ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆಗಾರಿಕೆ ಮತ್ತು ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿಗಳ ಮೇಲಿನ ಲಾಠಿ ಚಾರ್ಜ್ ವಿಚಾರದ ಬಗ್ಗೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ(Rahul Gandhi) ಮಾತನಾಡಿದ್ದು, ಮೂರ್ಖರು ಯುವಕರ ಮಾತು ಕೇಳಲ್ಲ ಎಂಬ ಅವರ ಮಾತು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಬುಧವಾರ(ಜು. 29) ಕಾಂಗ್ರೆಸ್ ನಾಯಕ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾತನಾಡಿದರು. ಯುವಕರ ಪ್ರತಿಭಟನೆ ಕೋಪ ಅಥವಾ ಹಿಂಸೆಯಲ್ಲ, ಅದು ದ್ವೇಷಕ್ಕಿಂತ ಹೆಚ್ಚಾಗಿ ದೇಶದ ಯುವಕರ ಆಳವಾದ ಅಭಿವ್ಯಕ್ತಿಯಾಗಿತ್ತು ಎಂದಿದ್ದಾರೆ.
ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಯುವ ಭಾರತೀಯರ ಅಭಿವ್ಯಕ್ತಿಯನ್ನು ಗೌರವಿಸಬೇಕು ಎಂದ ಅವರು, ಪ್ರತಿಭಟನಾ ನಿರತ ಯುವಕರೊಂದಿಗೆ ಅಥವಾ ಸ್ವತಃ ಬಿಜೆಪಿ ನಾಯಕರು ತಮ್ಮ ಮಕ್ಕಳೊಂದಿಗೆ ಮಾತನಾಡಿದ್ದರೆ ಅದರ ಬಗ್ಗೆ ಸಹನಭೂತಿ ವ್ಯಕ್ತವಾಗುತ್ತಿತ್ತು ಎಂದು ಹೇಳಿದ್ದಾರೆ.
ಮುಂದುವರೆದು, ಸದನದಲ್ಲಿ ತಮ್ಮ ಜೊತೆ ಮಾತುಕತೆ ನಡೆಸಿದ ಓರ್ವ ವಿದ್ಯಾರ್ಥಿನಿಯ ಸಂವಾದವನ್ನು ವಿವರಿಸಿದ ಅವರು, ಆಳುವವರು ಮೂರ್ಖರಾಗಿದ್ದು, ತಮಗೆ ಎಲ್ಲಾ ತಿಳಿದಿದೆ ಎಂಬ ದುರಹಂಕಾರದಲ್ಲಿ ನಮ್ಮ ಮಾತನ್ನು ಕೇಳುತ್ತಿಲ್ಲ, ಅವರು ಅಂದಭಕ್ತರಾಗಿದ್ದಾರೆ ಎಂದು ಹೇಳಿದ್ದನ್ನು ಉಲ್ಲೇಖಿಸಿದರು. ರಾಹುಲ್ ಅವರ ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು, ರಾಹುಲ್ ಗಾಂಧಿ ಅಸಂಸದೀಯ ಪದ ಬಳಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದರೆ ರಾಹುಲ್ ಗಾಂಧಿ ನಾನು ಯಾರನ್ನೂ ಉದ್ದೇಶಿಸಿ ಆ ಮಾತನ್ನು ಆಡಿಲ್ಲ ಎಂದು ಸಮರ್ಥಿಸಿಕೊಂಡರು. ಬಳಿಕ ಸ್ಪೀಕರ್ ಓಂ ಬಿರ್ಲಾ ಮಧ್ಯ ಪ್ರವೇಶ ಮಾಡಿ, ಬಿಲ್ ಬಗ್ಗೆ ಮಾತ್ರ ಮಾತನಾಡುವಂತೆ ಹೇಳಿ ಮೂರ್ಖ ಮತ್ತು ಅಂದಭಕ್ತ ಎಂಬ ಪದಗಳನ್ನು ಕಡತದಿಂದ ತೆಗೆದು ಹಾಕಲು ಸೂಚಿಸಿದರು.
ಮುಂದುವರೆದು ಶಿಕ್ಷಣ ಸಚಿವಾಲಯವನ್ನು ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಎಂದಿಗೂ ನಡೆಸಲಿಲ್ಲ, ಬದಲಿಗೆ ಆರ್‌ಎಸ್‌ಎಸ್ ನಡೆಸುತ್ತಿತ್ತು ಎಂದು ಆರೋಪಿಸಿದ ಅವರು, ಹಲವಾರು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಆರ್‌ಎಸ್‌ಎಸ್ ಸಿದ್ಧಾಂತಿಗಳನ್ನು ಉಪಕುಲಪತಿಗಳಾಗಿ ನೇಮಿಸಲಾಗಿದೆ. ವಿದ್ಯಾರ್ಥಿಗಳನ್ನು ಅಂಧಭಕ್ತರನ್ನಾಗಿ ಪರಿವರ್ತಿಸಲು ಆರ್‌ಎಸ್‌ಎಸ್ ಬಯಸಿದೆ ಎಂದು ವಾಗ್ದಾಳಿ ನಡೆಸಿದರು.
ಗೃಹಸಚಿವ ಅಮಿತ್ ಶಾ ವಿರುದ್ಧವೂ ಕಿಡಿಕಾರಿದ ಅವರು, ಗೃಹ ಸಚಿವರಿಗೆ ನನ್ನ ಎದುರು ನಿಲ್ಲುವ ಧೈರ್ಯವಿಲ್ಲ, ಅವರು ಕಾರಿನಲ್ಲಿ ಕುಳಿತು ನಡುಗುತ್ತಿರುವುದನ್ನು ನೋಡಿದೆ. ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಹಾರಿಸಲು ಅನುಮತಿ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು (ಏಜೆನ್ಸೀಸ್).