ಉತ್ತರ ಪ್ರದೇಶದಲ್ಲಿ ನಡೆದ ಘಟನೆ 
ದೇಶ

ಒಂದು ರೀಲ್ಸ್​ಗಾಗಿ ಇದೆಂಥಾ ಹುಚ್ಚಾಟ! ಐವರು ಬಾಲಕರ ಪೈಕಿ ಓರ್ವ ಮೃತ; ಉಳಿದವರು ಸೇನೆಯಿಂದ ರಕ್ಷಣೆ

ಉತ್ತರ ಪ್ರದೇಶ: ಇತ್ತೀಚಿನ ಸ್ಮಾರ್ಟ್​ಫೋನ್​ ಯುಗದಲ್ಲಿ ಎಲ್ಲವೂ ಆಯೋಮಯ ಅನ್ನೋದಕ್ಕೆ ಇಂತಹ ಘಟನೆಗಳೇ ಜ್ವಲಂತ ಸಾಕ್ಷಿ. ಹೊಟ್ಟೆಗೆ ಹಿಟ್ಟಿಲವೆಂದರೂ ಮೊಬೈಲ್​ ನೆಟ್​ ಇರಬೇಕು ಎಂಬ ಈ ಡಿಜಿಟಲ್​ ಯುಗದಲ್ಲಿ, ಯುವಜನತೆಯ ಹುಚ್ಚಾಟ ಒಂದೆರೆಡಲ್ಲ. ಸೆಲ್ಫಿ, ವಿಡಿಯೋ ಮತ್ತು ರೀಲ್​ ಎಂಬ ಮೋಜಿಗಾಗಿ ಜೀವದ ಹಂಗನ್ನೇ ತೊರಯುವ ಹದಿಹರೆಯದವರು ತಮ್ಮ ಹೆತ್ತವರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡುತ್ತಿರುವುದು ನಿಜಕ್ಕೂ ದುರಂತ.
ಸೋಷಿಯಲ್ ಮೀಡಿಯಾದಲ್ಲಿ ಲೈಕ್​ ಪಡೆಯುವ ಹುಚ್ಚು ಆಸೆಗಾಗಿ, ರೀಲ್​ ವಿಡಿಯೋ ಮಾಡಲೆಂದು ಎತ್ತರದ ವಾಟರ್​ ಟ್ಯಾಂಕ್​ ಹತ್ತಿದ ಐವರು ಬಾಲಕರಲ್ಲಿ ಏಣಿ ಕುಸಿದು ಮೂವರು ಕೆಳಗೆ ಬಿದ್ದರೆ, ಇನ್ನಿಬ್ಬರು ಟ್ಯಾಂಕಿನ ತುತ್ತ ತುದಿಯಲ್ಲಿ ಬದುಕುಳಿಯಲು ಸ್ಥಳೀಯರ ಬಳಿ ಕೈಮುಗಿದು ಬೇಡಿಕೊಂಡ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ವರದಿಯಾಗಿದೆ.
ಟ್ಯಾಂಕಿನ ಮೇಲೆ ಹತ್ತುವಾಗ, ತುಕ್ಕು ಹಿಡಿದಿದ್ದ ಏಣಿ ಕುಸಿದು ಮೂವರು ಕೆಳಗೆ ಬಿದ್ದಿದ್ದಾರೆ. ಈ ಪೈಕಿ ಓರ್ವ ಬಾಲಕ ಸ್ಥಳದಲ್ಲಿ ಮೃತಪಟ್ಟರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸುಮಾರು 16 ಗಂಟೆಗಳ ಕಾರ್ಯಾಚರಣೆಯ ಬಳಿಕ ಶಿಥಿಲಗೊಂಡಿದ್ದ ನೀರಿನ ಟ್ಯಾಂಕ್ ಮೇಲೆ ಸಿಲುಕಿದ್ದ ಇಬ್ಬರು ಬಾಲಕರನ್ನು ಸೇನಾ ಪಡೆಯ ಹೆಲಿಕಾಪ್ಟರ್ ರಕ್ಷಿಸಿದೆ. 
ರಾಜ್ಯ ಅಧಿಕಾರಿಗಳ ಕೋರಿಕೆಯ ಮೇರೆಗೆ ಕೇಂದ್ರ ವಾಯು ಕಮಾಂಡ್ (ಸಿಎಸಿ) ನಿಂದ IAF Mi-17 V5 ಹೆಲಿಕಾಪ್ಟರ್ ಅನ್ನು ಬಾಲಕರ ರಕ್ಷಣೆಗೆ ನಿಯೋಜಿಸಲಾಯಿತು. ವಿಮಾನವು ಬೆಳಗ್ಗೆ 5:20ರ ಸುಮಾರಿಗೆ ಕಾನ್ಶಿರಾಮ್ ಅವಾಸಿಯ್ ಕಾಲೋನಿಯನ್ನು ತಲುಪಿ, ಬದುಕುಳಿಯುವ ಹಂಬಲದಿಂದ ಸಹಾಯಕ್ಕಾಗಿ ಕಾದು ಕುಳಿತಿದ್ದ ಇಬ್ಬರನ್ನು ಹಗ್ಗದ ಸಹಾಯದಿಂದ ಸುರಕ್ಷಿತವಾಗಿ ರಕ್ಷಿಸಿ, ಗೋರಖ್‌ಪುರಕ್ಕೆ ವಿಮಾನದಲ್ಲಿ ಕರೆದೊಯ್ಯಲಾಯಿತು. ಈ ಘಟನೆ ಉಳಿದವರಿಗೆ ಪಾಠವಾಗಲಿ, ಇನ್ಯಾರೂ ಇಂತಹ ತಪ್ಪನ್ನು ಮಾಡದಿರಲಿ ಎಂಬುದೇ ಹೆತ್ತವರ ಕಳಕಳಿ,(ಏಜೆನ್ಸೀಸ್).