Bilaspur Almond Protest 
ದೇಶ

ಆಸ್ತಿ ಪತ್ರ ಕೊಡದೇ ಸತಾಯಿಸಿದ ಸರ್ಕಾರಿ ಅಧಿಕಾರಿ; ರೊಚ್ಚಿಗೆದ್ದ ಯುವಕ ಟೇಬಲ್​ ಮೇಲೆ ಬಾದಾಮಿ ಸುರಿದು ಮಾಡಿದ್ದಿಷ್ಟು..Bilaspur Almond Protest

ಪ್ರಮುಖ ಮುಖ್ಯಾಂಶಗಳು

  • ಕಳೆದುಹೋದ ಆಸ್ತಿ ದಾಖಲೆ ಪತ್ತೆಹಚ್ಚಲು ವಿಫಲವಾದ ಅಧಿಕಾರಿ ಮೇಲೆ ಕಿಡಿ
  • ಬಾದಾಮಿ ಎಸೆದು ಮೆಮೋರಿ ಇಂಪ್ರೂವ್​ ಮಾಡ್ಕೊಳ್ಳಿ ಎಂದು ಲೇವಡಿ
  • ಒಂದು ವರ್ಷದಿಂದ ಅಲೆದಾಡಿಸಿದರೂ ಸಿಗದ ಪ್ರಾಪರ್ಟಿ ಮ್ಯುಟೇಷನ್ ಫೈಲ್
ಬಿಲಾಸ್‌ಪುರ: ಸರ್ಕಾರಿ ಕಚೇರಿಗಳಲ್ಲಿ ಎಲ್ಲ ಕೆಲಸವು ಆಮೆ ವೇಗದಲ್ಲೇ ಸಾಗುವುದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಯಾವುದೇ ಸರ್ಟಿಫಿಕೇಟ್​ ಪಡೆದುಕೊಳ್ಳಬೇಕು, ಸರ್ಕಾರಿ ಯೋಜನೆಗೆ ಸಂಬಂಧಿಸಿದ ದಾಖಲೆ ಪಡೆಯಬೇಕು ಎಂದರೆ, ಕಚೇರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿತ್ಯವೂ ಅಲೆದಾಡಬೇಕಾಗುತ್ತದೆ. ದಾಖಲೆಗಳು ಕಾಣೆಯಾಗೋದು ಕೂಡ ಇದೆ. ಇಂತಹ ಬೇಕಾಬಿಟ್ಟಿ ಹೇಳಿಕೆ, ನಡವಳಿಕೆಯಿಂದ ಬೇಸತ್ತ ಛತ್ತೀಸ್‌ಗಢದ ಬಿಲಾಸ್‌ಪುರದ(Bilaspur) ಯುವಕನೊಬ್ಬ ಸಿಟ್ಟಿಗೆದ್ದು, ವಿಶೇಷವಾಗಿ ಪ್ರತಿಭಟನೆ ಮಾಡಿದ ಒಂದು ಘಟನೆ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಆಸ್ತಿ ಪತ್ರ ಎಲ್ಲಿದ್ಯೋ ಗೊತ್ತಿಲ್ಲ ಎಂದು ನಿತ್ಯ ಸತಾಯಿಸುತ್ತಿದ್ದ ಅಧಿಕಾರಿ ಟೇಬಲ್​ ಮೇಲೆ ಬಾದಾಮಿ ಸುರಿದು, ಇದನ್ನು ತಿಂದು ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಿ ಎನ್ನುವುದರ ಮೂಲಕ ಯುವಕನೊಬ್ಬ ಒಂಟಿಯಾಗಿ ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿ ತನದ ವಿರುದ್ಧ ಹೋರಾಡಿದ್ದಾನೆ.

ಏನಿದು ಘಟನೆ?

