US charges Bishnoi gang in Nijjar killing
- ಅಮೆರಿಕದ FBI ನೇತೃತ್ವದಲ್ಲಿ ಕೆನಡಾ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಭಾರಿ ಕಾರ್ಯಾಚರಣೆ.
- ಬಿಷ್ಣೋಯ್ ಗ್ಯಾಂಗ್ನ 24 ಮಂದಿಯನ್ನು ಬಂಧಿಸಲಾಗಿದ್ದು, 10 ಮಂದಿ ಪರಾರಿ.
- ಭಾರತದ ಜೈಲಿನಲ್ಲೇ ಇದ್ದುಕೊಂಡು ಹರ್ದೀಪ್ ಸಿಂಗ್ ನಿಜ್ಜರ್ ಕೊಲೆಗೆ ಸ್ಕೆಚ್.
ವಾಷಿಂಗ್ಟನ್: ಕೆನಡಾದಲ್ಲಿ ನಡೆದ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿಸಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹಾಗೂ ಆತನ ಆಪ್ತ ಸತಿಂದರ್‌ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ವಿರುದ್ಧ ಅಮೆರಿಕ ನ್ಯಾಯಾಲಯ ದೋಷಾರೋಪಣೆ ಹೊರಿಸಿದೆ. ಇದು ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗಿದ್ದ ಈ ಹತ್ಯೆಯ ಹಿಂದೆ ಬಿಷ್ಣೋಯ್ ಗ್ಯಾಂಗ್ ಕೈವಾಡ ಇರುವುದಾಗಿ ಅಮೆರಿಕದ ತನಿಖಾ ಸಂಸ್ಥೆಗಳು ಪತ್ತೆಹಚ್ಚಿದ್ದು, ಇದು ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಅಮೆರಿಕದ ಎಫ್‌ಬಿಐ (FBI) ನೇತೃತ್ವದಲ್ಲಿ ನಡೆದ 'ಆಪರೇಷನ್ ಹಾರ್ಡ್ ಬಾಲ್' ಎಂಬ ಬೃಹತ್ ಅಂತರರಾಷ್ಟ್ರೀಯ ಜಂಟಿ ಕಾರ್ಯಾಚರಣೆಯ ಭಾಗವಾಗಿ ಈ ಆರೋಪಗಳನ್ನು ಘೋಷಿಸಲಾಗಿದೆ. ಈ ಕಾರ್ಯಾಚರಣೆಯ ಮೂಲಕ ಅಮೆರಿಕ, ಕೆನಡಾ ಮತ್ತು ಯುರೋಪ್‌ನಾದ್ಯಂತ ಬಿಷ್ಣೋಯ್ ಗ್ಯಾಂಗ್‌ನ 24 ಶಂಕಿತ ಸದಸ್ಯರು ಹಾಗೂ ಸಹಚರರನ್ನು ಬಂಧಿಸಲಾಗಿದೆ.
ಅಮೆರಿಕದ ನ್ಯಾಯಾಂಗ ಇಲಾಖೆಯ ಪ್ರಕಾರ, ವರ್ಷಗಳ ಕಾಲ ನಡೆದ ಸುದೀರ್ಘ ತನಿಖೆಯ ಭಾಗವಾಗಿ ಅಧಿಕಾರಿಗಳು ಕ್ಯಾಲಿಫೋರ್ನಿಯಾ, ಇಂಡಿಯಾನಾ, ಜಾರ್ಜಿಯಾ, ಕೆನಡಾ ಮತ್ತು ಸ್ಪೇನ್‌ನಲ್ಲಿ 50 ಕ್ಕೂ ಹೆಚ್ಚು ಕಡೆ ಶೋಧನಾ ವಾರಂಟ್‌ಗಳನ್ನು ಜಾರಿಗೊಳಿಸಿ, ಶಂಕಿತರನ್ನು ಬಂಧಿಸಿದ್ದಾರೆ. ಈ ಸಂಘಟಿತ ಜಂಟಿ ಕಾರ್ಯಾಚರಣೆಯನ್ನು ಪ್ರಕಟಿಸಿದ ನ್ಯಾಯಾಂಗ ಇಲಾಖೆಯು, ಭಾರತ ಮೂಲದ ಮೂರು ಸಂಘಟಿತ ಅಪರಾಧ ಗುಂಪುಗಳಿಗೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಫೆಡರಲ್ ದೋಷಾರೋಪ ಪಟ್ಟಿಗಳಲ್ಲಿ ಒಟ್ಟು 37 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದೆ. ಇವರಲ್ಲಿ 24 ಮಂದಿಯನ್ನು ಈಗಾಗಲೇ ಬಂಧಿಸಲಾಗಿದ್ದು, 10 ಮಂದಿ ಇನ್ನು ಕೂಡ ತಲೆಮರೆಸಿಕೊಂಡಿದ್ದಾರೆ.
