Sonam Wangchuk > ಸರ್ಕಾರದ ಜೊತೆಗಿನ ಸಭೆಯ ಅಸಲಿ ಸತ್ಯ ಬಿಚ್ಚಿಟ್ಟ ಸೋನಮ್ ವಾಂಗ್ಚುಕ್! 
ದೇಶ

ಶಿಕ್ಷಣ ಸಚಿವ ಸ್ಥಾನವನ್ನೇ ಕೇಳುತ್ತಿದ್ದೆ!...ಸರ್ಕಾರದ ಜೊತೆಗಿನ ಸಭೆಯ ಅಸಲಿ ಸತ್ಯ ಬಿಚ್ಚಿಟ್ಟ ಸೋನಮ್ ವಾಂಗ್ಚುಕ್! | Sonam Wangchuk

ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ (Sonam Wangchuk) ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ ಸಂದರ್ಭದ ಫೋಟೋಗಳನ್ನು ಬಿಡುಗಡೆ ಮಾಡುವ ಮೂಲಕ ಕೇಂದ್ರ ಸರ್ಕಾರವು ತಮಗೆ ನೀಡಿದ್ದ ಭರವಸೆಯನ್ನು ಮುರಿದಿದೆ ಎಂದು ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬೆಳವಣಿಗೆ ರಾಜಕೀಯ ನಾಯಕರ ಮೇಲಿದ್ದ ತಮ್ಮ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವಂತೆ ಮಾಡಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇಂಡಿಯಾ ಟುಡೇ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವಾಂಗ್ಚುಕ್, ಕೇಂದ್ರ ಸಚಿವರಾದ ಜೆ ಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರೊಂದಿಗೆ ಮಧ್ಯರಾತ್ರಿ ನಡೆದ ಸಭೆಯ ಫೋಟೋಗಳನ್ನು ಪ್ರಕಟಿಸಬಾರದು ಎಂಬ ಸ್ಪಷ್ಟ ಒಪ್ಪಂದವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ವಿರೋಧ ಪಕ್ಷದ ನಾಯಕರು ಮತ್ತು ವಿದ್ಯಾರ್ಥಿ ನಾಯಕರನ್ನು ಸೇರಿಸಿಕೊಂಡು ಎಲ್ಲರೂ ಒಟ್ಟಾಗಿ ಈ ಸುದ್ದಿಯನ್ನು ಪ್ರಕಟಿಸಬೇಕು ಎಂಬುದು ವಾಂಗ್ಚುಕ್ ಅವರ ಷರತ್ತಾಗಿತ್ತು. ಆದರೆ, ಸಚಿವರು ತಮ್ಮೊಂದಿಗೆ ಸ್ವಂತ ಛಾಯಾಗ್ರಾಹಕರನ್ನು ಕರೆತಂದಿದ್ದು, ಫೋಟೋ ಬಿಡುಗಡೆ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದ್ದರೂ ಸಹ ಕೊಟ್ಟ ಮಾತನ್ನು ತಪ್ಪಿದ್ದಾರೆ ಎಂದು ಅವರು ದೂರಿದ್ದಾರೆ.

ವಾಂಗ್ಚುಕ್ ವಿಧಿಸಿದ್ದ ಆ ಷರತ್ತು ಏನು...?

