Manickam Tagore 
ದೇಶ

ವಿಜಯ್ ಸಿಎಂ ಆಗುವುದನ್ನು ತಪ್ಪಿಸಲು ಒಂದಾಯ್ತಾ ಡಿಎಂಕೆ-ಎಐಎಡಿಎಂಕೆ?: ರಹಸ್ಯ ಮಾತುಕತೆ ಬಯಲು ಮಾಡಿದ Manickam Tagore

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡು ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ಡಿಎಂಕೆ ಮತ್ತು ಕಾಂಗ್ರೆಸ್ ನಡುವೆ ಭಿನ್ನಾಭಿಪ್ರಾಯ
  • ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ವಿರುದ್ಧ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಕಿಡಿ
  • ಚುನಾವಣೆಯ ನಂತರ ಡಿಎಂಕೆ & ಎಐಎಡಿಎಂಕೆ ಜೊತೆ ರಹಸ್ಯ ಮಾತುಕತೆ ನಡೆಸಿತ್ತು ಎನ್ನುವ ಆರೋಪ
ಚೆನ್ನೈ: 'ಡಿಎಂಕೆ ಬೆನ್ನಿಗೆ ಇರಿದ ಕಾಂಗ್ರೆಸ್​ ಅವರನ್ನು ಇನ್ನೆಂದು ನಂಬಬಾರದು.10 ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್​ ನಮ್ಮ ನೆರವನ್ನು ಪಡೆದುಕೊಂಡಿತ್ತು. ಆದರೆ, ಇಂದು ನಮ್ಮ ಬೆನ್ನಿಗೆ ಚೂರಿ ಹಾಕಿದೆ. ಇದನ್ನು ಮರೆಯೋದು ಬೇಡ, ಭವಿಷ್ಯದಲ್ಲಿ ಯಾವ ಹಂತದಲ್ಲಿಯೂ ಕಾಂಗ್ರೆಸ್​ನ್ನು ನಂಬಬಾರದು' ಎಂದು ತಮಿಳುನಾಡು ವಿಧಾನಸಭೆ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಹೇಳಿದ್ದರು. ಆ ಬೆನ್ನಲ್ಲೇ  ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಂಸದ ಮಾಣಿಕಂ ಟ್ಯಾಗೋರ್ ಈಗ ಅತ್ಯಂತ ಕಟುವಾಗಿ ಮತ್ತು ಖಡಕ್ ಆಗಿ ಕೌಂಟರ್ ಕೊಟ್ಟಿದ್ದಾರೆ. 
ತಮಿಳುನಾಡು ವಿಧಾನಸಭೆ ಚುನಾವಣೆಯ ನಂತರ ಸರ್ಕಾರ ಕಟ್ಟಿಕೊಳ್ಳಲು ವಿಜಯ್​ ಅವರು ಹೆಣಗಾಡಿದ್ದರು. ಆ ಮಧ್ಯೆ ಕಾಂಗ್ರೆಸ್​ ಅವರಿಗೆ ಬೆಂಬಲ ನೀಡಿತ್ತು. ಆದರೆ ಇದು ಮೈತ್ರಿಕೂಟದಲ್ಲಿ ಬಿರುಕುಂಟಾಗುವಂತೆ ಮಾಡಿದೆ. ಇತ್ತೀಚೆಗೆ ಉದಯನಿಧಿ ಸ್ಟಾಲಿನ್ ಅವರು ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿಯನ್ನು ಟೀಕಿಸಿದ್ದರು. ಇದಕ್ಕೆ ಎಕ್ಸ್ ಮೂಲಕ ಮಾಣಿಕಂ ಟ್ಯಾಗೋರ್ ಅವರು ತಿರುಗೇಟು ನೀಡಿದ್ದಲ್ಲದೇ ಡಿಎಂಕೆ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. 

ಮಾಣಿಕಂ ಟ್ಯಾಗೋರ್ ಏನ್​ ಹೇಳಿದ್ರು?

