- ಫೆ.01ರಿಂದ ಎಲ್ಪಿಜಿಯಿಂದ ಫ್ಯಾಸ್ಟ್ಯಾಗ್ ದರಗಳಲ್ಲಿ ಬದಲಾವಣೆ
- ಕೇಂದ್ರ ಬಜೆಟ್ ಮಂಡನೆ ಬಳಿಕ ಈ ಬದಲಾವಣೆಗಳು ಜಾರಿ
- ಎಲ್‌ಪಿಜಿ, ಸಿಎನ್‌ಜಿ, ಎಟಿಎಫ್ ಬೆಲೆಗಳಲ್ಲಿ ಹೊಸ ದರ
- ಪಾನ್ ಮಸಾಲಾ, ತಂಬಾಕು ಉತ್ಪನ್ನಗಳ ಮೇಲೆ ಹೊಸ ತೆರಿಗೆ
ನವದೆಹಲಿ: ಇದೇ ಭಾನುವಾರ (ಫೆ.01) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ 2026-27ನೇ ಹಣಕಾಸು ವರ್ಷದ 9ನೇ ಕೇಂದ್ರ ಬಜೆಟ್ ಮೇಲೆ ಇಡೀ ದೇಶದ ಜನತೆಯ ಚಿತ್ತ ಮೂಡಿದೆ. ಮತ್ತೊಂದು ಹೊಸ ತಿಂಗಳ ಆಗಮನದ ಬೆನ್ನಲ್ಲೇ, ನಮ್ಮ ದೈನಂದಿನ ಜೀವನಕ್ಕೆ ಬೇಕಾದ ಅಗತ್ಯ ವಸ್ತುಗಳ ಬೆಲೆಗಳಲ್ಲಿನ ಬದಲಾವಣೆಗಳು ಸದ್ಯ ದೊಡ್ಡ ಹೊಡೆತ ನೀಡುವ ಸಾಧ್ಯತೆಗಳು ಹೆಚ್ಚಿವೆ. ಅಷ್ಟಕ್ಕೂ, ಯಾವುದರ ದರಗಳು ಬದಲು? ಏನೆಲ್ಲ ಪರಿಣಾಮ ಬೀರಲಿವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಕೇಂದ್ರ ಬಜೆಟ್ ಮಂಡನೆಯಾದ ಕೂಡಲೇ ಹಲವು ಪ್ರಮುಖ ವಸ್ತುಗಳ ಬೆಲೆ ಹಾಗೂ ಅದರ ನಿಯಮಗಳು ಬದಲಾಗಲಿವೆ. ಫಾಸ್ಟ್‌ಟ್ಯಾಗ್, ಬ್ಯಾಂಕಿಂಗ್, ಪರಿಶೀಲನಾ ವ್ಯವಸ್ಥೆಗಳಿಂದ ಹಿಡಿದು ಎಲ್‌ಪಿಜಿ ಗ್ಯಾಸ್, ತಂಬಾಕು ಬೆಲೆಗಳವರೆಗೆ, ಫೆಬ್ರವರಿ 1ರಿಂದ ಸಾಕಷ್ಟು ಬದಲಾವಣೆಗಳು ಸಂಭವಿಸಲಿವೆ. ಇದು ಮಧ್ಯಮ ವರ್ಗದ ಜನತೆಯ ಜೇಬಿಗೆ ಕತ್ತರಿ ಹಾಕುವುದು ಖಚಿತ ಎಂದೇ ಹೇಳಬಹುದು.
ಫೆಬ್ರವರಿ 1ರಿಂದ ಏನೆಲ್ಲ ಬದಲಾವಣೆ?
