ಕೇಂದ್ರ ಬಜೆಟ್​ 2026  
ದೇಶ

ಸಂಜೆ 5 ಗಂಟೆಗಿದ್ದ ಕೇಂದ್ರ ಬಜೆಟ್​ ಬೆಳಗ್ಗೆ 11ಕ್ಕೆ ಶಿಫ್ಟ್​ ಆಗಿದ್ದೇಕೆ? ಇದರ ಹಿಂದಿದೆ ಬ್ರಿಟಿಷ್ ಟೈಮಿಂಗ್, ಇಲ್ಲಿದೆ ರೋಚಕ ಸಂಗತಿ​ ​

ಪ್ರಮುಖ ಮುಖ್ಯಾಂಶಗಳು

  • ಬ್ರಿಟಿಷ್ ಸಮಯಕ್ಕೆ ಗುಡ್​ಬೈ, ಬೆಳಗ್ಗೆ 11 ಗಂಟೆಗೆ ಬಜೆಟ್ ಶುರು
  • ಸಂಜೆ 5 ಗಂಟೆಗೆ ನಡೆಯುತ್ತಿದ್ದ ಬಜೆಟ್ ಸಂಪ್ರದಾಯ ಬದಲಾಗಿದ್ದು ಯಾವಾಗ?
  • ಬಜೆಟ್ ಸಮಯದ ಹಿಂದಿನ ಬ್ರಿಟಿಷ್ ರಹಸ್ಯವೇನು?
  • 53 ವರ್ಷಗಳಿಂದ ಕೇಂದ್ರ ಬಜೆಟ್ ಅನ್ನು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು ಎಂಬ ಸಂಗತಿಯೇ ರೋಚಕ
ನವದೆಹಲಿ: ದೇಶದ ಜನತೆಯ ಕಣ್ಣು ಸದ್ಯ ಫೆ.01ರಂದು ನಡೆಯಲಿರುವ ಕೇಂದ್ರ ಬಜೆಟ್ ಮೇಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 9ನೇ ಬಾರಿಗೆ ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿರುವುದು ಮತ್ತೊಂದು ವಿಶೇಷ. ಪ್ರತಿವರ್ಷ ಬೆಳಗ್ಗೆ 11 ಗಂಟೆಗೆ ಮಂಡನೆಯಾಗುವ ಬಜೆಟ್​, 1999ಕ್ಕೂ ಹಿಂದೆ ಸಂಜೆ 5 ಗಂಟೆಗೆ ನಡೆಯುತ್ತಿತ್ತು ಎಂಬ ಸಂಗತಿಯೇ ರೋಚಕ.   
ಮೊದಲು, ಬಜೆಟ್ ಅನ್ನು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. ಆದರೆ, ನಂತರದಲ್ಲಿ ಈ ಸಂಪ್ರದಾಯ ಇದ್ದಕ್ಕಿದ್ದಂತೆ ಬದಲಾಯಿತು. ಅಷ್ಟಕ್ಕೂ ಸಮಯದಲ್ಲಿ ಏಕೆ ದಿಢೀರ್​ ಬದಲಾವಣೆಗೊಂಡಿತು? ವಾಸ್ತವವಾಗಿ ಈ ನಿರ್ಧಾರವನ್ನು ಕೈಗೊಂಡವರು ಯಾರು? ಎಂಬ ಒಂದಷ್ಟು ಕುತೂಹಲಕಾರಿ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ವಿವರವಾದ ಉತ್ತರ. 

