ಬುಧವಾರ (ಏ.29) ಜೈಶ್-ಎ-ಮೊಹಮ್ಮದ್ ಕಮಾಂಡರ್ ಮೌಲಾನಾ ಸಲ್ಮಾನ್ ಅಜರ್ ಸಾವು
- ಪಾಕಿಸ್ತಾನದಲ್ಲಿ ನಿಲ್ಲದ ಅಪರಿಚಿತನ ಆರ್ಭಟ
- ಬುಧವಾರ (ಏ.29) ಜೈಶ್-ಎ-ಮೊಹಮ್ಮದ್ ಕಮಾಂಡರ್ ಮೌಲಾನಾ ಸಲ್ಮಾನ್ ಅಜರ್ ಸಾವು
- ಮೌಲಾನಾ ಮಸೂದ್ ಅಜರ್ನ ಸಹೋದರ ಸಂಬಂಧಿಯಾಗಿದ್ದ ಸಲ್ಮಾನ್ ಅಜರ್
ಇಸ್ಲಾಮಾಬಾದ್: ಜಾಗತಿಕ ಭಯೋತ್ಪಾದನಾ ಸಂಘಟನೆ ಎಂದು ಗುರುತಿಸಿ ಕೊಂಡಿರುವ ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಸಂಘಟನೆಯ ಪ್ರಮುಖ ಕಮಾಂಡರ್ ಮೌಲಾನಾ ಸಲ್ಮಾನ್ ಅಜರ್ (Maulana Salman Azhar)ನನ್ನು ಬುಧವಾರ (ಏ.29) ಪಾಕಿಸ್ತಾನದ ಭಾವಲ್ಪುರ್ದಲ್ಲಿ ಅಪರಿಚಿನ ಬಂದೂಕುದಾರಿಗಳು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಮೃತ ಉಗ್ರ ಮೌಲಾನಾ ಸಲ್ಮಾನ್ ಅಜರ್, ಮೌಲಾನಾ ಮಸೂರ್ ಅಜರ್ನ ಸಹೋದರ ಸಂಬಂಧಿ ಎಂದು ಸಹ ಹೇಳಲಾಗುತ್ತಿದೆ. ಈತ ಪಂಜಾಬ್ ಭಾಗದಲ್ಲಿ ಭಯೋತ್ಪಾದನೆಯನ್ನು ಹೆಚ್ಚಿಸುವ ಜವಾಬ್ದಾರಿ ಹೊಂದಿದ್ದ ಎಂಬ ಮಾಹಿತಿಯಿದೆ.
ಮೌಲಾನಾ ಸಲ್ಮಾನ್ ಅಜರ್ನನ್ನು ಹತ್ಯೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್ (ಟ್ವಿಟರ್) ನಲ್ಲಿ ವೈರಲ್ ಆಗುತ್ತಿದ್ದು, ಮೋಟರ್ ಬೈಕ್ ಏರಿ ಬಂದ ಇಬ್ಬರು ಎಕೆ 47 ಗನ್ ಮೂಲಕ ಮನೆಯಲ್ಲಿದ್ದ ಸಲ್ಮಾನ್ ಅಜರ್ನನ್ನು ಹತ್ಯೆ ಮಾಡಿ ಅಲ್ಲಿಂದ ಪಲಾಯನ ಮಾಡಿರುವುದನ್ನು ನೋಡಬಹುದಾಗಿದೆ.
ಪಾಕಿಸ್ತಾನದಲ್ಲಿ ನಿಲ್ಲದ ಅಪರಿಚಿತನ ಅಟ್ಟಹಾಸ!
ಕಳೆದ ಕೆಲ ವರ್ಷಗಳಿಂದ ಪಾಕಿಸ್ತಾನದಲ್ಲಿ ಕುಳಿತು ಕೊಂಡು ಭಾರತದ ವಿರುದ್ಧ ಸಂಚನ್ನು ರೂಪಿಸುತ್ತಿದ್ದ ಭಯೋತ್ಪಾದಕರ ಬೇಟೆ ತೀವ್ರಗತಿಯಲ್ಲಿ ನಡೆಯುತ್ತಿದೆ.
ಕಳೆದ ತಿಂಗಳು, ಲಷ್ಕರ್-ಎ-ತೊಯ್ಬಾ ಸಂಘಟನೆಯ ಸಹ ಸಂಸ್ಥಾಪಕನಾದ ಅಮೀರ್ ಹಮ್ಜಾನನ್ನು ಲಾಹೋರಿನ ನಡು ರಸ್ತೆಯಲ್ಲಿ ಅಪರಿಚಿತ ಬಂದೂಕುದಾರಿಗಳು ಗುಂಡಿನ ದಾಳಿ ನಡೆಸಿದ್ದು, ಆತ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟವನ್ನು ಮುಂದುವರೆಸಿದ್ದಾನೆ.
ಈ ದಾಳಿಯೂ ಮೊದಲು ಜೈಶ್-ಎ-ಮೊಹಮ್ಮದ್ ಸಂಘಟನೆಯ ಮೌಲಾನಾ ಮಸೂದ್ ಅಜರ್ನ ಸಹೋದರ, ಮೊಹಮ್ಮದ್ ತಾಹೀರ್ ಅನ್ವರ್ ಸಹ ನಿಗೂಢವಾಗಿ ಸಾವನ್ನಪ್ಪಿದ್ದನು. ಕಳೆದ ವರ್ಷ ಮಾರ್ಚ್ನಲ್ಲಿ, 26/11 ಗೆ ಕಾರಣನಾದ ಅಬು ಕತಲ್ ಅಲಿಯಾಸ್ ಕತಲ್ ಸಿಂಧಿಯನ್ನು ಅಪರಿಚಿತರು ಗುಂಡಿಕ್ಕಿ ಕೊಂದಿದ್ದರು.
ಒಂದೇ ವರ್ಷದಲ್ಲಿ 30 ಉಗ್ರರು ಮಟಾಷ್!
2026 ಒಂದೇ ವರ್ಷ ಪಾಕಿಸ್ತಾನದಲ್ಲಿ ಸುಮಾರು 30 ಭಯೋತ್ಪಾದಕರನ್ನು ಅಪರಿಚಿತ ಬಂದೂಕುದಾರಿಗಳು ಕೊಂದಿರುವುದು ವರದಿಯಾಗಿದೆ. ಸಾವನ್ನಪ್ಪಿರುವ ಬಹುತೇಕರು ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದಿನ್ ಸಂಘಟನೆಗೆ ಸೇರಿದವರಾಗಿದ್ದಾರೆ. ಈ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ಅನುಮಾನ ವ್ಯಕ್ತ ಪಡಿಸುತ್ತಿವೆ. ಆದರೆ ಭಾರತ ಈ ಕುರಿತು ಯಾವುದೇ ಅಧಿಕೃತ ಹೇಳಿಕೆಗಳನ್ನು ಇಲ್ಲಿವರೆಗೆ ನೀಡಿಲ್ಲ, (ಏಜನ್ಸೀಸ್).