂ ಅಮೆರಿಕನ್ ಸಮುದಾಯವನ್ನು ಒಂದೆಡೆ ಸೇರಿಸುವ ಉದ್ದೇಶ ಹೊಂದಿದೆ. ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್‌ಮೆಂಟ್ ಅಂಡ್ ಡೈಲಾಗ್ ಸಂಸ್ಥೆಯು ಇದನ್ನು ಆಯೋಜಿಸಿದ್ದು, ಹಲವು ಹಿಂದೂ ಅಮೆರಿಕನ್ ಸಂಘಟನೆಗಳು ಬೆಂಬಲ ನೀಡಿವೆ.

ಕಾರ್ಯಕ್ರಮಕ್ಕೆ ವಿರೋಧ

ಭಾಗವತ್ ಅವರ ಉಪಸ್ಥಿತಿ ಹಾಗೂ ಆರ್‌ಎಸ್‌ಎಸ್ ಇತಿಹಾಸವನ್ನು ಉಲ್ಲೇಖಿಸಿ ಹಲವು ಸ್ಥಳೀಯ ಸಂಸ್ಥೆಗಳು ಈ ಕಾರ್ಯಕ್ರಮವನ್ನು ವಿರೋಧಿಸಿವೆ. ನ್ಯೂಯಾರ್ಕ್ ನಗರದ ಪ್ರಥಮ ಮುಸ್ಲಿಂ ಹಾಗೂ ಭಾರತೀಯ ಮೂಲದ ಮೇಯರ್ ಝೋಹ್ರಾನ್ ಮಮ್ದಾನಿ ಕೂಡ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಖಾಸಗಿ ಕಾರ್ಯಕ್ರಮವನ್ನು ರದ್ದುಗೊಳಿಸಲು ನಗರಕ್ಕೆ ಕಾನೂನು ವ್ಯಾಪ್ತಿ ಇದೆಯೇ ಎಂದು ಕೇಳಿದಾಗ, ನಾನು ಈ ರ್ಯಾಲಿಯನ್ನು ಬೆಂಬಲಿಸುವುದಿಲ್ಲ. ಆದರೆ, ಖಾಸಗಿ ಕಾರ್ಯಕ್ರಮವೊಂದನ್ನು ರದ್ದುಗೊಳಿಸುವ ಕಾನೂನು ಅಧಿಕಾರ ನಗರಕ್ಕೆ ಇದೆಯೇ ಎಂಬುದು ನನಗೆ ತಿಳಿದಿಲ್ಲ ಎಂದು ಮಮ್ದಾನಿ ಸ್ಪಷ್ಟಪಡಿಸಿದ್ದಾರೆ.
ತಮ್ಮ ಹಿನ್ನೆಲೆಯನ್ನು ನೆನಪಿಸಿಕೊಂಡ ಮಮ್ದಾನಿ, ನನ್ನ ಕುಟುಂಬ ನನಗೆ ಪರಿಚಯಿಸಿದ ಭಾರತವು ಪ್ರತಿಯೊಬ್ಬರನ್ನೂ ಒಳಗೊಳ್ಳುವ ಜಾತ್ಯತೀತ ಮತ್ತು ಬಹುತ್ವದ ಸಮಾಜವಾಗಿತ್ತು. ಆದರೆ, ಪ್ರಸ್ತುತ ಸಮಾಜವನ್ನು ಹೊರಗಿಡುವ ಸಿದ್ಧಾಂತ ಆಧರಿತ ಚಳವಳಿಗಳು ತಲೆಎತ್ತುತ್ತಿರುವುದು ಕಳವಳಕಾರಿ ಸಂಗತಿ ಎಂದರು(ಏಜೆನ್ಸೀಸ್​).