ದೋಷಾರೋಪ ಪಟ್ಟಿಯಲ್ಲೇನಿದೆ?
ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ದೋಷಾರೋಪ ಪಟ್ಟಿಯ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಭಾರತದ ಜೈಲಿನಲ್ಲಿದ್ದರೂ ನಿಷೇಧಿತ ಮೊಬೈಲ್ ಫೋನ್‌ಗಳು ಹಾಗೂ ಇಂಟರ್ನೆಟ್ ಸಾಧನಗಳನ್ನು ಬಳಸಿಕೊಂಡು ಜಾಗತಿಕ ಮಟ್ಟದ ಕ್ರಿಮಿನಲ್ ನೆಟ್‌ವರ್ಕ್ ಮುನ್ನಡೆಸುತ್ತಿದ್ದಾನೆ. ಈ ಗ್ಯಾಂಗ್ ಅಮೆರಿಕ, ಕೆನಡಾ ಮತ್ತು ಯುರೋಪ್‌ಗಳಲ್ಲಿ ರಾಜಕೀಯ ಹತ್ಯೆಗಳು, ಸುಲಿಗೆ, ಕಿಡ್ನ್ಯಾಪ್, ಮಾದಕ ದ್ರವ್ಯ ಸಾಗಣೆ ಮತ್ತು ಮಾನವ ಕಳ್ಳಸಾಗಣೆಯಂತಹ ಭೀಕರ ಅಪರಾಧಗಳನ್ನು ಎಸಗುತ್ತಿರುವುದು ಪತ್ತೆಯಾಗಿದೆ. ಈ ಸಿಂಡಿಕೇಟ್‌ನ ಉತ್ತರ ಅಮೆರಿಕದ ನಾಯಕನಾಗಿ ಗೋಲ್ಡಿ ಬ್ರಾರ್ ಹಾಗೂ ಯುರೋಪ್ ವ್ಯವಹಾರಗಳ ಉಸ್ತುವಾರಿಯಾಗಿ ರೋಹಿತ್ ಗೋದಾರ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಮೆರಿಕದ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.
ಈ ತಂಡವು ಭಾರತೀಯ ಮೂಲದ ಡಯಾಸ್ಪೊರಾ (ವಲಸಿಗರು) ಸಮುದಾಯವನ್ನು ಗುರಿಯಾಗಿಸಿಕೊಂಡು ವಾಟ್ಸಾಪ್ ಮೂಲಕ ಕೋಟ್ಯಂತರ ರೂಪಾಯಿ ಸುಲಿಗೆಗೆ ಯತ್ನಿಸುತ್ತಿತ್ತು. ಮೂರು ಪ್ರಮುಖ ಕ್ರಿಮಿನಲ್ ಸಿಂಡಿಕೇಟ್‌ಗಳ ಮೇಲೆ ದಾಳಿಅಮೆರಿಕ ತನಿಖಾ ಸಂಸ್ಥೆಗಳು ಒಟ್ಟು ಮೂರು ಪ್ರತ್ಯೇಕ ದೋಷಾರೋಪಣೆಗಳನ್ನು ದಾಖಲಿಸಿದ್ದು, ಭಾರತ ಮೂಲದ ಮೂರು ಸಂಘಟಿತ ಅಪರಾಧ ಗುಂಪುಗಳನ್ನು ಗುರಿಯಾಗಿಸಿಕೊಂಡಿವೆ.
