ಆಧಾರ್​ ಆ್ಯಪ್​  
ದೇಶ

ಕ್ಯೂ ನಿಲ್ಲುವ ಅಗತ್ಯವಿಲ್ಲ! ಹೊಸ ಆಧಾರ್​ ಆ್ಯಪ್​ನಲ್ಲಿ ನಿಮ್ಮ ಫೋನ್​ ನಂಬರ್​ ಅಪ್ಡೇಟ್​ ಮಾಡುವುದು ಈಗಿನ್ನೂ ಸುಲಭ

ಪ್ರಮುಖ ಮುಖ್ಯಾಂಶಗಳು

  • ಹೊಸ ಆಧಾರ್ ಆ್ಯಪ್​ ಮೂಲಕ ಮನೆಯಿಂದಲೇ ಫೋನ್ ಸಂಖ್ಯೆಯನ್ನು ನವೀಕರಿಸಿ
  • ಯುಐಡಿಎಐ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ
  • ಒಟಿಪಿ ಮತ್ತು ಮುಖ ದೃಢೀಕರಣದ ಅಗತ್ಯ
ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಶುಕ್ರವಾರ (ನ.28) ಹೊಸ ಆಧಾರ್ ಅಪ್ಲಿಕೇಶನ್‌ಗಾಗಿ ನೂತನ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ಅಪ್ಲಿಕೇಶನ್ ನವೆಂಬರ್ 9ರಿಂದ ಆ್ಯಂಡ್ರಾಯ್ಡ್ ಪ್ಲೇ ಸ್ಟೋರ್ ಮತ್ತು ಐಒಎಸ್ ಆ್ಯಪ್ ಸ್ಟೋರ್‌ನಲ್ಲಿ ಬಳಕೆದಾರರಿಗೆ ಲಭ್ಯವಿದೆ.
ಈ ಹೊಸ ವೈಶಿಷ್ಟ್ಯದಲ್ಲಿ, ಆಧಾರ್​ ಕಾರ್ಡ್​ ಬಳಕೆದಾರರು ತಮ್ಮ ಮೊಬೈಲ್​ ಸಂಖ್ಯೆಯನ್ನು ಲಿಂಕ್ ಮಾಡಿಕೊಳ್ಳುವುದು ಈಗ ಇನ್ನಷ್ಟು ಸುಲಭವಾಗಿದೆ. ಕೇವಲ ಒಟಿಪಿ ಮತ್ತು ಮುಖ ದೃಢೀಕರಣವನ್ನು ಒದಗಿಸಿದರೆ ಸಾಕು ಕೆಲವೇ ನಿಮಿಷಗಳಲ್ಲಿ ಅಪ್ಡೇಟ್​ ಆಗಲಿದೆ. ಡಿಜಿಟಲ್​ ವೆರಿಫಿಕೇಷನ್​ ಪ್ರಕ್ರಿಯೆ ಮೂಲಕ ಇದು ಹಿಂದಿನಕ್ಕಿಂತ ಸರಳವಾಗಿದೆ. 
ಈ ಕುರಿತಂತೆ ಯುಐಡಿಎಐ ತನ್ನ ಅಧಿಕೃತ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಬಳಕೆದಾರರು ಶೀಘ್ರದಲ್ಲೇ ಹೊಸ ಆಧಾರ್ ಅಪ್ಲಿಕೇಶನ್‌ನಲ್ಲಿ ತಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ತಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಬಹುದಾಗಿದೆ ಎಂದು ತಿಳಿಸಿದೆ. ಇದು ಆಧಾರ್ ಕೇಂದ್ರಗಳಲ್ಲಿ ಹೆಚ್ಚು ಸಮಯ ಸರತಿ ಸಾಲಿನಲ್ಲಿಯೇ ನಿಲ್ಲುವ ತೊಂದರೆಯನ್ನು ತಪ್ಪಿಸುತ್ತದೆ. ಇದರರ್ಥ, ಇನ್ಮುಂದೆ ನೀವು ಮನೆಯಲ್ಲಿಯೇ ಅಥವಾ ಕುಳಿತ ಜಾಗದಿಂದಲೇ ಸುಲಭವಾಗಿ ನಿಮ್ಮ ಫೋನ್‌ನಿಂದಲೇ ನಿಮ್ಮ ಮೊಬೈಲ್​ ಸಂಖ್ಯೆಯನ್ನು ಅಪ್ಡೇಟ್​ ಮಾಡಿಕೊಳ್ಳಬಹುದಾಗಿದೆ.

ಹೊಸ ಆಧಾರ್ ಅಪ್ಲಿಕೇಶನ್​ನಲ್ಲಿ ಪ್ರಕ್ರಿಯೆ ಹೇಗೆ?

  • ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ.
  •  ತದನಂತರ ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆ ಮಾಡಿ ಮತ್ತು ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ 
  • ನಿಮ್ಮ ಆಧಾರ್ ರಿಜಿಸ್ಟರ್​ ಆದ ಮೊಬೈಲ್ ಸಂಖ್ಯೆಗೆ ಒಂದು SMS ಬರುತ್ತದೆ. ಅದನ್ನೊಮ್ಮೆ ಪರಿಶೀಲಿಸಿ 
  • ಒಟಿಪಿ ಹಾಕಿದ ಬಳಿಕ, ನೀವು ಮುಖ ದೃಢೀಕರಣವನ್ನು ಪೂರ್ಣಗೊಳಿಸಬೇಕುಮುಖ ದೃಢೀಕರಣ ಪೂರ್ಣಗೊಂಡ ನಂತರ, 6 ಅಂಕಿಯ ಪಾಸ್‌ವರ್ಡ್ ಅನ್ನು ಹಾಕಬೇಕು
ಈಗ ನೀವು ಅಪ್ಲಿಕೇಶನ್‌ನ ಪ್ರೊಫೈಲ್ ಪುಟದಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಒಮ್ಮೆ ಪರಿಶೀಲಿಸಿ ನೋಡಬಹುದು. ಆ ಕಾರ್ಡ್​ ಅನ್ನು ನೀವು ಡೌನ್​ಲೋಡ್​ ಮಾಡಿಕೊಳ್ಳಬಹುದು, ಹಂಚಿಕೊಳ್ಳಬಹುದು ಮತ್ತು ಬಯೋಮೆಟ್ರಿಕ್ ಲಾಕ್ ಮೂಲಕ ಆ್ಯಪ್​ನಲ್ಲಿಟ್ಟುಕೊಳ್ಳಬಹುದು,(ಏಜೆನ್ಸೀಸ್).