ಆರನ್ ಜಾರ್ಜ್ ಶತಕದ ಅಬ್ಬರಕ್ಕೆ ಅಫ್ಘಾನ್ ಔಟ್: ಸತತ 6ನೇ ಬಾರಿಗೆ ಫೈನಲ್‌ಗೆ ಭಾರತ
ಹರಾರೆ: ಅಂಡರ್-19 ವಿಶ್ವಕಪ್(Under-19 World Cup) ಇತಿಹಾಸದಲ್ಲಿ ಭಾರತೀಯ ಕಿರಿಯರ ತಂಡದ ಅಧಿಪತ್ಯ ಮುಂದುವರಿದಿದೆ. ಬುಧವಾರ ನಡೆದ ಹೈ-ವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ನೀಡಿದ್ದ 311 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆಯುಷ್ ಮ್ಹಾತ್ರೆ ನೇತೃತ್ವದ ಟೀಮ್ ಇಂಡಿಯಾ, ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್ ಸೀಟ್ ಕಾಯ್ದಿರಿಸಿದೆ. ಈ ಮೂಲಕ ಭಾರತವು ಸತತ ಆರನೇ ಬಾರಿಗೆ ಅಂಡರ್-19 ವಿಶ್ವಕಪ್‌ನ ಫೈನಲ್ ತಲುಪಿದ ಅಪ್ರತಿಮ ದಾಖಲೆ ಬರೆದಿದೆ.
ಬೃಹತ್ ಗುರಿ ನೀಡಿದ್ದ ಅಫ್ಘಾನಿಸ್ತಾನ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ತಂಡವು ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 310 ರನ್ ಕಲೆಹಾಕಿತ್ತು. ಫೈಸಲ್ ಶಿನೋಜಾದಾ ಮತ್ತು ಉಜೈರುಲ್ಲಾ ನಿಯಾಜೈ ಅವರ ಅಮೋಘ ಅವಳಿ ಶತಕಗಳ ನೆರವಿನಿಂದ ಅಫ್ಘಾನ್ ತಂಡ ಭಾರತಕ್ಕೆ ಕಠಿಣ ಸವಾಲು ನೀಡಿತ್ತು. ಡೆತ್ ಓವರ್‌ಗಳಲ್ಲಿ ಅಫ್ಘಾನ್ ಬ್ಯಾಟರ್‌ಗಳು ನಡೆಸಿದ ಅಬ್ಬರದ ಆಟವು ಭಾರತಕ್ಕೆ ಅಪಾಯದ ಮುನ್ಸೂಚನೆ ನೀಡಿತ್ತು.
ಆರನ್ ಜಾರ್ಜ್ ಶೋ: ರನ್‌ಗಳ ಬೆನ್ನಟ್ಟಿದ ಭಾರತ
311 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ವೈಭವ್ ಸೂರ್ಯವಂಶಿ(68 ರನ್) ಮತ್ತು ನಾಯಕ ಆರನ್ ಜಾರ್ಜ್ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ, ಪಂದ್ಯದ ಅಸಲಿ ಹೀರೋ ಆಗಿ ಹೊರಹೊಮ್ಮಿದ್ದು ಆರನ್ ಜಾರ್ಜ್ 115 ರನ್ಗಳಿಸಿದರು. ಅಲ್ಲದೆ, ನಾಯಕ ಆಯುಷ್ ಮ್ಹಾತ್ರೆ 62ರನ್ ಬಾರಿಸಿದರು. ಇಡೀ ಟೂರ್ನಿಯಲ್ಲಿ ಅತ್ಯಂತ ಕ್ಲಾಸ್ ಮತ್ತು ಗುಣಮಟ್ಟದ ಆಟ ಪ್ರದರ್ಶಿಸಿದ ಜಾರ್ಜ್, ಆಕರ್ಷಕ ಶತಕ ಬಾರಿಸಿ ಅಫ್ಘಾನ್ ಬೌಲರ್‌ಗಳನ್ನು ಮಂಡಿಯೂರಿಸಿದರು. ಒತ್ತಡದ ಸಮಯದಲ್ಲಿ ಅದ್ಭುತ ನಿಯಂತ್ರಣದೊಂದಿಗೆ ಬ್ಯಾಟ್ ಬೀಸಿದ ಜಾರ್ಜ್, ಭಾರತದ ಗೆಲುವನ್ನು ಸುಲಭಗೊಳಿಸಿದರು.
ಅಜೇಯ ಓಟದೊಂದಿಗೆ ಫೈನಲ್‌ಗೆ
2026ರ ಈ ವಿಶ್ವಕಪ್ ಆವೃತ್ತಿಯಲ್ಲಿ ಭಾರತ ತಂಡವು ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿದೆ. ಗುಂಪು ಹಂತದಲ್ಲಿ ಯುಎಸ್ಎ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಮಣಿಸಿದ್ದ ಭಾರತ, ಸೂಪರ್ ಸಿಕ್ಸ್ ಹಂತದಲ್ಲಿ ಜಿಂಬಾಬ್ವೆ ಮತ್ತು ಪಾಕಿಸ್ತಾನಕ್ಕೆ ಧೂಳೀಪಟ ಮಾಡಿತ್ತು. 2016ರ ನಂತರ ಭಾರತವು ಅಂಡರ್-19 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗಿಂತ ಮೊದಲು ಎಂದೂ ಹೊರಬಿದ್ದಿಲ್ಲ. 2018 ಮತ್ತು 2022ರಲ್ಲಿ ಟ್ರೋಫಿ ಗೆದ್ದಿರುವ ಭಾರತ, ಈಗ ಮತ್ತೆ ಕಿರೀಟ ಮುಡಿಗೇರಿಸಿಕೊಳ್ಳಲು ಸನ್ನದ್ಧವಾಗಿದೆ,(ಏಜೆನ್ಸೀಸ್).