ವಿಚ್ಛೇದನ ಪ್ರಕರಣ 
ದೇಶ

ಡಿವೋರ್ಸ್​ ಕೊಟ್ಟುಬಿಡು ಸಾಕು! ಗಂಡನ ಅದೊಂದು ತಪ್ಪು ಸಹಿಸಲಾರದೆ ಕೋರ್ಟ್​ ಮೆಟ್ಟಿಲೇರಿದ ನವ ವಧು

ಪ್ರಮುಖ ಮುಖ್ಯಾಂಶಗಳು

  • ಇದನ್ನು ನನ್ನಿಂದ ಒಪ್ಪಿಕೊಳ್ಳಲು ಸಾಧ್ಯವಿಲ್ಲ
  • ಮದುವೆಯಾದ ಕೆಲವೇ ದಿನಗಳಲ್ಲಿ ಪತಿಯಿಂದ ಡಿವೋರ್ಸ್​ ಕೇಳಿದ ಪತ್ನಿ
  • ಪತಿಯ ಅದೊಂದು ತಪ್ಪನ್ನು ಸಹಿಸಿಕೊಳ್ಳದೆ ಕೋರ್ಟ್​ ಮೆಟ್ಟಿಲೇರಿದ ನವ ವಧು
ಉತ್ತರ ಪ್ರದೇಶ: ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಭಾರತದಲ್ಲಿ ವಿಚ್ಛೇದನ ಪ್ರಕರಣಗಳು ವಿಪರೀತ ಹೆಚ್ಚುತ್ತಿವೆ. ಇದು ತೀರ ಕಳವಳಕಾರಿ ಸಂಗತಿಯೇ. ಅತೀ ಮುಖ್ಯವಾಗಿ, ಮೂರ್ನಾಲ್ಕು ವರ್ಷ ಸಂಸಾರ ಸಾಗಿಸಿ, ಆ ನಂತರ ಆಗುವುದಿಲ್ಲ ಎಂದು ಡಿವೋರ್ಸ್​ ಕೊಡುವವರಿಗಿಂತಲೂ ನಿನ್ನೆ, ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳು ಡಿವೋರ್ಸ್​ಗಾಗಿ ಕೋರ್ಟ್​ ಮೆಟ್ಟಿಲೇರುತ್ತಿರುವುದು ನಿಜಕ್ಕೂ ಆಘಾತಕಾರಿ ಬೆಳವಣಿಗೆ ಸರಿ.
ಪತಿ ದೈಹಿಕವಾಗಿ, ಮಾನಸಿಕವಾಗಿ ಚಿತ್ರಹಿಂಸೆ ಕೊಡುತ್ತಾನೆ, ಅತ್ತೆ-ಮಾವ ಕಿರುಕುಳ ನೀಡುತ್ತಿದ್ದಾರೆ ಅಥವಾ ವರದಕ್ಷಿಣೆಗಾಗಿ ಪತಿಯ ಮನೆಯವರು ಪೀಡಿಸುತ್ತಿದ್ದಾರೆ ಎಂಬ ಕಾರಣಗಳಿಗೆ ಅನೇಕ ಯುವತಿಯರು, ಮಹಿಳೆಯರು ವಿಚ್ಛೇದನದ ಮೊರೆ ಹೋಗುತ್ತಾರೆ. ಈ ವಿಷಯದಲ್ಲಿ ಯುವ ಜೋಡಿಗಳು ಮುಂಚೂಣಿಯಲ್ಲಿರುವುದು ಶಾಕಿಂಗ್​. ಸಣ್ಣ-ಪುಟ್ಟ ಕಾರಣಗಳಿಗೆ ದೂರ ಉಳಿಯುವ ದಂಪತಿಗಳು, ಕುಳಿತು ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳುವ ಮೊದಲೇ ಕೋರ್ಟ್​ ಮೆಟ್ಟಿಲೇರುತ್ತಿದ್ದಾರೆ. ಇದಕ್ಕೆ ಇಲ್ಲೊಂದು ಪ್ರಕರಣ ಜ್ವಲಂತ ಸಾಕ್ಷಿ.