ಬೇಡಿಕೆಗಳನ್ನು ಒಪ್ಪಿಕೊಂಡ ಮೇಲೆ, ಸರ್ಕಾರದ ಅಧಿಕಾರಿಗಳು ಅವರಿಗೆ ಹಣ್ಣಿನ ರಸ ಅಥವಾ ಸೂಪ್ ಕೊಟ್ಟು ಉಪವಾಸ ಮುರಿಸುವುದು ವಾಡಿಕೆ. ಆದರೆ ಈ ವಿಷಯದಲ್ಲಿ ಸರ್ಕಾರಿ ಸಚಿವರು ಮಾತ್ರ ಭಾಗಿಯಾಗಿ, ಇದನ್ನು ಕೇವಲ ಆಡಳಿತ ಪಕ್ಷದ ಸಾಧನೆ ಎಂದು ತೋರಿಸಿಕೊಳ್ಳಬಾರದು ಎಂಬುದು ವಾಂಗ್ಚುಕ್ ಸ್ಪಷ್ಟ ನಿಲುವಾಗಿತ್ತು. ಈ ಉಪವಾಸ ಅಂತ್ಯಗೊಳಿಸುವ ಕ್ಷಣದಲ್ಲಿ ವಿರೋಧ ಪಕ್ಷದ ನಾಯಕರು ಹಾಗೂ ವಿದ್ಯಾರ್ಥಿ ನಾಯಕರು ಕೂಡ ಜೊತೆಗಿರಬೇಕು, ಎಲ್ಲರೂ ಸೇರಿ ಇದನ್ನು ಒಟ್ಟಾಗಿ ಘೋಷಿಸಬೇಕು ಎಂಬುದು ತಮ್ಮ ಆಸೆಯಾಗಿತ್ತು ಎಂದು ವಾಂಗ್ಚುಕ್ ತಿಳಿಸಿದ್ದಾರೆ.
ಸಚಿವರು ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ್ದರು ಮತ್ತು ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಅಧಿಕಾರಿಗಳನ್ನು ಈ ಮೌಖಿಕ ಒಪ್ಪಂದಕ್ಕೆ ಸಾಕ್ಷಿಯನ್ನಾಗಿ ಮಾಡಿಕೊಳ್ಳಲಾಗಿತ್ತು. ತಾವು ಎಲ್ಲಾ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜಂಟಿಯಾಗಿ ಸುದ್ದಿ ಬಿಡುಗಡೆ ಮಾಡುವವರೆಗೆ ಯಾವುದೇ ಚಿತ್ರಗಳನ್ನು ಮಾಧ್ಯಮಗಳಿಗೆ ನೀಡಬಾರದು ಎಂದು ಐಬಿ ಅಧಿಕಾರಿಗಳಿಗೆ ತಿಳಿಸಿದಾಗ, ಅವರು ಸಹ ಇದಕ್ಕೆ ಒಪ್ಪಿಕೊಂಡು ಭರವಸೆ ನೀಡಿದ್ದರು ಎಂದು ವಾಂಗ್ಚುಕ್ ಬಹಿರಂಗಪಡಿಸಿದ್ದಾರೆ.
ಆದರೆ, ಈ ಮಾತನ್ನು ಕೆಲವೇ ನಿಮಿಷಗಳಲ್ಲಿ ಉಲ್ಲಂಘಿಸಲಾಯಿತು, ಕೇವಲ ಐದು ನಿಮಿಷಗಳಲ್ಲಿ ಹಿರಿಯ ಐಬಿ ಅಧಿಕಾರಿಯೊಬ್ಬರು ಧಾವಿಸಿ ಬಂದು, ಈ ಚಿತ್ರಗಳು ಈಗಾಗಲೇ ದೂರದರ್ಶನ ವಾಹಿನಿಗಳಲ್ಲಿ ಬಿತ್ತರವಾಗುತ್ತಿವೆ ಎಂದು ತಿಳಿಸಿದರು ಎಂದು ಅವರು ಆಘಾತಕಾರಿ ಸಂಗತಿಯನ್ನು ನೆನಪಿಸಿಕೊಂಡಿದ್ದಾರೆ.

ಶಿಕ್ಷಣ ಸಚಿವ ಸ್ಥಾನವನ್ನೇ ಕೇಳುತ್ತಿದ್ದೆ!...

