ಸಾಂದರ್ಭಿಕ ಚಿತ್ರ 
ದೇಶ

ಪಹಲ್ಗಾಮ್​ ದಾಳಿಯ ಹೆಸರಲ್ಲಿ ನಿವೃತ್ತ ವಕೀಲನನ್ನು ಡಿಜಿಟಲ್​ ಅರೆಸ್ಟ್​ ಮಾಡಿ 4 ಕೋಟಿ ರೂ. ಲಪಟಾಯಿಸಿದ ಸೈಬರ್​ ವಂಚಕರು! Pahalgam Attack

ದೆಹಲಿ ಮೂಲದವರಾಗಿರುವ ತಲ್ವಾರ್ ಅವರು ತಮ್ಮ ನೊಯ್ಡಾದ ಪೂರ್ವಜರ ಮನೆಯ ನವೀಕರಣ ಕಾರ್ಯವನ್ನು ಮೇಲ್ವಿಚಾರಣೆ ಮಾಡಲು ಭಾರತಕ್ಕೆ ಆಗಮಿಸಿದ್ದ ವೇಳೆ ಈ ಡಿಜಿಟಲ್​ ವಂಚನೆಗೆ ಬಲಿಯಾಗಿದ್ದಾರೆ.

ನವದೆಹಲಿ: ಸಿಬಿಐ ಮತ್ತು ಎನ್‌ಐಎ ಅಧಿಕಾರಿಗಳಂತೆ ನಟಿಸಿದ ಸೈಬರ್ ವಂಚಕರು, ಜಮ್ಮುವಿನ ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದನಾ ದಾಳಿಯೊಂದಿಗೆ ( Pahalgam Attack ) ನಂಟು ಕಲ್ಪಿಸಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ವಕೀಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅತುಲ್ ತಲ್ವಾರ್ ಅವರನ್ನು ಡಿಜಿಟಲ್ ಬಂಧನದಲ್ಲಿಟ್ಟು ಸುಮಾರು 4 ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ದೋಚಿದ್ದಾರೆ.

ದೆಹಲಿ ಮೂಲದವರಾಗಿರುವ ತಲ್ವಾರ್ ಅವರು ತಮ್ಮ ನೊಯ್ಡಾದ ಪೂರ್ವಜರ ಮನೆಯ ನವೀಕರಣ ಕಾರ್ಯವನ್ನು ಮೇಲ್ವಿಚಾರಣೆ ಮಾಡಲು ಭಾರತಕ್ಕೆ ಆಗಮಿಸಿದ್ದ ವೇಳೆ ಈ ಡಿಜಿಟಲ್​ ವಂಚನೆಗೆ ಬಲಿಯಾಗಿದ್ದಾರೆ.

ಕಳೆದ ಅಕ್ಟೋಬರ್ 17ರಂದು ಅತುಲ್ ತಲ್ವಾರ್ ಅವರಿಗೆ ಒಂದು ದೂರವಾಣಿ ಕರೆ ಬಂದಿತು. ಕರೆ ಮಾಡಿದವನು ತಾನು ಮುಂಬೈನ ಕೊಲಾಬಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೆಂದು ಪರಿಚಯಿಸಿಕೊಂಡನು. ಅಲ್ಲದೆ, ಪಹಲ್ಗಾಮ್ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಗುರುತಿನ ಚೀಟಿ ಪತ್ತೆಯಾಗಿದೆ ಎಂಬ ಗಂಭೀರ ಆರೋಪ ಮಾಡಿದನು. ಇದನ್ನು ಕೇಳಿ ತಲ್ವಾರ್​ ಅವರು ಒಂದು ಕ್ಷಣ ಆಘಾತಕ್ಕೆ ಒಳಗಾದರು.

ಇದಿಷ್ಟೇ ಅಲ್ಲದೆ, ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ಬಳಸಿ ಕೆನರಾ ಬ್ಯಾಂಕ್​ನಲ್ಲಿ ಖಾತೆ ತೆರೆಯಲಾಗಿದೆ. ಇದರ ಮೂಲಕ 53 ಕೋಟಿ ರೂಪಾಯಿಗಳನ್ನು ವರ್ಗಾಯಿಸಲಾಗಿದೆ ಮತ್ತು ಈ ವಹಿವಾಟಿಗೆ 5 ಕೋಟಿ ರೂಪಾಯಿ ಕಮಿಷನ್ ಪಡೆಯಲಾಗಿದೆ ಎಂಬ ಬೆದರಿಕೆ ಸಹ ಹಾಕಿದನು. ತಲ್ವಾರ್ ಅವರು ಇದನ್ನು ಸಂಪೂರ್ಣವಾಗಿ ನಿರಾಕರಿಸಿದಾಗ, ಮತ್ತೊಬ್ಬ ವ್ಯಕ್ತಿಯು ಕರೆಗೆ ಧ್ವನಿಗೂಡಿಸಿ ತಕ್ಷಣವೇ ಬಂಧಿಸುವುದಾಗಿ ಹೆದರಿಸಿದನು.