ಉತ್ತರ ಪ್ರದೇಶದ ಬಹಸುಮಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರಾಮರಾಜ್‌ನ ಯುವತಿಯೊಬ್ಬಳು ದೆಹಲಿಯ ಪಟೇಲ್ ನಗರದ ಯುವಕನೊಂದಿಗೆ ಮನೆಯವರ ನಿಶ್ಚಯದಂತೆ ಮದುವೆಯಾದಳು. ಈಕೆ ಪದವೀಧರೆಯಾದರೆ, ಹುಡುಗ ಸಿಂಗಾಪುರದಲ್ಲಿ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್ ಮಾಡುತ್ತಿದ್ದಾನೆ. ಎಲ್ಲರಂತೆ ಹೊಸ ಬಾಳಿಗೆ ಕಾಲಿಟ್ಟ ಈ ಜೋಡಿ, ವಿವಾಹದ ಬಳಿಕ ಹನಿಮೂನ್‌ಗೆ ಪ್ಲ್ಯಾನ್​ ಮಾಡಿದರು. ಆದರೆ, ಗಂಡ ತನ್ನ ಹೆಂಡತಿಯೊಂದಿಗೆ ಮಾತ್ರ ಹೋಗದೆ, ಅಮ್ಮ-ಅಪ್ಪ ಮತ್ತು ಸೋದರ ಮಾವನನ್ನು ಕೂಡ ಹನಿಮೂನ್‌ಗೆ ಕರೆದುಕೊಂಡು ಹೋಗಿದ್ದೇ ಸದ್ಯ ಡಿವೋರ್ಸ್​ಗೆ ಕಾರಣವಾಗಿದೆ.
ಗಂಡನೊಂದಿಗೆ ಏಕಾಂತ ಸಮಯ ಕಳೆಯಲು ಬಯಸಿದ್ದ ಯುವತಿಗೆ, ಇಡೀ ಕುಟುಂಬ ಬಂದಿದ್ದು ತೀವ್ರ ಮುಜುಗರ ಮತ್ತು ಬೇಸರ ಉಂಟುಮಾಡಿದೆ. ಈ ವಿಷಯಕ್ಕೆ ಪತಿ ಜೊತೆಗೆ ಮಾತಿನ ಚಕಮಕಿ ನಡೆದಿದ್ದು, ನೀವು ಮಾಡಿದ್ದು ಕಿಂಚಿತ್ತು ಸರಿಯಲ್ಲ. ನನಗೆ ನಿಮ್ಮಿಂದ ವಿಚ್ಛೇದನ ಬೇಕಷ್ಟೇ ಎಂದು ನೇರವಾಗಿ ಕೋರ್ಟ್​ ಮೆಟ್ಟಿಲೇರಿದ್ದಾಳೆ. ಇದಕ್ಕಾಗಿ, ಮೀರತ್ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದಾಳೆ.
ಈ ವಿಷಯ ಕೌನ್ಸೆಲಿಂಗ್ ಕೇಂದ್ರವನ್ನು ತಲುಪಿದ್ದು, ದಂಪತಿಗೆ ಈಗಾಗಲೇ ಮೂರು ಬಾರಿ ಕೌನ್ಸೆಲಿಂಗ್ ನೀಡಲಾಗಿದೆ. ತನ್ನ ಕುಟುಂಬ ಸದಸ್ಯರನ್ನು ಖುಷಿಯಾಗಿ ನೋಡಿಕೊಳ್ಳಲು ಹೀಗೆ ಮಾಡಿದೆ ಎಂದು ಪತಿ ಹೇಳಿದ್ದಾನೆ. ಇದ್ಯಾವುದಕ್ಕೂ ಒಪ್ಪದ ವಧುವಿನ ಕೋಪ ಮಿತಿ ಮೀರಿದ್ದು, ವಿಚ್ಛೇದನ ಕೊಟ್ಟು ಬಿಡಿ ಸಾಕು ಎಂದು ಕೋರಿದ್ದಾಳೆ. ಸದ್ಯ ಈ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದ್ದು, ತೀರ್ಪು ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ,(ಏಜೆನ್ಸೀಸ್).