ಮೂರು ಪ್ರಮುಖ ಕ್ರಿಮಿನಲ್ ಸಿಂಡಿಕೇಟ್‌ಗಳ ಮೇಲೆ ದಾಳಿ
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೊಕೇನ್ ಸಾಗಣೆ, ಸುಲಿಗೆ ಹಾಗೂ ಪ್ರಮುಖ ಹತ್ಯೆಗಳ ಹೊಣೆ ಹೊತ್ತಿದೆ. ಇನ್ನು ಜಗ್ಗು ಭಗವಾನ್ಪುರಿಯಾ ಸಂಘಟನೆಯು ಕೊಲೆಗಡುಕತನ, ಶಸ್ತ್ರಾಸ್ತ್ರ ಕಳ್ಳಸಾಗಣೆ ಹಾಗೂ ಭಾರತದ ಭ್ರಷ್ಟ ಅಧಿಕಾರಿಗಳನ್ನು ಬಳಸಿಕೊಂಡು ಎದುರಾಳಿಗಳನ್ನು ಮಟ್ಟಹಾಕುತ್ತಿದ್ದ ಕ್ರಿಮಿನಲ್ ಜಾಲ. ಅಮೆರಿಕ, ಕೆನಡಾ ಮಾತ್ರವಲ್ಲದೆ ಬ್ರಿಟನ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಿಗೂ ಇದರ ಜಾಲ ಹರಡಿದೆ. ರವಿಂದರ್ ಸಿಂಗ್ ಧಾಂಡಾ ಜಾಲ: ದಕ್ಷಿಣ ಕ್ಯಾಲಿಫೋರ್ನಿಯಾದಿಂದ ಕೆನಡಾಕ್ಕೆ ಭಾರಿ ಪ್ರಮಾಣದ ಕೊಕೇನ್ ಮತ್ತು ಮೆಥಾಂಫೆಟಮೈನ್ ಮಾದಕ ದ್ರವ್ಯವನ್ನು ಸಾಗಿಸುತ್ತಿದ್ದ ಕೆನಡಾ ಮೂಲದ ಡ್ರಗ್ ಜಾಲ ಹೊಂದಿದೆ ಎನ್ನಲಾಗಿದೆ.
ಜಂಟಿ ಕಾರ್ಯಾಚರಣೆ
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಾದ ಸಂದರ್ಭದಲ್ಲಿ ಅಂದಿನ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಭಾರತ ಸರ್ಕಾರದ ಏಜೆಂಟರ ಲಿಂಕ್ ಇರುವುದಾಗಿ ಆರೋಪಿಸಿದ್ದರು. ಭಾರತ ಇದನ್ನು ಹಾಸ್ಯಾಸ್ಪದ ಮತ್ತು ದುರುದ್ದೇಶಪೂರಿತ ಎಂದು ತಳ್ಳಿಹಾಕಿತ್ತು. ಇದೀಗ ಅಮೆರಿಕದ ಈ ತನಿಖೆಯು ಹತ್ಯೆಯ ನಿಜವಾದ ಸೂತ್ರಧಾರಿಗಳನ್ನು ಬಹಿರಂಗಪಡಿಸಿದೆ.
ಈ ಬೃಹತ್ ಕಾರ್ಯಾಚರಣೆಯನ್ನು ಅಮೆರಿಕದ ಎಫ್‌ಬಿಐ , ಲಾಸ್ ಏಂಜಲೀಸ್ ಪೊಲೀಸ್, ಕೆನಡಾದ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಮತ್ತು ಯುರೋಪಿಯನ್ ಕಾನೂನು ಜಾರಿ ಸಂಸ್ಥೆಗಳು ಜಂಟಿಯಾಗಿ ನಡೆಸಿವೆ. "ಭಯ, ಡ್ರಗ್ಸ್ ಮತ್ತು ಹಿಂಸಾಚಾರವನ್ನು ಹರಡುವ ಅಂತರರಾಷ್ಟ್ರೀಯ ಕ್ರಿಮಿನಲ್ ಗ್ಯಾಂಗ್‌ಗಳು ಸರ್ಕಾರದ ಸಂಪೂರ್ಣ ಕಾನೂನು ಬಲವನ್ನು ಎದುರಿಸಬೇಕಾಗುತ್ತದೆ" ಎಂದು ಅಮೆರಿಕದ ಅಟಾರ್ನಿ ಬಿಲ್ ಎಸ್ಸೈಲಿ ಮತ್ತು ಎಫ್‌ಬಿಐನ ಪ್ಯಾಟ್ರಿಕ್ ಗ್ರ್ಯಾಂಡಿ ಎಚ್ಚರಿಸಿದ್ದಾರೆ, (ಏಜೆನ್ಸೀಸ್).