Swapna Barman | ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಸ್ವಪ್ನಾ ಬರ್ಮನ್
ಕೊಲ್ಕತ್ತಾ: ಪಶ್ಚಿಮ ಬಂಗಾಳದ ರಾಜ್‌ಗಂಜ್ ವಿಧಾನಸಭಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಹಾಗೂ ರೈಲ್ವೆ ಅಧಿಕಾರಿ ಸ್ವಪ್ನಾ ಬರ್ಮನ್ (Swapna Barman) ರಾಜಕೀಯ ಭವಿಷ್ಯ ಈಗ ನ್ಯಾಯಾಲಯದ ಅಂಗಳದಲ್ಲಿದ್ದು, ಸರ್ಕಾರಿ ಸೇವೆಗೆ ನಿಯಮಾನುಸಾರ ರಾಜೀನಾಮೆ ನೀಡದೆ ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸಿದ ಆರೋಪದ ಮೇಲೆ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿರುವುದರಿಂದ, ರೈಲ್ವೆ ಇಲಾಖೆಯು ಅವರ ರಾಜೀನಾಮೆಯನ್ನು ಅಂಗೀಕರಿಸಲು ನಿರಾಕರಿಸಿದೆ.
ಏನಿದು ಪ್ರಕರಣ..?
ಸ್ವಪ್ನಾ ಬರ್ಮನ್ ಫೆಬ್ರವರಿ 27 ರಂದು ರೈಲ್ವೆ ಕೆಲಸಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡದೆಯೇ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಪೂರ್ವಾನುಮತಿ ಅಥವಾ ರಾಜೀನಾಮೆ ನೀಡದೆ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಸೇವಾ ನಿಯಮಗಳ ಉಲ್ಲಂಘನೆಯೆಂದು ಪರಿಗಣಿಸಿ, ರೈಲ್ವೆ ಅಧಿಕಾರಿಗಳು ಮಾರ್ಚ್ 9 ರಂದು ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಿದರು. ಇದಾದ ಬಳಿಕ ಎಚ್ಚೆತ್ತ ಬರ್ಮನ್ ಮಾರ್ಚ್ 16 ರಂದು ರಾಜೀನಾಮೆ ಸಲ್ಲಿಸಿದರಾದರೂ, ಇಲಾಖಾ ತನಿಖೆ ಬಾಕಿ ಇರುವುದರಿಂದ ರೈಲ್ವೆ ಅದನ್ನು ಸ್ವೀಕರಿಸಲಿಲ್ಲ.
ಹೈಕೋರ್ಟ್ ಮೆಟ್ಟಿಲೇರಿದ ಬರ್ಮನ್
ತಮ್ಮ ರಾಜೀನಾಮೆ ಅಂಗೀಕರಿಸದ ರೈಲ್ವೆ ಕ್ರಮವನ್ನು ಪ್ರಶ್ನಿಸಿ ಸ್ವಪ್ನಾ ಬರ್ಮನ್ ಕಲ್ಕತ್ತಾ ಹೈಕೋರ್ಟ್‌ನ ಜಲ್ಪೈಗುರಿ ಸರ್ಕ್ಯೂಟ್ ಪೀಠದ ಮೊರೆ ಹೋಗಿದ್ದು, ಮಂಗಳವಾರ ನ್ಯಾಯಮೂರ್ತಿ ಗೌರಂಗ್ ಕಾಂತ್ ಮುಂದೆ ಈ ವಿಷಯ ವಿಚಾರಣೆಗೆ ಬಂದಿತು. ಈ ವೇಳೆ ರೈಲ್ವೆ ಪರ ವಕೀಲರು, ಬರ್ಮನ್ ವಿರುದ್ಧ ಇಲಾಖಾ ತನಿಖೆ ನಡೆಯುತ್ತಿರುವುದರಿಂದ ತಾಂತ್ರಿಕವಾಗಿ ರಾಜೀನಾಮೆ ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂಧಾನದ ಆಫರ್..
ವಿಚಾರಣೆ ವೇಳೆ ರೈಲ್ವೆ ಇಲಾಖೆಯು ಒಂದು ಪ್ರಮುಖ ಪ್ರಸ್ತಾಪವನ್ನು ನ್ಯಾಯಾಲಯದ ಮುಂದೆ ಇಟ್ಟಿದ್ದು, ಒಂದು ವೇಳೆ ಸ್ವಪ್ನಾ ಬರ್ಮನ್ ತಮ್ಮ ಮೇಲಿನ ಇಲಾಖಾ ಆರೋಪಗಳನ್ನು ಒಪ್ಪಿಕೊಂಡು, ನಿವೃತ್ತಿಯ ಬಳಿಕ ತಮಗೆ ಸಿಗಬೇಕಾದ ಯಾವುದೇ ಆರ್ಥಿಕ ಸೌಲಭ್ಯಗಳನ್ನು ಪಡೆಯದಿರಲು ಒಪ್ಪಿಕೊಂಡರೆ, ಅವರನ್ನು ಸೇವೆಯಿಂದ ಬಿಡುಗಡೆ ಮಾಡಲು ಇಲಾಖೆ ಸಿದ್ಧವಿದೆ ಎಂದು ತಿಳಿಸಿದೆ.
ಈ ಕುರಿತು ತಮ್ಮ ಅಂತಿಮ ನಿರ್ಧಾರವನ್ನು ಅಧಿಕಾರಿಗಳಿಗೆ ತಿಳಿಸಲು ನ್ಯಾಯಾಲಯ ಬರ್ಮನ್ ಅವರಿಗೆ ಸೂಚಿಸಿದ್ದು, ಆದರೆ, ಅವರು ಅಂತಹ ಒಪ್ಪಂದಕ್ಕೆ ಸಹಿ ಹಾಕಿದ್ದಾರೆಯೇ ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ ಎಂದು ಡೆಪ್ಯೂಟಿ ಸಾಲಿಸಿಟರ್ ಜನರಲ್ ಸುದೀಪ್ತಾ ಮಜುಂದಾರ್ ಹೇಳಿದ್ದಾರೆ. ಸ್ವಪ್ನಾ ಬರ್ಮನ್ ನ್ಯಾಯಾಲಯಕ್ಕೆ ಹಾಜರಿದ್ದರೂ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಾಧಕಿ ಈ ಸ್ವಪ್ನಾ ಬರ್ಮನ್
ಪಶ್ಚಿಮ ಬಂಗಾಳದ ಜಲ್ಪೈಗುರಿಯ ಸ್ವಪ್ನಾ ಬರ್ಮನ್, 2018ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಹೆಪ್ಟಾಥ್ಲೀಟ್. 12 ಕಾಲ್ಬೆರಳುಗಳ ದೈಹಿಕ ಸವಾಲು ಮತ್ತು ಬಡತನ ಮೆಟ್ಟಿ ನಿಂತ ಇವರು ಅರ್ಜುನ ಪ್ರಶಸ್ತಿ ಪುರಸ್ಕೃತರು(ಏಜೆನ್ಸೀಸ್).