UP Man Divorce Celebration
UP Man Divorce Celebration: ಪ್ರೀತಿಸಿದವರನ್ನು ಮದುವೆಯಾಗಲು, ಸಮಸ್ಯೆ ಪರಿಹಾರವಾಗಲು, ಸಂಸಾರ ಸುಖಮಯವಾಗಿರಲಿ ಎಂದು ದೇವಸ್ಥಾನ ಪ್ರದಕ್ಷಿಣೆ ಹಾಕಿ, ಉರುಳು ಸೇವೆ ಮಾಡೋದು. ಉಪವಾಸ ಇರುವುದು ಮಾಮೂಲು. ಆದರೆ, ಉತ್ತರಪ್ರದೇಶದ ಯುವಕನೊಬ್ಬ ಪತ್ನಿಯಿಂದ ವಿಚ್ಛೇದನ ಸಿಕ್ಕ ಖುಷಿಗೆ 9 ಕಿಲೋ ಮೀಟರ್ Dandavath Yathra(ದಂಡಾವತ್ ಯಾತ್ರೆ) ಮಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕುವಂತೆ ಮಾಡಿದೆ.
ಇಂತಹ ಘಟನೆ ಜರುಗುತ್ತಿರೋದು ಮೊದಲೇನಲ್ಲ. ಉತ್ತರ ಭಾರತದಲ್ಲಿ ಪತ್ನಿಯರಿಂದ ವಿಚ್ಛೇದನ ಪಡೆದುಕೊಂಡು ಲೀಟರ್ಗಟ್ಟಲೇ ಹಾಲು ಸುರಿದುಕೊಂಡು ಸ್ನಾನ ಮಾಡಿರುವ ಘಟನೆ ಮತ್ತು ಊರಿಗೆಲ್ಲ ಸಿಹಿ ಹಂಚಿರುವ ಪ್ರಕರಣವೂ ಇದೆ. ಇನ್ನೂ ಕೆಲವಡೆ ಹತ್ಯೆಗೀಡಾಗುವುದರಿಂದ ತಪ್ಪಿಸಿಕೊಳ್ಳಲು ಪತ್ನಿ ಪ್ರೀತಿಸಿದ ಪ್ರೇಮಿ ಜೊತೆ ಮದುವೆ ಮಾಡಿಸುವ ಪ್ರಸಂಗಗಳು ಜರುಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಮದುವೆ-ಸಂಸಾರವೊಂದು ಸಂಭ್ರಮವಾಗಿರದೇ ತಲೆನೋವಾಗಿ ಪರಿಣಮಿಸುತ್ತಿರುವುದು ಆತಂಕಕಾರಿ ವಿಚಾರವಾಗಿದೆ.
ಉತ್ತರಪ್ರದೇಶದ ಬಸ್ತಿ ಜಿಲ್ಲೆಯ ನರ್ಖೋರಿಯಾ ಗ್ರಾಮದ ನಿವಾಸಿಯಾದ 25 ವರ್ಷದ ಜೋಗೇಶ್ 2022ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ. ಮದುವೆಯಾದ ಕೆಲವು ದಿನಕ್ಕೆ ಪತ್ನಿಯೊಂದಿಗೆ ದೆಹಲಿಯಲ್ಲಿ ವಾಸಿಸತೊಡಗಿದೆ. ಪ್ಲಾಸರ್ ಆಫ್ ಪ್ಯಾರಿಸ್ ವಿನ್ಯಾಸ ವಲಯದಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ. ಸುಖ-ಸಂತೋಷವಿದ್ದಿದ್ದು ಕೆಲ ದಿನವೂ ಮಾತ್ರ. ಆತನ ಪತ್ನಿ ನಿತ್ಯವೂ ಕೆಲಸದ ಸಮಯ, ಸಂಬಳದ ಬಗ್ಗೆ ಕ್ಯಾತೆ ತೆಗೆಯುತ್ತಿದ್ದಳು ಎಂದು ವಿಡಿಯೋದಲ್ಲಿ ಉಲ್ಲೇಖಿಸಿದ್ದಾನೆ. ಇದೇ ವಿಚಾರವಾಗಿ ನಿತ್ಯವೂ ಜಗಳವಾಡುತ್ತಿದ್ದಳು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮನೆಯಿಂದ ಹೊರಬಂದರೆ ಕೆಲಸದ ಒತ್ತಡ, ಮನೆಯಲ್ಲಿದ್ದರೆ ಹೆಂಡತಿಯಿಂದ ಮಾನಸಿಕ ಒತ್ತಡದಿಂದ ದಿನೇ ದಿನೇ ಕುಗ್ಗಿ ಹೋದರಂತೆ. ಪತ್ನಿಯಿಂದ ವಿಚ್ಛೇದನ ಸಿಕ್ಕರೆ, ದಂಡಾವತ್ ಯಾತ್ರೆ ಮಾಡುವುದಾಗಿ 2025 ರಲ್ಲಿ ಪೂಜ್ಯ ಸಿದ್ಧ ಪೀಠ ಬೈರ್ವಾ ಸಮಯ್ ಮಾತಾ ದೇವಸ್ಥಾನದಲ್ಲಿ ಹರಕೆ ಹೊತ್ತುಕೊಂಡಿದ್ದರಂತೆ.