ಇದೇ ವೇಳೆ, ತಾವು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲು ಸರ್ಕಾರದೊಂದಿಗೆ ಮಧ್ಯರಾತ್ರಿಯ ಡೀಲ್ ಮಾಡಿಕೊಂಡಿದ್ದೀರಿ ಎಂಬ ಆರೋಪಗಳನ್ನು ವಾಂಗ್ಚುಕ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ತಮಗೆ ಡೀಲ್ ಮಾಡುವ ಉದ್ದೇಶವಿದ್ದರೆ ಅದನ್ನು ಬಹುಬೇಗನೇ ಮಾಡಬಹುದಿತ್ತು ಮತ್ತು 26 ದಿನಗಳ ಕಾಲ ಕಠಿಣ ಉಪವಾಸ ಸತ್ಯಾಗ್ರಹ ಕೂರುವ ಅಗತ್ಯವೇ ಇರಲಿಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ. ತಮಗೆ ದೊಡ್ಡ ಮಟ್ಟದ ಒಪ್ಪಂದಗಳನ್ನು ಮಾಡಿಕೊಳ್ಳುವ ಅವಕಾಶಗಳಿದ್ದವು ಮತ್ತು ತಾವು ಬಯಸಿದ್ದರೆ ಶಿಕ್ಷಣ ಸಚಿವ ಸ್ಥಾನವನ್ನು ಸಹ ಕೇಳಬಹುದಿತ್ತು ಎಂದು ಹೇಳಿದ ಅವರು, ತಮಗೆ ಒಪ್ಪಂದ ಮಾಡಿಕೊಳ್ಳುವ ಯಾವುದೇ ದುರುದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಇಡೀ ಘಟನೆಯು ರಾಜಕೀಯ ನಾಯಕರ ಮೇಲಿದ್ದ ನಂಬಿಕೆಯನ್ನು ತಾವು ಕಳೆದುಕೊಂಡಿರುವುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ನೀಟ್ ಪರೀಕ್ಷೆಯ ಅಕ್ರಮಗಳ ವಿರುದ್ಧ ಅಭಿಜೀತ್ ದಿಪ್ಕೆ ನೇತೃತ್ವದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿದ್ದ ಪ್ರತಿಭಟನೆಯನ್ನು ಬೆಂಬಲಿಸಿ ಸೋನಮ್ ವಾಂಗ್ಚುಕ್ ಜೂನ್ 28 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ತಮ್ಮ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು. ಪ್ರತಿಭಟನೆಯ ನಡುವೆ ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿದಾಗ, ಜುಲೈ 18 ರಂದು ಪೊಲೀಸರು ಅವರನ್ನು ಬಲವಂತವಾಗಿ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ರವಾನಿಸಿದ್ದರು. ವಾಂಗ್ಚುಕ್ ಅವರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು.
ಇದಾದ ಬಳಿಕ, ವಾಂಗ್ಚುಕ್ ಪತ್ನಿ ಗೀತಾಂಜಲಿ ಜೆ ಆಂಗ್ಮೋ ತಮ್ಮ ಪತಿಯನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ನಂತರ ಜುಲೈ 21 ರಂದು ಅವರನ್ನು ಮೇದಾಂತ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ಕೇಂದ್ರ ಸಚಿವರಾದ ಜೆ ಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ವಾಂಗ್ಚುಕ್​ರನ್ನು ಭೇಟಿಯಾಗಿದ್ದರು. ಪೇಪರ್ ಲೀಕ್ ತಡೆ ಕಾಯ್ದೆ ಮತ್ತು ವೇಗದ ಗತಿಯ ತನಿಖೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಡರಾತ್ರಿ ವಿಡಿಯೋ ಸಂದೇಶ ನೀಡಿದ ನಂತರ, ಜುಲೈ 24 ರ ತಡರಾತ್ರಿ ವಾಂಗ್ಚುಕ್ ತಮ್ಮ 26 ದಿನಗಳ ಸುದೀರ್ಘ ಉಪವಾಸವನ್ನು ಅಂತ್ಯಗೊಳಿಸಿದರು. ಈ ವೇಳೆ ಸಚಿವರು ಅವರಿಗೆ ಸೂಪ್ ನೀಡಿ ಉಪವಾಸ ಸತ್ಯಗ್ರಹವನ್ನು ಅಂತ್ಯಗೊಳಿಸುತ್ತಿರುವ ಫೋಟೋಗಳು ಮಾಧ್ಯಮಗಳಲ್ಲಿ ಬಿತ್ತರವಾಗಿದ್ದವು(ಏಜೆನ್ಸೀಸ್​).