 'ಡಿಎಂಕೆ ನಮ್ಮ ನಿಷ್ಠೆಯನ್ನು ಪ್ರಶ್ನಿಸುವ ಮುನ್ನ ನಿಮ್ಮ ನಿಲುವಿನ ಬಗ್ಗೆ ಸ್ಪಷ್ಟಪಡಿಸಿ. ಚುನಾವಣೆ ಪೂರ್ಣಗೊಳ್ಳುತ್ತಲೇ ಎಐಎಡಿಎಂಕೆ ಜೊತೆ ಹೊಂದಾಣಿಕೆಗೆ ಮಾತುಕತೆ ನಡೆಸುತ್ತಿರುವುದು ಯಾರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಲೋಕಸಭೆ ಮತ್ತು ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದ ಈ ಉಭಯ ಪಕ್ಷಗಳ ನಡುವಿನ ಇಂತಹ ಹೈ-ವೋಲ್ಟೇಜ್ ಜಗಳವು ಸದ್ಯ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಡಿಎಂಕೆ ಕೇವಲ ತನ್ನ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಅನ್ನು ಬಳಸಿಕೊಳ್ಳುತ್ತಿದೆ ಎಂಬ ಭಾವನೆ ತೀವ್ರವಾಗುತ್ತಿದ್ದು, ಈ ಮೈತ್ರಿಯ ಭವಿಷ್ಯ ಈಗ ತೂಗುಯ್ಯಾಲೆಯಲ್ಲಿದೆ' ಎಂದು ಮಾಣಿಕಂ ಟ್ಯಾಗೋರ್ ಕಿಡಿಕಾರಿದ್ದಾರೆ.
'ಜವಾಬ್ದಾರಿಯುತವಾಗಿ ಮಾತನಾಡಬೇಕಾದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬೇಜವಾಬ್ದಾರಿಯಿಂದ ಮಾತನಾಡಿರುವುದು ನಿಜಕ್ಕೂ ನಿರಾಶದಾಯಕವಾಗಿದೆ. ಅವರು ಸಚಿವರಾದಾಗ, ಡಿಸಿಎಂ ಆಗಿ ನೇಮಕಗೊಂಡಾಗ ಕಾಂಗ್ರೆಸ್​ ಅವರನ್ನು ತನ್ನ ಹೆಗಲ ಮೇಲೆ ಹೊತ್ತು ಮೆರೆಸಿದ್ದನ್ನು ಮರೆತಂತಿದೆ.  ಇದನ್ನು ಕೃತಘ್ನತೆ ಎನ್ನಲಾಗುತ್ತದೆ' ಎಂದು  ಮಾಣಿಕಂ ಟ್ಯಾಗೋರ್ ಗುಡುಗಿದರು.
'ರಾಜಕೀಯ ವಾಗ್ದಾಳಿಯನ್ನು ತೀವ್ರಗೊಳಿಸಿದ ಮಾಣಿಕಂ ಟ್ಯಾಗೋರ್, ಚುನಾವಣಾ ಫಲಿತಾಂಶಗಳ ನಂತರ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ತೆರೆಮರೆಯ ಮಾತುಕತೆಗಳು ನಡೆದಿವೆ ಎಂದು ಆರೋಪಿಸಿದರು. ನಟನಿಂದ ರಾಜಕಾರಣಿಯಾಗಿ ಬದಲಾಗಿರುವ ವಿಜಯ್ ಅವರು ಮುಖ್ಯಮಂತ್ರಿಯಾಗುವುದನ್ನು ತಡೆಯುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಸುಗಮಗೊಳಿಸಲು ಬಿಜೆಪಿ ಪ್ರಯತ್ನಿಸಿದೆ' ಎಂದು ಅವರು ದೂರಿದ್ದಾರೆ.

ವಿಜಯ್ ಸಿಎಂ ಆಗಬಾರದು ಎನ್ನುವುದು ಉದ್ದೇಶ

'ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಲೇ ರಚಿಸಲು ಬಿಜೆಪಿಯ ನಿಯಂತ್ರಣದೊಂದಿಗೆ ಎಐಎಡಿಎಂಕೆ ಮತ್ತು ಡಿಎಂಕೆ ನಡುವೆ ಮಾತುಕತೆಗಳು ನಡೆಯುತ್ತಿದ್ದವು. ವಿಜಯ್​ ಸಿಎಂ ಆಗಬಾರದು ಎನ್ನುವುದು ಒಂದೇ ಇದರ ಹಿಂದಿನ ಏಕೈಕ ಕಾರಣವಾಗಿತ್ತು. ಈ ಕಪಟ ಮಾತುಕತೆಗಳ ಬಗ್ಗೆ ತಿಳಿದ ನಂತರವೇ ತಮ್ಮ ಪಕ್ಷವು ಡಿಎಂಕೆಯಿಂದ ದೂರ ಉಳಿಯಿತು. ನಾವು ಈ ರಹಸ್ಯವನ್ನು ಆಗ ಬಹಿರಂಗಪಡಿಸಲಿಲ್ಲ, ಅದಕ್ಕಾಗಿಯೇ ನಾವು ಅಲ್ಲಿಗೆ ಹೋಗಲಿಲ್ಲ. ನಾವು 5 ನೇ ತಾರೀಖಿನಂದು ಏಕೆ ಹೋಗಲಿಲ್ಲ ಎಂದು ನೀವು ಕೇಳಿದರೆ, ಅದಕ್ಕೆ ಕಾರಣ ಅವರು 4 ನೇ ತಾರೀಖಿನಂದೇ ಮಾತುಕತೆಗಳನ್ನು ಆರಂಭಿಸಿದ್ದರು. ಹೀಗಾಗಿ ಈ ನಿರ್ಧಾರ ಕೈಗೊಂಡೆವು' ಎಂದರು.
'ತಮಿಳುನಾಡಿನಲ್ಲಿ ರಾಜಕೀಯ ಮರುಜೋಡಣೆಯನ್ನು ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಯಾವಾಗಲೂ ಜಾತ್ಯತೀತ ಮೈತ್ರಿಕೂಟದೊಂದಿಗೆ ನಿಂತಿದೆ. ಆದರೆ ಬಿಜೆಪಿ ಇಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಸಂಪರ್ಕದ ಕೊಂಡಿಯಾಗಿ ಕೆಲಸ ಮಾಡುತ್ತಿತ್ತು, ಇದು ನಮ್ಮ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಬಿಜೆಪಿಯೊಂದಿಗೆ ಯಾವುದೇ ರೀತಿಯ ಹೊಂದಾಣಿಕೆಯನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ' ಎಂದರು, (ಏಜೆನ್ಸೀಸ್).