ಅಂಡರ್-19 ವಿಶ್ವಕಪ್ ಫೈನಲ್; ವೈಭವ್ ರನ್ ಮಳೆ: 6ನೇ ಬಾರಿಗೆ ವಲ್ಡ್ಕಪ್ ಗೆದ್ದ ಟೀಂ ಇಂಡಿಯಾ
ಹರಾರೆ: 2026ರ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಯುವತಾರೆ ವೈಭವ್ ಸೂರ್ಯವಂಶಿ ಆರ್ಭಟದಿಂದ ಇಂಗ್ಲೆಂಡ್ ವಿರುದ್ಧ ಭಾರತ(India wins World Cup) 100 ರನ್ಗಳಿಂದ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 6ನೇ ಬಾರಿಗೆ ವಿಶ್ವಕಪ್ನ್ನು ಮುಡಿಗೇರಿಸಿಕೊಂಡಿದೆ.
ಜಿಂಬಾಬ್ವೆಯ ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಬ್ಲೂಬಾಯ್ಸ್ ಪರ ಸೂರ್ಯವಂಶಿ ಜತೆಗೆ ಆರಂಭಿಕನ್ನಾಗಿ ಕಣಕ್ಕಿಳಿದ ಅರುಣ್ ಜಾರ್ಜ್ ಕೇವಲ 9 ರನ್ಗಳಿಸಿ ನಿರಾಸೆ ಮೂಡಿಸಿದರು. ನಂತರ ಬಂದ ನಾಯಕ ಆಯುಷ್ ಮ್ಹಾತ್ರೆ ಹಾಗೂ ವೈಭವ್ ಸೇರಿ ಆಂಗ್ಲ ಬೌಲರ್ಗಳನ್ನು ಬಲವಾಗಿ ದಂಡಿಸಿದರು.
ವೈಭವ್ ಸೂರ್ಯವಂಶಿ ದಾಖಲೆ: ಕೇವಲ 14 ವರ್ಷದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ, ಕೇವಲ 80 ಎಸೆತಗಳಲ್ಲಿ 175 ರನ್ (15 ಬೌಂಡರಿ, 15 ಸಿಕ್ಸರ್) ಚಚ್ಚುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಇದು ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.
ನಾಯಕ ಆಯುಷ್ ಮ್ಹಾತ್ರೆ 53 ರನ್, ವೇದಾಂತ್ ತ್ರಿವೇದಿ 32 ರನ್, ಮತ್ತು ಕನಿಷ್ಕ್ ಚೌಹಾಣ್ 37 ರನ್ಗಳನ್ನು ಬಾರಿಸುವ ಮೂಲಕ ಭಾರತದ ಮೊತ್ತ 400ರ ಗಡಿ ದಾಟಲು ನೆರವಾದರು. ಇದರೊಂದಿಗೆ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 411 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದೆ. ಇದು ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಫೈನಲ್ ಪಂದ್ಯವೊಂದರಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ.
ಇಂಗ್ಲೆಂಡ್ ಬ್ಯಾಟಿಂಗ್
412 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ಗೆ ಭಾರತದ ವೇಗಿ ಅಂಬರೀಶ್ ಕೇವಲ 17 ರನ್‌ಗಳಿದ್ದಾಗ ಆರಂಭಿಕ ಆಟಗಾರ ಜೋಸೆಫ್ ಮೂರ್ಸ್ ಅನ್ನು ಔಟ್ ಮಾಡುವ ಮೂಲಕ ಮೊದಲ ಆಘಾತವನ್ನು ನೀಡಿದರು. ನಂತರ ಬಂದ ಬೆನ್ ಮೇಯಸ್ 45 ರನ್ಗಳಿಸಿ ಖಿಲಾನ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು. ಮಧ್ಯಮಾ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ನಾಯಕ ಥಾಮಸ್ ರೆವ್ 31 ರನ್ಗಳಿಗೆ ಕಾನಿಷ್ಕ್ ಚೌಹಾಣ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ಕ್ಯಾಲೆಬ್ ಏಕಾಂಗಿ ಹೋರಾಟ
ಒಂದೆಡೆ ವಿಕೆಟ್ ಬೀಳುತ್ತಿದ್ದರು ಕ್ಯಾಲೆಬ್ ಫಾಲ್ಕನರ್ ಶತಕ ಸಿಡಿಸಿದರು. ಏಕಾಂಗಿ ಹೋರಾಟ ನಡೆಸಿದ ಫಾಲ್ಕನರ್ 115 ರನ್ಗಳಿಸಿ ಹೊರ ನಡೆದರು. ಇದರೊಂದಿಗೆ ಟೀಂ ಇಂಡಿಯಾ ಆರನೇಯ ಬಾರಿಗೆ ವಲ್ಡ್ಕಪ್ ಗೆದ್ದಕೊಂಡಿದೆ.
ಭಾರತದ ಪರ ಬೌಲಿಂಗ್ನಲ್ಲಿ ಆರ್.ಎಸ್. ಅಂಬರೀಶ್ 3 ವಿಕೆಟ್, ದೀಪೇಶ್ ದೇವೇಂದ್ರನ್, ಕನಿಷ್ಕ್ ಚೌಹಾಣ್ ತಲಾ 2 ವಿಕೆಟ್ ಕಬಳಿಸಿದ್ದಾರೆ,(ಏಜೆನ್ಸೀಸ್).