Adani Group  
ದೇಶ

Adani Group: ಗೌತಮ್ ಅದಾನಿಗೆ ಬಿಗ್​ ರಿಲೀಫ್: ವಂಚನೆ ಪ್ರಕರಣ ಕೈಬಿಡಲು ಮುಂದಾದ ಅಮೆರಿಕ ಸರ್ಕಾರ!

ನ್ಯೂಯಾರ್ಕ್: ಭಾರತದ ಪ್ರಮುಖ ಬಿಲಿಯನೇರ್ ಹಾಗೂ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಗೌತಮ್ ಅದಾನಿ ಅವರಿಗೆ ದೊಡ್ಡ ಜಯ ಸಿಗುವ ಮುನ್ಸೂಚನೆ ಲಭ್ಯವಾಗಿದೆ. ಅದಾನಿ ಗ್ರೂಪ್ ವಿರುದ್ಧ ಹೂಡಲಾಗಿದ್ದ ಬಹುಕೋಟಿ ರೂಪಾಯಿ ವಂಚನೆ ಮತ್ತು ಲಂಚದ ಆರೋಪದ ಪ್ರಕರಣಗಳನ್ನು ಕೊನೆಗೊಳಿಸಲು ಅಮೆರಿಕದ ಅಧಿಕಾರಿಗಳು ಸಜ್ಜಾಗಿದ್ದಾರೆ ಎಂದು ಗುರುವಾರ ವರದಿಯಾಗಿದೆ. ಕಳೆದ ಒಂದೂವರೆ ವರ್ಷದಿಂದ ಅದಾನಿ ಸಾಮ್ರಾಜ್ಯಕ್ಕೆ ದೊಡ್ಡ ತಲೆನೋವಾಗಿದ್ದ ಈ ಕ್ರಿಮಿನಲ್ ಪ್ರಕರಣಕ್ಕೆ ಈಗ ಅಧಿಕೃತ ಮುಕ್ತಿ ಸಿಗುವ ಕಾಲ ಹತ್ತಿರ ಬಂದಿದೆ.
ಅಮೆರಿಕದ ನ್ಯಾಯಾಂಗ ಇಲಾಖೆಯು (Justice Department) ಈ ವಾರದಲ್ಲೇ ಅದಾನಿ ಮೇಲಿನ ಕ್ರಿಮಿನಲ್ ಆರೋಪಗಳನ್ನು ಕೈಬಿಡುವುದಾಗಿ ಘೋಷಿಸುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ, ಅಮೆರಿಕದ ಸೆಕ್ಯೂರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್ (SEC) ಕೂಡ ನವೆಂಬರ್ 2024ರಲ್ಲಿ ಹೂಡಿದ್ದ ಸಿವಿಲ್ ವಂಚನೆ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು (Settle) ಮುಂದಾಗಿದೆ ಎಂದು ವರದಿಯಾಗಿದೆ.

ಅದಾನಿ ಗ್ರೂಪ್‌ಗೆ ಸಿಗಲಿದೆ ಹೊಸ ಬಲ

ಈ ಪ್ರಕರಣಗಳು ಮುಕ್ತಾಯ ಕಾಣುತ್ತಿರುವುದು ಕಲ್ಲಿದ್ದಲು ಗಣಿಗಾರಿಕೆ, ನವೀಕರಿಸಬಹುದಾದ ಇಂಧನ, ಬಂದರು ಹಾಗೂ ವಿಮಾನ ನಿಲ್ದಾಣಗಳ ವಲಯದಲ್ಲಿ ದೈತ್ಯನಾಗಿ ಬೆಳೆದಿರುವ ಅದಾನಿ ಗ್ರೂಪ್‌ಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ವರದಾನವಾಗಲಿದೆ. ಇದರಿಂದಾಗಿ ಅದಾನಿ ಸಮೂಹವು ಮತ್ತೊಮ್ಮೆ ಅಂತರರಾಷ್ಟ್ರೀಯ ಬಂಡವಾಳ ಮಾರುಕಟ್ಟೆಯಿಂದ ಸುಲಭವಾಗಿ ಹಣವನ್ನು ಕ್ರೋಢೀಕರಿಸಲು ಮತ್ತು ತನ್ನ ಉದ್ಯಮ ವಿಸ್ತರಣಾ ಕಾರ್ಯತಂತ್ರವನ್ನು ಮುಂದುವರಿಸಲು ಹಾದಿ ಸುಗಮವಾಗಲಿದೆ.
ನ್ಯಾಯಾಂಗ ಇಲಾಖೆಯು ಕ್ರಿಮಿನಲ್ ಆರೋಪಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬಹುದಾಗಿದ್ದರೂ, ಎಸ್‌ಇಸಿ (SEC) ಜೊತೆಗಿನ ಸಿವಿಲ್ ಪ್ರಕರಣದ ಇತ್ಯರ್ಥಕ್ಕಾಗಿ ಅದಾನಿ ಗ್ರೂಪ್ ಕಡೆಯಿಂದ ಸಣ್ಣ ಪ್ರಮಾಣದ ಆರ್ಥಿಕ ದಂಡ (Monetary Penalty) ಪಾವತಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಸದ್ಯಕ್ಕೆ ಈ ವಿಷಯದ ಕುರಿತು ಬ್ರೂಕ್ಲಿನ್‌ನ ಅಮೆರಿಕನ್ ಅಟಾರ್ನಿ ಕಚೇರಿ ಅಥವಾ ಅದಾನಿ ಸಮೂಹ ಅಧಿಕೃತ ಹೇಳಿಕೆ ನೀಡಿಲ್ಲ.

