ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Union Budget 2026: ಸತತ 9ನೇ ಬಾರಿಗೆ 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ, ಆದಾಯ, ರೈಲ್ವೆ ಇಲಾಖೆಗಳಿಗೆ ಬಂಪರ್ ಕೊಡುಗೆಯನ್ನೇ ಘೋಷಿಸಿದರು. ಬಜೆಟ್ ಮುಕ್ತಾಯಗೊಳ್ಳುತ್ತಿದ್ದಂತೆ ಷೇರುಪೇಟೆಯಲ್ಲಿ ಭಾರೀ ಕುಸಿತ ಉಂಟಾಗಿದೆ.
1 ಗಂಟೆ 26 ನಿಮಿಷಗಳ ಕಾಲ ಬಜೆಟ್ ಭಾಷಣ ಮಾಡಿದ ನಿರ್ಮಲಾ ಸೀತಾರಾಮನ್, ಹಲವು ವಲಯಗಳಿಗೆ ಮಹತ್ವದ ಕೊಡುಗೆಗಳನ್ನು ಘೋಷಿಸಿದರು. ಈ ಬಜೆಟ್ ಮುಗಿಯುವ ಹಂತ ತಲುಪುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ-ಕಲ್ಲೋಲ ಉಂಟಾಗಿದ್ದು, ಸೆನ್ಸೆಕ್ಸ್ ಸೂಚ್ಯಂಕ ಡಿಪ್ ಆಗಿದ್ದು, ಶೇ.2ರಷ್ಟು ಕುಸಿತ ಕಂಡಿದೆ.
ಈ ಬಾರಿಯ ಬಜೆಟ್ನಿಂದ ಹೂಡಿಕೆದಾರರು ನಿರಾಶೆಗೊಂಡ ಹಿನ್ನೆಲೆ ಷೇರು ಮಾರುಕಟ್ಟೆ ಸೂಚ್ಯಂಕಗಳು 2,000 ಪಾಯಿಂಟ್‌ಗಳಿಗೂ ಹೆಚ್ಚು ಕುಸಿತ ಕಂಡಿದೆ. ನಷ್ಟದ ಹಾದಿಯಲ್ಲಿ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ತೀವ್ರ ಕುಸಿತವನ್ನು ನೋಡಿದೆ. ಶೇ. 6.50ರಷ್ಟು ಇಳಿಕೆಯಾಗಿದೆ. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಿಮಿಟೆಡ್ ಶೇ.3.38ರಷ್ಟು, ಎನ್‌ಟಿಪಿಸಿ ಲಿಮಿಟೆಡ್ ಶೇ.3.06ರಷ್ಟು, ಎಚ್‌ಸಿಎಲ್ ಟೆಕ್ನಾಲಜೀಸ್ ಲಿಮಿಟೆಡ್ ಶೇ.2.91ರಷ್ಟು ಮತ್ತು ಬಜಾಜ್ ಫೈನಾನ್ಸ್ ಲಿಮಿಟೆಡ್ ಶೇ.2.50ರಷ್ಟು ಕುಸಿತಗೊಂಡಿವೆ.