ಕಾಂಗ್ರೆಸ್ ಸಂಸದ ಶಶಿ ತರೂರ್ 
ದೇಶ

ಕೇಂದ್ರ ಬಜೆಟ್-2026; ಮಲಯಾಳಿಯಾಗಿ ಬಜೆಟ್​ ನನಗೆ ತೃಪ್ತಿ ತಂದಿಲ್ಲ; ಕಾಂಗ್ರೆಸ್ ಸಂಸದ ಶಶಿ ತರೂರ್ | Shashi Tharoor

ನವದೆಹಲಿ: ಇಂದು(ಫೆ. 01) ಮಂಡನೆಯಾದ 2026-27ನೇ ಸಾಲಿನ ಕೇಂದ್ರ ಬಜೆಟ್​ ಅನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ಮತ್ತು ಸಂಸದ ಶಶಿ ತರೂರ್, ಬಜೆಟ್​ನಲ್ಲಿ ಕೇರಳದ ಬಗ್ಗೆ ಯಾವುದೇ ಅಂಶ ಉಲ್ಲೇಖವಿಲ್ಲದಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಮಲಯಾಳಿಯಾಗಿ ನನಗೆ ಈ ಬಜೆಟ್​ ಬಗ್ಗೆ ತೃಪ್ತಿಯಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ನವದೆಹಲಿಯಲ್ಲಿ ಪಿಟಿಐ ಜೊತೆ ಮಾತನಾಡಿರುವ ಅವರು, ಆಯುರ್ವೇದ, ಮೀನುಗಾರರು, ತೆಂಗಿನ ತೋಟಗಳು ಮತ್ತು ಹಡಗು ದುರಸ್ತಿ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಉಲ್ಲೇಖವಿಲ್ಲ. ಕೇರಳಕ್ಕೆ ಆಯುರ್ವೇದದ ದೀರ್ಘ ಇತಿಹಾಸವಿದೆ ಮತ್ತು ನಾವೆಲ್ಲರೂ ಅಖಿಲ ಭಾರತ ಆಯುರ್ವೇದ ಸಂಸ್ಥೆಗಾಗಿ ಕಾಯುತ್ತಿದ್ದೆವು. ಆದರೆ ಬಜೆಟ್‌ನಲ್ಲಿ ಆ ಉಲ್ಲೇಖವೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಮೀನುಗಾರರು ಮತ್ತು ತೆಂಗಿನ ತೋಟಗಳ ಕುರಿತು ಕನಿಷ್ಠ ಘೋಷಣೆಯನ್ನು ನಾವು ನಿರೀಕ್ಷಿಸಿದ್ದೆವು, ಆದರೆ ಯಾವುದೂ ಇರಲಿಲ್ಲ. ಬಂದರು ದುರಸ್ತಿಯ ಪ್ರಸ್ತಾಪ ಬಂದಾಗ, ವಾರಣಾಸಿ ಮತ್ತು ಪಾಟ್ನಾ ಹೆಸರುಗಳನ್ನು ಉಲ್ಲೇಖಿಸಲಾಯಿತು, ಆದರೆ ಕೇರಳವನ್ನು ಉಲ್ಲೇಖಿಸಲಾಗಿಲ್ಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉದ್ಯೋಗ ಸೃಷ್ಟಿ ಮತ್ತೊಮ್ಮೆ ಉತ್ತರವಿಲ್ಲದ ಪ್ರಶ್ನೆಯಾಗಿಯೇ ಉಳಿದಿದೆ. ಬಜೆಟ್ ಭಾಷಣದಲ್ಲಿ ಅದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಇದು ಅತ್ಯಂತ ಚಿಕ್ಕ ಬಜೆಟ್ ಭಾಷಣವಾಗಿದೆ. ಮಧ್ಯಮ ಮತ್ತು ಕೆಳವರ್ಗದವರಿಗೆ ಸರ್ಕಾರ ಯಾವುದೇ ಪ್ರೋತ್ಸಾಹಕ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದಿದ್ದಾರೆ (ಏಜೆನ್ಸೀಸ್).