ಬೆದರಿಕೆಗೆ ಹೆದರಿದ ತಲ್ವಾರ್ ಅವರನ್ನು ಮತ್ತಷ್ಟು ನಂಬಿಸಲು ಮತ್ತೊಂದು ಸಂಚು ರೂಪಿಸಿದ ವಂಚಕರು ನಕಲಿ ಸಿಬಿಐ ಸಹಾಯಕ ನಿರ್ದೇಶಕರ ಹೆಸರಿನಲ್ಲಿ ತಲ್ವಾರ್​ ಅವರ ವಾಟ್ಸ್​ಆ್ಯಪ್​ಗೆ ಗೌಪ್ಯ ಪತ್ರವೊಂದನ್ನು ಕಳುಹಿಸಿದರು. ಅಲ್ಲದೆ, ಸುಮಾರು 20 ದಿನಗಳ ಕಾಲ ಅವರನ್ನು ನಿರಂತರ ಆಡಿಯೋ ಮತ್ತು ವಿಡಿಯೋ ಕಣ್ಗಾವಲಿನಲ್ಲಿ ಇರಿಸಿಕೊಂಡರು. ಅವರ ಚಲನವಲನಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವುದರ ಜತೆಗೆ, ಯಾರಾದರೂ ಭೇಟಿ ಮಾಡಲು ಬಂದರೆ ಆ ಬಗ್ಗೆ ಮಾಹಿತಿ ನೀಡುವಂತೆ ತಾಕೀತು ಮಾಡಿದರು. ಅಕ್ಟೋಬರ್ 18ರಂದು ವಂಚಕರು ಮತ್ತೊಂದು ನಾಟಕವಾಡಿ, ತಲ್ವಾರ್ ಅವರ ನಿವಾಸದ ಬಳಿ ಭಯೋತ್ಪಾದಕರೊಂದಿಗೆ ನಂಟಿರುವ ಇಬ್ಬರು ಸಶಸ್ತ್ರ ಕಾವಲುಗಾರರನ್ನು ಬಂಧಿಸಲಾಗುತ್ತಿದೆ ಎಂದು ವಿಡಿಯೋದಲ್ಲಿ ತೋರಿಸಿ ಅವರಲ್ಲಿ ಮತ್ತಷ್ಟು ಭಯವನ್ನು ಹುಟ್ಟಿಸಿದರು.

ಅಪರಾಧ ಕೃತ್ಯವನ್ನು ಮುಂದುವರಿಸುತ್ತಾ ಅಕ್ಟೋಬರ್ 19ರಂದು ವಂಚಕರು ಸಿಬಿಐ ಮತ್ತು ಎನ್‌ಐಎ ಅಧಿಕಾರಿಗಳಂತೆ ನಟಿಸಿ ವಿಡಿಯೋ ಕರೆಗಳ ಮೂಲಕ ಆನ್‌ಲೈನ್ ವಿಚಾರಣೆಗಳನ್ನು ನಡೆಸಿದರು. ಈ ನಕಲಿ ವಿಚಾರಣೆಯ ವೇಳೆ ತಲ್ವಾರ್ ಅವರ ವೈಯಕ್ತಿಕ ಹಾಗೂ ಬ್ಯಾಂಕ್ ಖಾತೆಗಳ ಸಂಪೂರ್ಣ ವಿವರಗಳನ್ನು ಕಬಳಿಸಿದರು. ಸೋಗಿನ ಅಧಿಕಾರಿಗಳ ಸೂಚನೆಯಂತೆ ತಲ್ವಾರ್ ಅವರು ತಮ್ಮ ಸಿಟಿಬ್ಯಾಂಕ್ ವೈಯಕ್ತಿಕ ನಿವೃತ್ತಿ ಖಾತೆಯಲ್ಲಿದ್ದ ಸುಮಾರು 3,80,000 ಡಾಲರ್‌ಗಳ ಹಣವನ್ನು ಲಿಕ್ವಿಡೇಟ್ ಮಾಡಿ ತನಿಖೆಯ ಹೆಸರಿನಲ್ಲಿ ವರ್ಗಾಯಿಸಿದರು. ಇದರೊಂದಿಗೆ ಎರಡು ಬ್ರೋಕರೇಜ್ ಖಾತೆಗಳಿಂದ ಹಣವನ್ನು ವರ್ಗಾಯಿಸಲು ನಕಲಿ ಐಟಿ ತಜ್ಞರೊಬ್ಬರ ಸಹಾಯವನ್ನೂ ಪಡೆದುಕೊಳ್ಳಲಾಯಿತು.

