- ಮದುವೆಯಾಗದ ಯುವಕರು ಮದ್ಯಪಾನ ಮಾಡಿದರೆ ಭಾರಿ ದಂಡ
- ಕದ್ದುಮುಚ್ಚಿ ಕುಡಿಯುವವರ ಬಗ್ಗೆ ಮಾಹಿತಿ ನೀಡಿದರೆ 2 ಸಾವಿರ ರೂ. ಬಹುಮಾನ
- ಈ ಊರಿನ ವಿಚಿತ್ರ ನಿಯಮಗಳ ಬಗ್ಗೆ ಕೇಳಿದ್ರೆ ನೀವು ಬೆರಗಾಗೋದು ಖಚಿತ
Strange Rules Village: ಮದ್ಯ ಅಥವಾ ಎಣ್ಣೆಯ ಕಿಕ್ಗೋಸ್ಕರ ತಡರಾತ್ರಿಯಾದರೂ ಮೈಲಿಗಳ ದೂರದ ಬಾರ್ಗಳ ಬಾಗಿಲು ಬಡಿಯುವವರ ಮಧ್ಯೆ, ಇಲ್ಲೊಂದು ಊರಿನಲ್ಲಿ ಇನ್ನೂ ದಾಂಪತ್ಯ ಜೀವನಕ್ಕೆ ಕಾಲಿಡದ ಯುವಕರು ಎಣ್ಣೆಯನ್ನು ಮುಟ್ಟುವುದಿರಲಿ ಅತ್ತ ತಿರುಗಿಯೂ ನೋಡುವಂತಿಲ್ಲ ಎನ್ನುವ ಕಠಿಣ ನಿಯಮಗಳು ಜಾರಿಯಲ್ಲಿದೆ ಮತ್ತು ಅದನ್ನು ಘರ್ಷಣೆಗಳ ನಡುವೆಯೇ ಪಾಲನೆ ಮಾಡಲಾಗುತ್ತಿದೆ ಎಂಬ ಸಂಗತಿ ನಿಜಕ್ಕೂ ಹುಬ್ಬೇರಿಸುವಂತಿದೆ.
ಸಮುದಾಯದ ಹಿರಿಯರು ತಮ್ಮ ಊರಿನ ಯುವಕರು ಈ ಮದ್ಯ ಕುಡಿಯುವ ಚಟಕ್ಕೆ ದಾಸರಾಗುತ್ತಾರೆ ಎಂದು ತಡೆಗಟ್ಟಲು ಒಂದು ನವೀನ ಪದ್ಧತಿಯನ್ನು ಕೈಗೊಂಡಿದ್ದು, ಯುವಜನರ ಬದುಕು ಹಸನಾಗಿರಬೇಕು ಮತ್ತು ಉಜ್ವಲ ಭವಿಷ್ಯ ಅವರದ್ದಾಗಬೇಕು ಎಂಬ ಮಹತ್ವದ ಉದ್ದೇಶದಿಂದ ಗ್ರಾಮ ಪಂಚಾಯತ್ ಈ ಕಠಿಣ ನಿಯಮಗಳನ್ನು ಜಾರಿಗೆಗೊಳಿಸಿದೆ. ಅಕಸ್ಮಾತ್ ಯುವಕರು ಏನಾದರೂ ಇಂತಹ ಕಠಿಣ ರೂಲ್ಸ್ಗಳನ್ನು ಬ್ರೇಕ್ ಮಾಡಲು ಪ್ರಯತ್ನಿಸಿದ್ದಾಗಲಿ, ಮಾಡಿರುವುದು ಕಂಡುಬಂದರೆ ಅದಕ್ಕೆ ನಗದು ರೂಪದಲ್ಲಿ ದಂಢ ವಿಧಿಸಲಾಗುವುದು.
ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಕೀಲ್ವೇಲೂರು ಬಳಿಯ ವಿಲುಂಡಮವಾಡಿ ಎಂಬ ಗ್ರಾಮವು ಈ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಇನ್ನೂ ಮದುವೆಯಾಗದ ಯುವಜನತೆ, ಏನಾದರೂ ಕುಡಿಯುವಾಗ ಸಿಕ್ಕಿಬಿದ್ದರೆ ಅವರಿಗೆ ಬರೋಬ್ಬರಿ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಅದೇ ಎಣ್ಣೆಯನ್ನು ಕದ್ದುಮುಚ್ಚಿ ಕುಡಿಯುತ್ತಿರುವವರನ್ನು ರೆಂಡ್ ಹ್ಯಾಂಡ್ ಆಗಿ, ಸಾಕ್ಷಿ ಸಮೇತ ಮಾಹಿತಿ ಕೊಟ್ಟವರಿಗೆ 2 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದು ಘೋಷಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ, ಗ್ರಾಮದ ಮಧ್ಯದಲ್ಲಿ ನಿಯಮಗಳನ್ನು ಅಳವಡಿಸಿರುವ ದೊಡ್ಡ ಬ್ಯಾನರ್ ಕೂಡ ಹಾಕಲಾಗಿದೆ.
ವಿವಾಹಿತರಿಗೆ ವಿನಾಯಿತಿ ಇದೆ! ಆದ್ರೆ...
ಈ ಮದ್ಯ ನಿಷೇಧದಿಂದ ವಿವಾಹಿತ ಪುರುಷರಿಗೆ ಕೆಲವು ವಿನಾಯಿತಿಗಳನ್ನು ನೀಡಲಾಗಿದ್ದರೂ ಕಠಿಣ ಷರತ್ತುಗಳನ್ನು ವಿಧಿಸಲಾಗಿದೆ. ಮದುವೆಯಾದ ಪುರುಷರು ಮದ್ಯ ಸೇವಿಸಬಹುದು. ಆದರೆ, ಅವರು ಕುಡಿದು ಮನೆಗೆ ಬಂದು ಹೆಂಡತಿ ಅಥವಾ ಕುಟುಂಬಸ್ಥರ ಜತೆ ಜಗಳ ಪ್ರಾರಂಭಿಸಿದರೆ, ಅದು ಮನೆಯಲ್ಲಿರಲಿ ಅಥವಾ ಪಾರ್ಟಿಯಲ್ಲಾಗಲಿ, ಅಂಥವರಿಗೂ 5,000 ರೂ. ದಂಡ ಹಾಕಲಾಗುವುದು.
ಗ್ರಾಮದ ಹಿರಿಯರು ತೆಗೆದುಕೊಂಡ ಈ ನವೀನ ನಿರ್ಧಾರವು ಗ್ರಾಮದಲ್ಲಿ ಗಂಡ-ಹೆಂಡಿರ ಮತ್ತು ಕುಟುಂಬಗಳಲ್ಲಿ ಜಗಳಗಳ ಸಂಖ್ಯೆಯನ್ನು ಕಡಿಮೆ ಮಾಡಿ ಶಾಂತಿ, ನೆಮ್ಮದಿಯನ್ನು ತಂದಿದೆ ಎಂದು ಊರಿನ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ, ಮೆಚ್ಚಿ ಮಾತನಾಡಿದ್ದು, ಇಂತಹ ನಿಯಮ, ಕ್ರಮಗಳು ಎಲ್ಲಾ ಊರಿನಲ್ಲಿ ಬಂದರೆ, ಸಮಾಜ ಇನ್ನೂ ಚೆನ್ನಾಗಿರುತ್ತದೆ ಎಂದು ಅಭಿಪ್ರಾಯಿಸುತ್ತಾರೆ. ಈ ಬಗ್ಗೆ ನೀವೇನು ಹೇಳ್ತೀರಾ? ಕಮೆಂಟ್ ಮಾಡಿ,(ಏಜೆನ್ಸೀಸ್).