- ಎಲ್‌ಪಿಜಿ, ಸಿಎನ್‌ಜಿ, ಎಟಿಎಫ್ ಬೆಲೆಗಳಲ್ಲಿ ಬದಲಾವಣೆಗಳು
- ಫಾಸ್ಟ್‌ಟ್ಯಾಗ್ ಕೆವೈಸಿ ಪರಿಶೀಲನೆಯಲ್ಲಿ ಬದಲಾವಣೆಗಳು
- ಪಾನ್ ಮಸಾಲಾ, ಸಿಗರೇಟ್ ಸೇರಿ ತಂಬಾಕು ಉತ್ಪನ್ನಗಳ ಮೇಲಿನ ಹೊಸ ತೆರಿಗೆ ಜಾರಿ
ಫೆಬ್ರವರಿ 1ರ ಭಾನುವಾರದಂದು, ಕಂಪನಿಗಳು ದೇಶೀಯ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ಬದಲಾಯಿಸುತ್ತವೆ ಮತ್ತು ಹೊಸ ಬೆಲೆಗಳನ್ನು ಘೋಷಿಸುತ್ತವೆ. ಎಲ್‌ಪಿಜಿ ಸಿಲಿಂಡರ್‌ಗಳು ಹೆಚ್ಚು ದುಬಾರಿಯಾದರೆ, ಖಂಡಿತ ಇದು ಮಿಡಲ್ ಕ್ಲಾಸ್ ಜನರ ಜೇಬಿಗೆ ಕತ್ತರಿ ಹಾಕುವುದಂತು ಖಚಿತ. ಆದಾಗ್ಯೂ, ಬೆಲೆಗಳು ಕಡಿಮೆಯಾದರೆ, ಅದೇ ಸಿಲಿಂಡರ್ ಅಗ್ಗದ ಬೆಲೆಗೆ ಲಭ್ಯವಾಗುವುದರ ಜತೆಗೆ ನಿಮ್ಮ ಮೊಗದಲ್ಲಿ ಮಂದಹಾಸ ಮೂಡಿಸುವುದು ಖಚಿತ.
ಎಲ್‌ಪಿಜಿ ಸಿಲಿಂಡರ್ ಬೆಲೆಗಳ ಜತೆಗೆ, ಸಿಎನ್‌ಜಿ, ಪಿಎನ್ಜಿ ಮತ್ತು ವಿಮಾನ ಟರ್ಬೈನ್ ಇಂಧನ ಬೆಲೆಗಳು ಸಹ ಫೆ.1ರಂದು ಬದಲಾಗುವ ಸಾಧ್ಯತೆಯಿದೆ. ತೈಲ ಕಂಪನಿಗಳು ಈ ದಿನ ಹೊಸ ಬೆಲೆಗಳನ್ನು ಬಿಡುಗಡೆ ಮಾಡುತ್ತವೆ. ಎಟಿಎಫ್ ದರಗಳು ಹೆಚ್ಚಾದರೆ, ಅದು ವಿಮಾನ ದರಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಕಾರಣ, ವಿಮಾನಯಾನ ಸಂಸ್ಥೆಗಳು ಇಂಧನಕ್ಕಾಗಿ ಹೆಚ್ಚಿನ ಹಣವನ್ನು ಪಾವತಿಸುವ ಅನಿವಾರ್ಯತೆ ಎದುರಾದರೆ, ಟಿಕೆಟ್ ಬೆಲೆಗಳನ್ನು ಬೇರೆ ವಿಧಿಯಿಲ್ಲದೇ ಹೆಚ್ಚಿಸಬೇಕಾಗುತ್ತದೆ.
ಫಾಸ್ಟ್ಯಾಗ್ನಲ್ಲಿ ಏನು ಬದಲಾವಣೆ?