ಹರಕೆ ಪೂರೈಸಿದ್ದು ಹೀಗೆ
2026 ಜನವರಿಯಲ್ಲಿ ಅಧಿಕೃತವಾಗಿ ನ್ಯಾಯಾಲಯ ವಿಚ್ಛೇದನ ನೀಡಿದೆ. ನವರಾತ್ರಿಯಲ್ಲಿ ಯೋಗೇಶ್ ತನ್ನ ಹರಕೆಯನ್ನು ಪೂರೈಸಿದ್ದಾನೆ. ಬರಿಗಾಲಿನಲ್ಲಿ, ನೆಲದ ಮೇಲೆ ಮಲಗಿ ಉರುಳುತ್ತಾ ಸಾಗಿದ ಇವನ ಮೈಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದರೂ, ಹರಕೆ ತೀರಿಸಿದ ತೃಪ್ತಿ ಆತನ ಮುಖದಲ್ಲಿತ್ತು.
ಪೋಷಕರಿಂದಲೂ ಸಿಕ್ತು ಪ್ರೋತ್ಸಾಹ
ತನ್ನ ಗ್ರಾಮದಿಂದ ಬೈಡಾ ಸಮಯ ಮಾತಾ ದೇವಸ್ಥಾನದವರೆಗೆ ಸುಮಾರು 9 ಕಿಲೋಮೀಟರ್ ದೂರವನ್ನು ಯೋಗೇಶ್ ದಂಡವತ್ ನಮಸ್ಕಾರ ಹಾಕುತ್ತಾ ಕ್ರಮಿಸಿದ್ದಾನೆ. ಹರಕೆ ತೀರಿಸಲು ಸುಮಾರು 12 ಗಂಟೆ ತೆಗೆದುಕೊಂಡಿದ್ದು, ಪೋಷಕರು ಆತನ ಜೊತೆಗಿದ್ದು, ಸಹಾಯಕ್ಕೆ ನಿಂತಿರುವುದು ವಿಡಿಯೋದಲ್ಲಿ ಕಾಣಸಿಗುತ್ತದೆ.
ಉತ್ತರ ಪ್ರದೇಶದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಸೆಕ್ಷನ್ 125ರ ಪ್ರಕಾರ ದಂಡಾವತ್ ನಮಸ್ಕಾರ ಹಾಕುವುದಕ್ಕೆ ನಿಷೇಧಾಜ್ಞೆ ಜಾರಿಯಲ್ಲಿದೆ. ಆದರೆ, ಜೋಗೇಶ್ ಮೊದಲೇ ಅನುಮತಿ ಪಡೆದುಕೊಂಡಿದ್ದರು. ಭಾನ್ಪುರದ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಹಿಮಾಂಶು ಕುಮಾರ್ ಅವರು ಅಗತ್ಯ ಭದ್ರತಾ ವ್ಯವಸ್ಥೆಗಳೊಂದಿಗೆ ಯಾತ್ರೆಗೆ ಅನುಮತಿ ನೀಡಿದರು ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಸ್ಥಳೀಯ ಪೊಲೀಸರು ಕೂಡ ಈ ಸಂದರ್ಭದಲ್ಲಿ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದರು.
ನೆಟ್ಟಿಗರಿಂದ ತಮಾಷೆ ಕಾಮೆಂಟ್
ಜೋಗೇಶ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಮದುವೆ ಉಳಿಸಿಕೊಳ್ಳಲು ಹರಕೆ ಹೊರುವವರ ಮಧ್ಯೆ, ಮದುವೆ ಮುರಿದಿದ್ದಕ್ಕೆ ಹರಕೆ ಹೊತ್ತವನು ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ, (ಏಜೆನ್ಸೀಸ್).