ತರುಣ್​ ಸಾಹು ಎಂಬ ಹೆಸರಿನ ಯುವಕನೊಬ್ಬ ಒಂದು ವರ್ಷದ ಹಿಂದೆ EWS ಫ್ಲ್ಯಾಟ್​ ಖರೀದಿ ಮಾಡಿದ್ದನು. ಅದರ ಮ್ಯೂಟೇಷನ್​ ಬದಲಾವಣೆ ಪ್ರಕ್ರಿಯೆಗಾಗಿ ಕಳೆದ ಒಂದು ವರ್ಷದಿಂದ ಹೌಸಿಂಗ್ ಬೋರ್ಡ್ ಕಚೇರಿಗೆ ಅಲೆದಾಡುತ್ತಿದ್ದನು. ಆದರೆ, ಪ್ರತಿ ಬಾರಿ ಅಧಿಕಾರಿಗಳನ್ನು ಭೇಟಿ ಮಾಡಿದಾಗಲೂ ನಿಮ್ಮ ಫೈಲ್ ಸಿಗುತ್ತಿಲ್ಲ, ಕಳೆದುಹೋಗಿದೆ ಎಂದು ಬೇಕಾಬಿಟ್ಟಿ ಮಾತನಾಡುತ್ತಿದ್ದರು.
ಬಾದಾಮಿ ಎಸೆದು ಆಕ್ರೋಶ
ನಿತ್ಯ ಕಚೇರಿಗೆ ಅಲೆದಾಡಿದರೂ ಸಹ ಆಸ್ತಿಯ ಹಕ್ಕು ಪತ್ರ ಇನ್ನು ಸಿಕ್ಕಿಲ್ಲ ಎಂದು ಯುವಕ ಬೇಸರದಿಂದ ಕಂಗಾಲಾಗಿದ್ದ. ಆದರೆ, ಆಕೆ ಮಾತ್ರ ಎಲ್ಲೋ ಇಟ್ಟಿದ್ದೀನಿ ಗೊತ್ತಿಲ್ಲ ಎಂದು ಬೇಜವಾಬ್ದಾರಿಯುತ ಉತ್ತರ ನೀಡುತ್ತಿದ್ದರು. ಇದ್ರಿಂದ ಸಿಟ್ಟಾದ ಯುವಕ, ಶನಿವಾರ ಸಬ್-ರಿಜಿಸ್ಟ್ರಾರ್ ಕಚೇರಿಗೆ ಬಾದಾಮಿ ಪಾಕೆಟ್‌ನೊಂದಿಗೆ ಆಗಮಿಸಿದ್ದನು. ಅಧಿಕಾರಿಗಳ ಉಡಾಫೆ ಉತ್ತರವನ್ನೇ ಕೇಳಿ ಸುಸ್ತಾಗಿದ್ದ ಆತ, ನೇರವಾಗಿ ಅಧಿಕಾರಿಯ ಮೇಜಿನ ಮೇಲೆ ಬಾದಾಮಿಗಳನ್ನು ಎಸೆದ, ನಂತರ ಈ ಬಾದಾಮಿ ದಿನವೂ ತಿಂದು ನಿಮ್ಮ ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಿ. ನನ್ನ ಫೈಲ್ ಎಲ್ಲಿಟ್ಟಿದ್ದೀರಿ ಎಂಬುದು ನಿಮ್ಮ ನೆನಪಿಗೆ ಬರಲಿ" ಎಂದು ವ್ಯಂಗ್ಯವಾಡಿದ್ದಾನೆ.

ನೆಟ್ಟಿಗರಿಂದ ಶ್ಲಾಘನೆ

ಬಾದಾಮಿ ತಿಂದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎಂಬ ಉದ್ದೇಶದಲ್ಲಿ ಪ್ರತಿಭಟನೆಯ ಅಸ್ತ್ರವನ್ನಾಗಿ ಈತ ಬಳಕೆ ಮಾಡಿಕೊಂಡಿದ್ದಾನೆ. ಜೊತೆಗೆ ಇದು ಅಧಿಕಾರಿಗಳ ಕಾರ್ಯವೈಖರಿಯನ್ನು ಅಣಕಿಸುವಂತೆ ಮಾಡಿದ ವಿಡಿಯೋ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾರ್ವಜನಿಕರು ಯುವಕನ ಧೈರ್ಯವನ್ನು ಮೆಚ್ಚುತ್ತಿದ್ದು, ಭ್ರಷ್ಟ ಮತ್ತು ವಿಳಂಬ ನೀತಿಯ ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ, (ಏಜೆನ್ಸೀಸ್​)