ಏನಿದು ಹಳೇ ಪ್ರಕರಣ?

ನವೆಂಬರ್ 2024ರಲ್ಲಿ ಬ್ರೂಕ್ಲಿನ್‌ನ ಅಮೆರಿಕನ್ ಅಟಾರ್ನಿ ಕಚೇರಿಯು ಗೌತಮ್ ಅದಾನಿ ಮತ್ತು ಅವರ ಸೋದರಸಂಬಂಧಿ ಸಾಗರ್ ಅದಾನಿ ಸೇರಿದಂತೆ ಹಲವರ ಮೇಲೆ ಗಂಭೀರ ಆರೋಪ ಹೊರಿಸಿ ದೋಷಾರೋಪ ಪಟ್ಟಿ ಸಿದ್ಧಪಡಿಸಿತ್ತು. ಭಾರತದಲ್ಲಿ ಸೋಲಾರ್ ಇಂಧನ ಒಪ್ಪಂದಗಳನ್ನು ಪಡೆದುಕೊಳ್ಳಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 250 ಮಿಲಿಯನ್ ಡಾಲರ್ (ಅಂದಾಜು 2100 ಕೋಟಿ ರೂ.) ಲಂಚ ನೀಡಲು ಅದಾನಿ ಗ್ರೂಪ್ ಸಂಚು ರೂಪಿಸಿತ್ತು ಮತ್ತು ಈ ವಿಷಯವನ್ನು ಮರೆಮಾಚಿ ಅಮೆರಿಕದ ಹೂಡಿಕೆದಾರರಿಂದ ಹಣ ಸಂಗ್ರಹಿಸಿ ವಂಚಿಸಿದೆ ಎಂದು ಅಮೆರಿಕ ಆರೋಪಿಸಿತ್ತು.
ಆದರೆ, ಈ ಆರೋಪಗಳನ್ನು ಅದಾನಿ ಗ್ರೂಪ್ ಮೊದಲಿನಿಂದಲೂ ಸಾರಾಸಗಟಾಗಿ ನಿರಾಕರಿಸುತ್ತಲೇ ಬಂದಿತ್ತು. ಆರೋಪಿಗಳು ಯಾರೂ ಅಮೆರಿಕದಲ್ಲಿ ಇರದ ಕಾರಣ ಮತ್ತು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಈ ಕ್ರಿಮಿನಲ್ ತನಿಖೆಯು ಸದ್ಯಕ್ಕೆ ಸ್ಥಗಿತಗೊಂಡಿತ್ತು.

ಅದಾನಿ ಪರ ವಕೀಲರ ವಾದವೇನು?

ಪ್ರಕರಣಕ್ಕೆ ಸಂಬಂಧಿಸಿದಂತೆ ಅದಾನಿ ಪರ ವಕೀಲರು ಇತ್ತೀಚೆಗೆ ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದ್ದು, ಎಸ್‌ಇಸಿ (SEC) ಹೂಡಿರುವ ವಂಚನೆ ಪ್ರಕರಣವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದರು. "ಅಮೆರಿಕದ ನಿಯಂತ್ರಕ ಸಂಸ್ಥೆಗಳಿಗೆ ಭಾರತೀಯ ಪ್ರಜೆಗಳ ಮೇಲೆ ಕಾನೂನು ಕ್ರಮ ಜರುಗಿಸುವ ಯಾವುದೇ ಅಧಿಕಾರ ವ್ಯಾಪ್ತಿ (Jurisdiction) ಇಲ್ಲ. ಅಲ್ಲದೆ ಪ್ರಕರಣಕ್ಕೆ ಆಧಾರವಾಗಿ ಇಡಲಾಗಿರುವ ಹೇಳಿಕೆಗಳು ಕಾನೂನುಬದ್ಧವಾಗಿ ಸಾಬೀತಾಗುವಂತದ್ದಲ್ಲ" ಎಂದು ವಾದಿಸಿದ್ದರು. ಈ ಪ್ರಬಲ ಕಾನೂನು ಹೋರಾಟದ ಬೆನ್ನಲ್ಲೇ ಈಗ ಅಮೆರಿಕ ಸರ್ಕಾರವೇ ಪ್ರಕರಣದಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ,(ಏಜೆನ್ಸೀಸ್​).