ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕಳೆದ ಎರಡು ದಿನಗಳಿಂದಲೂ ನವದೆಹಲಿಯಲ್ಲಿ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸುತ್ತಿರುವ ನಡುವೆಯೇ ಮಿತ್ರಪಕ್ಷ ಕಾಂಗ್ರೆಸ್ಗೆ ಎಸ್ಪಿ ಶಾಕ್ ನೀಡಿದ್ದು, ಮಂಗಳವಾರ(ನ. 24) ರಾತ್ರಿ ಅಚ್ಚರಿ ಎಂಬಂತೆ ತನ್ನ ಐದು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಎಸ್ಪಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಪಶ್ಚಿಮ ಉತ್ತರ ಪ್ರದೇಶದ ನಾಲ್ಕು ಅಭ್ಯರ್ಥಿಗಳು ಮತ್ತು ಬುಂದೇಲ್ಖಂಡ್ನ ಒಬ್ಬ ಅಭ್ಯರ್ಥಿ ಸೇರಿದ್ದಾರೆ. ಎಸ್ಪಿ ತನ್ನ ಹಾಲಿ ಶಾಸಕರಾದ ಉಮರ್ ಅಲಿ ಖಾನ್ ಅವರನ್ನು ಬೆಹತ್ನಿಂದ, ಆಶು ಮಲಿಕ್ ಅವರನ್ನು ಸಹರಾನ್ಪುರದಿಂದ, ನಹಿದ್ ಹಸನ್ ಅವರನ್ನು ಕೈರಾನಾದಿಂದ ಮತ್ತು ಮೆಹಬೂಬ್ ಅಲಿ ಅವರನ್ನು ಅಮ್ರೋಹಾದಿಂದ ಕಣಕ್ಕಿಳಿಸಿದೆ.
ಬುಂದೇಲ್ಖಂಡ್ ಪ್ರದೇಶದ ಲಲಿತ್ಪುರದಿಂದ ಜ್ಯೋತಿ ಲೋಧಿ ಅವರ ಹೆಸರು ಘೋಷಣೆ ಮಾಡಿದೆ. ಇನ್ನೂ ಪಟ್ಟಿಯಲ್ಲಿರುವ ಬೆಹತ್ ಮತ್ತು ಸಹರಾನ್ಪುರ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿತ್ತು ಎನ್ನಲಾಗಿದೆ.
ಎಸ್ಪಿಯ ಮೊದಲ ಪಟ್ಟಿ ಬಿಡುಗಡೆಯ ಬೆಳವಣಿಗೆಯು ಕಾಂಗ್ರೆಸ್ನಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಸಹರಾನ್ಪುರ ಸಂಸದ ಇಮ್ರಾನ್ ಮಸೂದ್ ಅವರು, ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಎಸ್ಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೆಗೆದುಕೊಂಡಿರುವ ನಿರ್ಧಾರವನ್ನು ಆಕ್ಷೇಪಿಸಿದ್ದಾರೆ ಎನ್ನಲಾಗಿದೆ.
ಈ ನಿರ್ಧಾರ ಏಕಪಕ್ಷೀಯವಾಗಿದ್ದು, ಮೈತ್ರಿಕೂಟದ ತತ್ವಗಳಿಗೆ ವಿರುದ್ಧವಾಗಿದೆ ಎಂದಿರುವ ಇಮ್ರಾನ್ ಮಸೂದ್, ಕಾಂಗ್ರೆಸ್ ಎರಡೂ ಸ್ಥಾನಗಳಲ್ಲಿ ಸ್ಪರ್ಧಿಸಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಸೂದ್ ಅವರು ಕಾಂಗ್ರೆಸ್ ಹೈಕಮಾಂಡ್ನೊಂದಿಗೆ ಸಂಪರ್ಕದಲ್ಲಿದ್ದು, ತಮ್ಮ ನಿಲುವನ್ನು ಸಾರ್ವಜನಿಕವಾಗಿ ಘೋಷಿಸುವ ಮೊದಲು ಹೈಕಮಾಂಡ್ನ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.
403 ಸದಸ್ಯ ಬಲದ ವಿಧಾನಸಭೆಯಲ್ಲಿ, 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಪಾಲುದಾರರಾದ ಎಸ್ಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಲಾ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂಬ ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಮನೆಯಲ್ಲಿ ಚರ್ಚೆ ನಡೆಯುತ್ತಿದೆ.
ಸಭೆಯಲ್ಲಿ ಕಾಂಗ್ರೆಸ್ ತಾನು ಸ್ಪರ್ಧಿಸಲು ಬಯಸುವ ಸುಮಾರು 130 ಕ್ಷೇತ್ರಗಳ ಪಟ್ಟಿಯನ್ನು ಎಸ್ಪಿಗೆ ನೀಡಿದೆ ಎನ್ನಲಾಗಿದೆ. ಜೊತೆಗೆ ಎಸ್ಪಿಯೂ ಕಾಂಗ್ರೆಸ್ಗೆ 26 ಸ್ಥಾನಗಳನ್ನು ನೀಡುವ ಪ್ರಸ್ತಾಪ ಮುಂದಿಟ್ಟಿದೆ ಎಂದು ಚರ್ಚೆ ನಡೆಯುತ್ತಿದೆ, ಆದರೆ ಅಂತಿಮವಾಗಿಲ್ಲ (ಏಜೆನ್ಸೀಸ್).