Yogi Adityanath Mother | ಸಿಎಂ ಯೋಗಿ ತಾಯಿ ಬಗ್ಗೆ ಆಕ್ಷೇಪಾರ್ಹ ಮಾತಾಡಿದ ಮೌಲಾನಾ ಅಬ್ದುಲ್ಲಾ ಸಲೀಮ್
ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿಯ (Yogi Adityanath Mother) ಕುರಿತು ಮೌಲಾನಾ ಅಬ್ದುಲ್ಲಾ ಸಲೀಮ್ ಎನ್ನುವವರು ನೀಡಿದ ಆಕ್ಷೇಪಾರ್ಹ ಹೇಳಿಕೆ ಈಗ ದೊಡ್ಡ ಮಟ್ಟದ ಸಂಘರ್ಷಕ್ಕೆ ಕಾರಣವಾಗಿದ್ದು, ಈ ವಿವಾದದಿಂದಾಗಿ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
83 ಎಫ್‌ಐಆರ್ ದಾಖಲು
ಧರ್ಮಗುರು ಅಬ್ದುಲ್ಲಾ ಸಲೀಮ್ ವಿರುದ್ಧ ಉತ್ತರ ಪ್ರದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಈವರೆಗೆ ಬರೋಬ್ಬರಿ 83 ಎಫ್‌ಐಆರ್‌ಗಳು (FIR) ದಾಖಲಾಗಿದ್ದು, ಸಿಎಂ ತಾಯಿಯನ್ನು ಅವಮಾನಿಸಿರುವುದು ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹಿಂದೂ ಸಂಘಟನೆಗಳು ದೂರು ಸಲ್ಲಿಸಿವೆ. ಯಾವುದೇ ಕ್ಷಣದಲ್ಲಿ ಮೌಲಾನಾ ಬಂಧನ ನಡೆಯುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳ ತಿಳಿಸಿವೆ.
ಲಖನೌದಲ್ಲಿ ಬೃಹತ್ ಪ್ರತಿಭಟನೆ
ಮೌಲಾನಾ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ರಜಪೂತ ಕರ್ಣಿ ಸೇನೆಯು ಲಖನೌದ ಹಜರತ್‌ಗಂಜ್ ಛೇದಕದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ನಗರದಾದ್ಯಂತ ಮೌಲಾನಾ ವಿರುದ್ಧ ಪೋಸ್ಟರ್‌ಗಳು ರಾರಾಜಿಸುತ್ತಿದ್ದು, ಹಲವೆಡೆ ಧರ್ಮಗುರುವಿನ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ವಾರವಿಡೀ ಪ್ರತಿಭಟನೆ ಮುಂದುವರಿಸಲು ವಿವಿಧ ಸಂಘಟನೆಗಳು ನಿರ್ಧರಿಸಿವೆ.
ಏನಿದು ವಿವಾದ..?
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೌಲಾನಾ ಸಲೀಮ್ ಯುಪಿಯ ಗೋಹತ್ಯೆ ವಿರೋಧಿ ಕಾನೂನನ್ನು ಟೀಕಿಸುತ್ತಿದ್ದರು. ಈ ಭಾಷಣದ ಮಧ್ಯೆ ಯೋಗಿ ಆದಿತ್ಯನಾಥ್ ಅವರ ತಾಯಿಯ ವಿರುದ್ಧ ಅತ್ಯಂತ ಅವಮಾನಕರ ಪದಗಳನ್ನು ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಭಾಷಣದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಕಿಡಿ ಹೊತ್ತಿಕೊಂಡಿದೆ.
ವಿವಾದದ ಬಗ್ಗೆ ಮೌಲಾನಾ ಹೇಳಿದ್ದೇನು..?
ವಿವಾದ ವ್ಯಾಪಿಸುತ್ತಿರುವುದನ್ನು ಗಮನಿಸಿದ ಮೌಲಾನಾ ಸಲೀಮ್ ವೀಡಿಯೊ ಮೂಲಕ ಸ್ಪಷ್ಟನೆ ನೀಡಿದ್ದು, ಈ ವೀಡಿಯೊ ಎರಡು ವರ್ಷ ಹಳೆಯದಾಗಿದ್ದು, ಇದನ್ನು ಎಡಿಟ್ ಮಾಡಿ ತಪ್ಪಾಗಿ ಪ್ರಸ್ತುತಪಡಿಸಲಾಗುತ್ತಿದೆ. ನಾನು ಬಳಸಿದ ಅಮ್ಮ ಎಂಬ ಪದಕ್ಕೆ ಉರ್ದುವಿನಲ್ಲಿ ತಾಯಿ ಎಂದರ್ಥ. ನಾನು ವೇದ ಮತ್ತು ಗೀತೆಯನ್ನು ಗೌರವಿಸುವವನು, ಯಾರ ನಂಬಿಕೆಗೂ ಧಕ್ಕೆ ತರುವ ಉದ್ದೇಶ ನನಗಿಲ್ಲ ಎಂದು ಹೇಳಿದ್ದಾರೆ. ಈ ಸ್ಪಷ್ಟನೆಯ ಹೊರತಾಗಿಯೂ ಸಾರ್ವಜನಿಕರ ಆಕ್ರೋಶ ತಣ್ಣಗಾಗಿಲ್ಲ ಎಂದು ತಿಳಿದುಬಂದಿದೆ(ಏಜೆನ್ಸೀಸ್).