ಬ್ರಿಟಿಷ್ ಸಮಯಕ್ಕೆ ತಕ್ಕಂತೆ ಬಜೆಟ್ ಮಂಡನೆ

ವಾಸ್ತವವಾಗಿ, ಸ್ವಾತಂತ್ರ್ಯದ ಬಳಿಕ ಸುಮಾರು 53 ವರ್ಷಗಳ ಕಾಲ, ಕೇಂದ್ರ ಬಜೆಟ್ ಅನ್ನು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. ಈ ಸಂಪ್ರದಾಯವು ಬ್ರಿಟಿಷ್ ಕಾಲದ್ದು. ಆ ಸಮಯದಲ್ಲಿ, ಭಾರತದಲ್ಲಿ ಸಂಜೆ 5 ಗಂಟೆಯಾಗಿದ್ದರೆ, ಬ್ರಿಟನ್‌ನಲ್ಲಿ ಬೆಳಗ್ಗೆ 11 ಗಂಟೆಯಾಗಿರುತ್ತಿತ್ತು. ಬಜೆಟ್ ಸಂಬಂಧಿತ ಮಾಹಿತಿಯನ್ನು ಅಲ್ಲಿನ ಅಧಿಕಾರಿಗಳೊಂದಿಗೆ ಸುಲಭವಾಗಿ ಹಂಚಿಕೊಳ್ಳಲು ಸರ್ಕಾರ ಲಂಡನ್ ಸಮಯಕ್ಕೆ ಅನುಗುಣವಾಗಿ ನಿಗದಿಪಡಿಸುತ್ತಿತ್ತು ಎನ್ನಲಾಗಿದೆ.

1999ರಲ್ಲಿ ಬ್ರಿಟಿಷ್ ಸಂಪ್ರದಾಯ ರದ್ದು

ಸ್ವಾತಂತ್ರ್ಯದ ನಂತರ ಈ ವ್ಯವಸ್ಥೆಯು ದೀರ್ಘಕಾಲದವರೆಗೆ ಮುಂದುವರೆಯಿತು. ಕಾಲಾನಂತರದಲ್ಲಿ, ಅದರ ಅಗತ್ಯತೆ ಕುಸಿಯಲಾರಂಭಿಸಿತು. ಆದರೆ, ಸಂಪ್ರದಾಯ ಮಾತ್ರ ಬದಲಾಗಲಿಲ್ಲ. ಅಂತಿಮವಾಗಿ, ಇದನ್ನು 1999ರಲ್ಲಿ ಕೈಬಿಡಲಾಯಿತು. ಆ ಸಮಯದಲ್ಲಿ, ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಯಶವಂತ್ ಸಿನ್ಹಾ ಅವರು ಹಣಕಾಸು ಸಚಿವರಾಗಿದ್ದರು. ಅವರು ಮೊದಲ ಬಾರಿಗೆ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸುವುದು ಸರಿ ಎಂದು ನಿರ್ಧರಿಸಿದರು. ಈ ಮೂಲಕ ದಶಕಗಳಷ್ಟು ಹಳೆಯದಾದ ಸಂಪ್ರದಾಯಕ್ಕೆ ಕೊನೆ ಹಾಡಿದರು.

ಬಜೆಟ್ ದಿನಾಂಕ, ಸಮಯ ಎರಡೂ ಬದಲು 

2017ರಲ್ಲಿ ಬಜೆಟ್ ಸಮಯ ಮಾತ್ರವಲ್ಲ, ದಿನಾಂಕವೂ ಬದಲಾಯಿತು. ಇದಕ್ಕೂ ಮೊದಲು ಕೇಂದ್ರ ಬಜೆಟ್ ಅನ್ನು ಫೆಬ್ರವರಿ ಕೊನೆಯ ವಾರದಲ್ಲಿ ಮಂಡಿಸಲಾಗುತ್ತಿತ್ತು. ಈ ಸಂಪ್ರದಾಯವು ಬ್ರಿಟಿಷ್ ಯುಗದಿಂದಲೂ ನಡೆದುಕೊಂಡು ಬಂದಿತ್ತು. ಆದಾಗ್ಯೂ, ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆಗಳು ಮತ್ತು ತೆರಿಗೆ ಬದಲಾವಣೆಗಳ ಅನುಷ್ಠಾನ ವಿಳಂಬವಾಗುತ್ತದೆ ಎಂದು ಭಾವಿಸಿ, ಕೇಂದ್ರ ಸರ್ಕಾರ ಫೆ.01ಕ್ಕೆ ಬೆಳಗ್ಗೆ 11 ಗಂಟೆಗೆ ಬಜೆಟ್​ ಮಂಡಿಸಲು ಆರಂಭಿಸಿತು,(ಏಜೆನ್ಸೀಸ್).