ನವದೆಹಲಿ: ಇಂದು(ಫೆ. 01) ಮಂಡನೆಯಾದ 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ, ಬಜೆಟ್ನಲ್ಲಿ ಯಾವುದೇ ಆರ್ಥಿಕ ತಂತ್ರವಿಲ್ಲ ಮತ್ತು ಆರ್ಥಿಕ ರಾಜನೀತಿಯೂ ಇಲ್ಲ. ಆರ್ಥಿಕ ಸಮೀಕ್ಷೆಯಲ್ಲಿ ಹೆಸರಿಸಲಾದ ಯಾವುದೇ ಸಮಸ್ಯೆಗಳನ್ನು ಇದು ಪರಿಹರಿಸಲ್ಲ ಎಂದು ಕಿಡಕಾರಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಈ ಬಜೆಟ್ನ ಭಾಷಣ ಅಥವಾ ಬಜೆಟ್ ಸಂಖ್ಯೆಗಳು ಯಾವುದೇ ಆರ್ಥಿಕ ತಂತ್ರ ಅಥವಾ ಯಾವುದೇ ಆರ್ಥಿಕ ರಾಜನೀತಿಯನ್ನು ಹೊಂದಿಲ್ಲ. ಭಾರತ ಇಂದು ಜಗತ್ತಿನ ಮುಂದೆ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಯಾವುದೇ ಉಲ್ಲೇಖಿಸಿಲ್ಲ. ಚೀನಾದೊಂದಿಗೆ ಹೆಚ್ಚುತ್ತಿರುವ ವ್ಯಾಪಾರ ಕೊರತೆ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಸುಂಕಗಳಂತಹ ವಿಷಯಗಳ ಬಗ್ಗೆ ಚಕಾರವೆತ್ತಿಲ್ಲ ಎಂದಿದ್ದಾರೆ.
ಮುಖ್ಯ ಆರ್ಥಿಕ ಸಲಹೆಗಾರರು, ಆರ್ಥಿಕ ಸಮೀಕ್ಷೆಯಲ್ಲಿ ಹಲವು ಸವಾಲುಗಳನ್ನು ಉಲ್ಲೇಖಿಸಿದ್ದಾರೆ. ಹಣಕಾಸು ಸಚಿವರು ಆ ಸವಾಲುಗಳನ್ನು ಉಲ್ಲೇಖಿಸಬೇಕು ಮತ್ತು ಅವುಗಳ ಪರಿಹರಿಸುವ ಬಗ್ಗೆ ಉಲ್ಲೇಖಿಸಬೇಕಿತ್ತು. ಹಣಕಾಸು ಸಚಿವರು ಆರ್ಥಿಕ ಸಮೀಕ್ಷೆಯನ್ನು ಓದಿದೆಯೋ ಇಲ್ಲವೋ ನನಗೆ ಖಚಿತವಿಲ್ಲ. ಅವರು ಓದಿದ್ದರೆ, ಅವುಗಳನ್ನು ನಿರ್ಲಕ್ಷಿಸುತ್ತಿದ್ದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಯೋಜನೆಗಳು, ಕಾರ್ಯಕ್ರಮಗಳು, ಧ್ಯೇಯಗಳು, ಸಂಸ್ಥೆಗಳು, ಉಪಕ್ರಮಗಳು ಮತ್ತು ಎಲ್ಲವನ್ನೂ ಸೇರಿಸುವುದರಲ್ಲಿ ಸಚಿವರು ದಣಿದಿದ್ದಾರೆ. ಈ ಯೋಜನೆಗಳಲ್ಲಿ ಹಲವು ಮುಂದಿನ ವರ್ಷದ ವೇಳೆಗೆ ಮರೆತುಹೋಗುವ ಮತ್ತು ಕಣ್ಮರೆಯಾಗುವ ಸಾಧ್ಯತೆಯಿದೆ. ಮತ್ತು ಬಜೆಟ್ ಜನರಿಗೆ ಉದ್ಯೋಗಾವಕಾಶಗಳನ್ನು ಹೇಗೆ ಸೃಷ್ಟಿಸುತ್ತದೆ ಎಂದು ಅವರೇ ಹೇಳಬೇಕು ಎಂದು ಹೇಳಿದ್ದಾರೆ (ಏಜೆನ್ಸೀಸ್).