Unseasonal Rain  
ದೇಶ

ಬಿಸಿಲಿನ ನಡುವೆ ಜಿನುಗಿದ ಮಳೆ: ಮಾರ್ಚ್‌ನಲ್ಲೇ ಚಳಿಗಾಲದ ಫೀಲ್! ಹಿಮ ಮತ್ತು ಮಳೆ ಬರಲು ಅಸಲಿ ಕಾರಣವೇನು? | Unseasonal Rain

ನವದೆಹಲಿ: ಮಾರ್ಚ್ ತಿಂಗಳ ಬೇಸಿಗೆಯ ಬಿಸಿಲಿಗೆ ಸಜ್ಜಾಗುತ್ತಿದ್ದ ದೆಹಲಿ ಮತ್ತು ಉತ್ತರ ಭಾರತದ ಜನತೆಗೆ ಪ್ರಕೃತಿ(Unseasonal Rain) ದೊಡ್ಡ ಶಾಕ್ ನೀಡಿದೆ. ವಾಯುವ್ಯ ಭಾರತದ ಮೇಲೆ ಸಕ್ರಿಯವಾಗಿರುವ 'ಅಪರೂಪದ' ಪಶ್ಚಿಮದ ಅಲೆಗಳ (Western Disturbance) ಪ್ರಭಾವದಿಂದಾಗಿ ದೆಹಲಿ ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ವಿಪರೀತ ಚಳಿ ಆವರಿಸಿದೆ.

ಏನಿದು ಅಪರೂಪದ ಹವಾಮಾನ ವೈಪರೀತ್ಯ?

ಹವಾಮಾನ ತಜ್ಞರ ಪ್ರಕಾರ, ಈ ಬಾರಿ ಉಂಟಾಗಿರುವ ಪಶ್ಚಿಮದ ಅಲೆಯ ರಚನೆಯು ಅತ್ಯಂತ ವಿಶಿಷ್ಟವಾಗಿದೆ. ಸಾವಿರಾರು ಕಿಲೋಮೀಟರ್ ಉದ್ದದ ನೇರ ರೇಖೆಯಂತಹ ಮೋಡಗಳ ಸಾಲು ನಿರ್ಮಾಣವಾಗಿದ್ದು, ಇದು ಅತಿ ವೇಗದ ಗಾಳಿ ಮತ್ತು ಗುಡುಗು ಸಹಿತ ಮಳೆಯನ್ನು ತರುತ್ತಿದೆ. ಬುಧವಾರ ಸಂಜೆ ಗಂಟೆಗೆ 68 ಕಿ.ಮೀ ವೇಗದಲ್ಲಿ ಬೀಸಿದ ಗಾಳಿಯು ಕೇವಲ ಒಂದು ಗಂಟೆಯಲ್ಲಿ ದೆಹಲಿಯ ತಾಪಮಾನವನ್ನು 29 ಡಿಗ್ರಿ ಸೆಲ್ಸಿಯಸ್‌ನಿಂದ 19 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುವಂತೆ ಮಾಡಿದೆ.

ಮತ್ತೆ ಮರಳಿದ ಚಳಿಗಾಲದ ಅನುಭವ

ಹವಾಮಾನ ಇಲಾಖೆ (IMD) ಗುರುವಾರ ಮತ್ತು ಶುಕ್ರವಾರಕ್ಕೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಶುಕ್ರವಾರ (ಮಾರ್ಚ್ 20) ಈ ಹವಾಮಾನ ವ್ಯವಸ್ಥೆಯು ಉತ್ತುಂಗಕ್ಕೇರಲಿದ್ದು, ದೆಹಲಿ, ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಹಲವು ನಗರಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 10 ರಿಂದ 15 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಲಿದೆ. ಇದು ಮಾರ್ಚ್ ತಿಂಗಳಿಗಿಂತ ಜನವರಿಯ ಚಳಿಗಾಲದ ಅನುಭವವನ್ನು ನೀಡುತ್ತಿದೆ.
ಹಿಮಾಲಯದಲ್ಲಿ ಭಾರಿ ಹಿಮಪಾತ: ಇದೇ ಸಮಯದಲ್ಲಿ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಭಾರಿ ಹಿಮಪಾತದ ಮುನ್ಸೂಚನೆ ನೀಡಲಾಗಿದೆ.
ವಿಮಾನ ಸಂಚಾರ ವ್ಯತ್ಯಯ: ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGI) ಹವಾಮಾನ ವೈಪರೀತ್ಯದಿಂದಾಗಿ ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ.
ಹವಾಮಾನ ತಜ್ಞ ನವದೀಪ್ ದಹಿಯಾ ಅವರು ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದು, "ನಿಮ್ಮ ಜಾಕೆಟ್ ಮತ್ತು ಸ್ವೆಟರ್‌ಗಳನ್ನು ಇನ್ನೂ ಪ್ಯಾಕ್ ಮಾಡಬೇಡಿ, ಇನ್ನು ಎರಡು ದಿನ ಅವುಗಳ ಅಗತ್ಯವಿದೆ. ಮಾರ್ಚ್‌ನಲ್ಲಿ ಜನವರಿಯಂತಹ ಮಳೆಗೆ ಸಿದ್ಧರಾಗಿ!" ಎಂದು ಜನರಿಗೆ ಎಚ್ಚರಿಕೆ ನೀಡಿದ್ದಾರೆ,(ಏಜೆನ್ಸೀಸ್).