ವಂಚನೆಯ ಭಾಗವಾಗಿ ಆನ್‌ಲೈನ್ ಕ್ರಿಪ್ಟೋಕರೆನ್ಸಿ ಆಧಾರಿತ ಖಾತೆಯನ್ನು ತೆರೆಯುವಂತೆ ತಲ್ವಾರ್ ಅವರನ್ನು ಒಪ್ಪಿಸಲಾಯಿತು. ತೆರಿಗೆ ಪಾವತಿಗಳ ಹೆಸರಿನಲ್ಲಿ ಸುಮಾರು 1.5 ಕೋಟಿ ರೂಪಾಯಿಗಳನ್ನು ಕಡಿತಗೊಳಿಸಿಕೊಳ್ಳಲಾಯಿತು ಹಾಗೂ ಉಳಿದಂತೆ ಸುಮಾರು 2.5 ಕೋಟಿ ರೂಪಾಯಿಗಳನ್ನು 'ಎಥೆರಿಯಮ್' (Ethereum) ಕ್ರಿಪ್ಟೋಕರೆನ್ಸಿ ರೂಪದಲ್ಲಿ ವರ್ಗಾಯಿಸಿಕೊಳ್ಳಲಾಯಿತು. ತನಿಖೆ ಪೂರ್ಣಗೊಂಡ ನಂತರ ಸಂಪೂರ್ಣ ಹಣವನ್ನು ಮರಳಿ ನೀಡುವುದಾಗಿ ವಂಚಕರು ಪದೇಪದೆ ನಂಬಿಸುತ್ತಾ ಬಂದಿದ್ದರು. ಆದರೆ ನವೆಂಬರ್ 7ರೊಳಗೆ ಹಣ ಮರಳದಿದ್ದಾಗ ತಲ್ವಾರ್ ಅವರಿಗೆ ಅನುಮಾನ ಮೂಡಿದ್ದು, ವಂಚಕರು ಸಂಪರ್ಕ ಕಡಿತಗೊಳಿಸಿದಾಗ ತಾವು ಸೈಬರ್ ವಂಚನೆಗೆ ಒಳಗಾಗಿರುವುದನ್ನು ಅರಿತುಕೊಂಡರು.

ಘಟನೆಯಿಂದ ಆಘಾತಗೊಂಡ ಅತುಲ್ ತಲ್ವಾರ್ ಅವರು ಗೌತಮ್ ಬುದ್ಧ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ಅಧಿಕೃತವಾಗಿ ದೂರು ದಾಖಲಿಸಿದರು. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನವೆಂಬರ್ 11ರಂದು ಅಮೆರಿಕಕ್ಕೆ ಮರಳಿದ ತಲ್ವಾರ್ ಅವರು ಅಲ್ಲಿನ ಯುಎಸ್ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಸಂಸ್ಥೆಗೂ ದೂರು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಡಿಸಿಪಿ ಸೈಬರ್ ಸೆಕ್ಯುರಿಟಿ ಶೈವ್ಯಾ ಗೋಯಲ್ ಅವರು, ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ವಿದೇಶದಿಂದ ಭಾರತಕ್ಕೆ ಬಂದಿದ್ದ ಹಿರಿಯ ವಕೀಲರೊಬ್ಬರು ಇಂತಹ ದೊಡ್ಡ ಮಟ್ಟದ ಡಿಜಿಟಲ್ ಅರೆಸ್ಟ್ ವಂಚನೆಗೆ ಸಿಲುಕಿರುವುದು ಸೈಬರ್ ಅಪರಾಧಗಳ ಗಂಭೀರತೆಯನ್ನು ಎತ್ತಿ ತೋರಿಸಿದೆ, (ಏಜೆನ್ಸೀಸ್​).