ಫೆ.01ರಿಂದ ಫಾಸ್ಟ್ಯಾಗ್ ಸಹ ಬದಲಾವಣೆಗಳಿಗೆ ಒಳಗಾಗುತ್ತಿವೆ. ನಿಮ್ಮ ಫಾಸ್ಟ್ಯಾಗ್ ಸಕ್ರಿಯವಾಗಿದ್ದರೆ, ನೀವು ಕೆವೈಸಿಯನ್ನು ಪೂರ್ಣಗೊಳಿಸುವ ಅಗತ್ಯವಿಲ್ಲ. ಇದರರ್ಥ ಈಗಾಗಲೇ ಫಾಸ್ಟ್ಯಾಗ್ ಹೊಂದಿದ ವಾಹನಗಳಿಗೆ ಇನ್ನು ಮುಂದೆ ನಿಯಮಿತ ಕೆವೈಸಿ ಪರಿಶೀಲನೆಗಳು ಅಗತ್ಯವಿರುವುದಿಲ್ಲ.
ಹೊಸ ವ್ಯವಸ್ಥೆಯ ಅಡಿಯಲ್ಲಿ, ಫಾಸ್ಟ್ಯಾಗ್ ಅನ್ನು ಸಕ್ರಿಯಗೊಳಿಸುವ ಮೊದಲು ಬ್ಯಾಂಕುಗಳು ಸಂಪೂರ್ಣ ವಾಹನ ಪರಿಶೀಲನೆಯನ್ನು ನಡೆಸುತ್ತವೆ. ವಾಹನದ ವಿವರಗಳನ್ನು ಮೊದಲು ಅಧಿಕೃತ ವಾಹನ ಡೇಟಾಬೇಸ್‌ನೊಂದಿಗೆ ಹೊಂದಿಸಲಾಗುತ್ತದೆ. ಮಾಹಿತಿ ಲಭ್ಯವಿಲ್ಲದಿದ್ದರೆ, ವಾಹನ ನೋಂದಣಿ ಪ್ರಮಾಣಪತ್ರವನ್ನು ಬಳಸಿಕೊಂಡು ಪರಿಶೀಲನೆಯನ್ನು ಮಾಡಲಾಗುತ್ತದೆ. ಆನ್‌ಲೈನ್‌ನಲ್ಲಿ ಖರೀದಿಸಿದ ಫಾಸ್ಟ್ಯಾಗ್ಳಿಗೂ ಇದೇ ಪ್ರಕ್ರಿಯೆಯು ಅನ್ವಯಿಸುತ್ತದೆ. ಬಳಕೆದಾರರು ಬಳಿಕ ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ಖಚಿತಪಡಿಸುತ್ತದೆ.
ಪಾನ್ ಮಸಾಲ, ತಂಬಾಕು ಮೇಲೆ ಹೊಸ ತೆರಿಗೆ ಜಾರಿ
ಫೆ. 01ರಿಂದ, ಪಾನ್ ಮಸಾಲ, ಸಿಗರೇಟ್ ಸೇರಿ ತಂಬಾಕು ಉತ್ಪನ್ನಗಳು ಹೊಸ ಜಿಎಸ್‌ಟಿ ದರಗಳ ಜೊತೆಗೆ ಮಾರುಕಟ್ಟೆ ಪ್ರವೇಶಿಸಲಿದೆ. ಅಲ್ಲಿಗೆ ಹೊಸ ಸೆಸ್ ಮತ್ತು ಅಬಕಾರಿ ಸುಂಕಕ್ಕೆ ಒಳಪಟ್ಟಿರುತ್ತವೆ ಎಂಬುದು ಸ್ಪಷ್ಟ. ಸರ್ಕಾರ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಎರಡು ಮಸೂದೆಗಳನ್ನು ಅಂಗೀಕರಿಸಿತ್ತು. ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳು ಹೆಚ್ಚುವರಿ ಅಬಕಾರಿ ಸುಂಕಕ್ಕೆ ಒಳಪಟ್ಟಿರುತ್ತವೆ ಎಂದು. ಆದಾಗ್ಯೂ, ಪಾನ್ ಮಸಾಲ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್‌ಗೆ ಸೇರಿದೆ. ಈ ತೆರಿಗೆ ಫೆಬ್ರವರಿ 1, 2026ರಿಂದ ಜಾರಿಗೆ ಬರಲಿದೆ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).