- ಲೈಂಗಿಕ ಶೋಷಣೆ ಮತ್ತು ಧಾರ್ಮಿಕ ಮತಾಂತರ ಜಾಲದ ಮಾಸ್ಟರ್ ಮೈಂಡ್ ಕಡೆಗೂ ಅರೆಸ್ಟ್
- ಉತ್ತರ ಪ್ರದೇಶ ಮೂಲದ ಆರೋಪಿ ಇಮ್ರಾನ್ ಬಂಧನ
- ದೇಶಬಿಟ್ಟು ದುಬೈ ಹಾರಲು ಮುಂದಾಗಿದ್ದ ಆರೋಪಿಯ ಸಂಚು ಭಗ್ನ
- ಲೈಂಗಿಕ ದೌರ್ಜನ್ಯ, ಬ್ಲ್ಯಾಕ್‌ಮೇಲಿಂಗ್ ಮತ್ತು ಧಾರ್ಮಿಕ ಮತಾಂತರದ ಘಟನೆಗಳು ಬೆಳಕಿಗೆ
ಉತ್ತರ ಪ್ರದೇಶ: ಲೈಂಗಿಕ ದೌರ್ಜನ್ಯ ಮತ್ತು ಧಾರ್ಮಿಕ ಮತಾಂತರ ಜಾಲದ ಮಾಸ್ಟರ್ ಮೈಂಡ್ ಇದೀಗ ಕಡೆಗೂ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಎಲ್ಲ ಏರ್ಪೋರ್ಟ್, ಬಂದರುಗಳಿಗೆ ಈತನ ಲುಕ್ಔಟ್ ನೋಟಿಸ್ ನೀಡಿದ್ದ ಖಾಕಿ ಪಡೆಗೆ ಕಡೆಗೂ ಆರೋಪಿ ದೇಶ ಬಿಡುವ ಪ್ಲ್ಯಾನ್ ಗೊತ್ತಾಗಿ, ಶನಿವಾರ (ಜ.24) ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅರೆಸ್ಟ್ ಮಾಡಿದೆ.
ಮೂಲತಃ ಉತ್ತರ ಪ್ರದೇಶದ ಮಿರ್ಜಾಪುರ ನಿವಾಸಿ ಆಗಿರುವ ಪ್ರಕರಣದ ಪ್ರಮುಖ ಆರೋಪಿ ಹಾಗೂ ಮಾಸ್ಟರ್ಮೈಂಡ್ನನ್ನು ಇಮ್ರಾನ್ ಎಂದು ಗುರುತಿಸಲಾಗಿದೆ. ಜಿಮ್ ನೆಟ್ವರ್ಕ್ ಬಳಸಿಕೊಂಡು ಬಲವಂತದ ಮತಾಂತರ, ಲೈಂಗಿಕ ದೌರ್ಜನ್ಯ ಜಾಲವನ್ನು ಪತ್ತೆಹಚ್ಚಿದ ಕೇಂದ್ರ ಸರ್ಕಾರದ ವಲಸೆ ಇಲಾಖೆಯು, ಆರೋಪಿ ತನ್ನ ಕುಟುಂಬದೊಂದಿಗೆ ದೇಶಬಿಟ್ಟು, ದುಬೈಗೆ ಹಾರಲು ಮುಂದಾದ ಸಮಯವನ್ನು ತಿಳಿದು ಏರ್ಪೋರ್ಟ್ನಲ್ಲಿ ಬಂಧಿಸಿದೆ.
ಆರೋಪಿ ಇಮ್ರಾನ್, ವಿದೇಶಕ್ಕೆ ಪರಾರಿಯಾಗಲು ಹಾಕಿಕೊಂಡ ಪ್ಲ್ಯಾನ್ ಬಗ್ಗೆ ಗುಪ್ತಚರ ಮಾಹಿತಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಅದರಂತೆಯೇ, ಏರ್ಪೋರ್ಟ್ ಮತ್ತು ಬಂದರುಗಳಲ್ಲಿ ಲುಕ್ಔಟ್ ನೋಟಿಸ್ ನೀಡಿದ್ದ ಪೊಲೀಸರಿಗೆ ಕಡೆಗೂ ದೆಹಲಿ ಏರ್ಪೋರ್ಟ್ನಲ್ಲಿ ಆರೋಪಿಯ ಸುಳಿವು ಸಿಕ್ಕಿತು. ಪೊಲೀಸರ ಪ್ರಕಾರ, ಇಮ್ರಾನ್ ಮಿರ್ಜಾಪುರದಲ್ಲಿ ಕೆಜಿಎಂ ಜಿಮ್ ಒನ್ ಎಂಬ ಹೆಸರಿನಲ್ಲಿ ಈ ಕೆಲಸಗಳನ್ನು ಮಾಡುತ್ತಿದ್ದ ಎನ್ನಲಾಗಿದೆ.
ಅಸಲಿಗೆ, ಈ ಜಿಮ್‌ಗಳನ್ನು ಆತನ ಸಂಬಂಧಿಕರೇ ನೋಡಿಕೊಳ್ಳುತ್ತಿದ್ದರು ಎಂದು ವರದಿಯಾಗಿದೆ. ಇಲ್ಲಿಯವರೆಗೆ, ಅಂತಹ ನಾಲ್ಕು ಜಿಮ್‌ಗಳನ್ನು ಪೊಲೀಸರು ಸೀಲ್ ಮಾಡಿದ್ದಾರೆ. ಜ.20ರಂದು ಮಿರ್ಜಾಪುರದ ಕೊಟ್ವಾಲಿ ದೇಹತ್ ಪೊಲೀಸ್ ಠಾಣೆಯಲ್ಲಿ ಇಬ್ಬರು ಮಹಿಳೆಯರು ದೂರು ದಾಖಲಿಸಿದ ಬಳಿಕ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ, ಬ್ಲ್ಯಾಕ್‌ಮೇಲಿಂಗ್ ಮತ್ತು ಧಾರ್ಮಿಕ ಮತಾಂತರದ ಘಟನೆಗಳು ಬೆಳಕಿಗೆ ಬಂದಿತು.
ವರದಿಗಳ ಪ್ರಕಾರ, ಈ ಕೇಸ್ನಲ್ಲಿ ಅರೆಸ್ಟ್ ಆಗಿರುವ ಏಳನೇ ವ್ಯಕ್ತಿ ಇಮ್ರಾನ್ ಎಂದು ಹೇಳಲಾಗಿದೆ. ಬಂಧಿತರಲ್ಲಿ ಭದೋಹಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಕಾನ್‌ಸ್ಟೆಬಲ್ ಕೂಡ ಸೇರಿದ್ದು, ಆತನನ್ನು ಸದ್ಯ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಜಿಲ್ಲೆಯಲ್ಲಿ ಇಂತಹ 47 ಜಿಮ್‌ಗಳಿದ್ದು, ಅವುಗಳ ಮಾಲೀಕತ್ವ, ಟ್ರೇನರ್ ಗುರುತುಗಳು ಮತ್ತು ಮಹಿಳಾ ಟ್ರೇನರ್ಗಳು ಯಾರೆಲ್ಲ ಎಂಬ ಮಾಹಿತಿಯನ್ನು ಪೊಲೀಸರು ತನಿಖೆ ಮೂಲಕ ಪತ್ತೆಹಚ್ಚಲು ಮುಂದಾಗಿದ್ದಾರೆ,(ಏಜೆನ್ಸೀಸ್).