BMC Poll | ಠಾಕ್ರೆ ಬ್ರದರ್ಸ್
ಮುಂಬೈ: ಇಂದು ( ಗುರುವಾರ ಜ.15) ನಡೆಯುತ್ತಿರುವ ಮಹಾರಾಷ್ಟ್ರದ ಪುರಸಭೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿದೆ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.
ಮತದಾನ ಮಾಡಿದವರ ಬೆರಳ ಮೇಲೆ ಮಾರ್ಕರ್ನಿಂದ ಬರೆಯುವ ಮೂಲಕ ಮೋದಿ ಸರ್ಕಾರದ ಒಂದು ರಾಷ್ಟ್ರ ಒಂದು ಚುನಾವಣೆ ಎಂಬ ಒತ್ತಾಯಪೂರ್ವಕ ಕ್ರಮವನ್ನು ಈ ಮೂಲಕ ಸಮರ್ಥಿಸುತ್ತವೆ ಎಂದು ಹೇಳಿದರು.
ಈ ತಂತ್ರವನ್ನು ಪ್ರಜಾಪ್ರಭುತ್ವದ ಕೊಲೆ ಎಂದು ಕರೆದ ಠಾಕ್ರೆ, ಮತದಾರರ ಬೆರಳುಗಳ ಮೇಲಿನ ಶಾಯಿಯನ್ನು ಪುನರಾವರ್ತಿತ ಮತದಾನಕ್ಕೆ ಅನುವು ಮಾಡಿಕೊಡಲು ಒರೆಸಲಾಗುತ್ತಿದೆ, ಸಂವಿಧಾನವು ಮತದಾನವನ್ನು ಉತ್ತೇಜಿಸುತ್ತದೆ, ಆದರೆ, ಚುನಾವಣಾ ಆಯೋಗವು ಸುಧಾರಣೆಗಳಿಲ್ಲದೆ ವರ್ಷಗಳ ಬಳಿಕವೂ ಮತದಾನದ ಪುರಾವೆಯನ್ನು ಕೇಳುತ್ತದೆ ಎಂದು ಹೇಳಿದರು.
ಚುನಾವಣೆಯಲ್ಲಿ ಈ ರೀತಿಯ ನಡೆ ಅನುಸರಿಸುವುದರಿಂದ ಇಡೀ ರಾಷ್ಟ್ರದಾದ್ಯಂತ ಒಂದೇ ಸಮಯದಲ್ಲಿ ವಂಚನೆ ಮತ್ತು ಅಕ್ರಮಗಳನ್ನು ಮಾಡಿ ಇಡೀ ದೇಶದ ಮೇಲೆ ಹಿಡಿತ ಸಾಧಿಸಬಹುದು ಎನ್ನುವುದು ಸರ್ಕಾರದ ಲೆಕ್ಕಾಚಾರ, ಮತದಾರರ ಪಟ್ಟಿಯಿಂದ ಕೆಲವು ಜನರ ಹೆಸರುಗಳು ಕಾಣೆಯಾಗಿವೆ ಎಂದು ಈಗಾಗಲೇ ಅನೇಕ ಕಡೆಗಳಿಂದ ದೂರುಗಳು ಬರುತ್ತಿವೆ, ಹಚ್ಚುತ್ತಿರುವ ಶಾಯಿಯನ್ನು ಈಗ ಸ್ವಚ್ಛಗೊಳಿಸಬಹುದು ಎಂದು ನಾವು ನೋಡುತ್ತಿದ್ದೇವೆ, ಚುನಾವಣಾ ಆಯೋಗ ಮತ್ತು ಆಯುಕ್ತರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ರಾಜ್ ಠಾಕ್ರೆ ಕಿಡಿ
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಚುನಾವಣಾ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದು, ಚುನಾವಣೆಗಳನ್ನು ಗೆಲ್ಲಲು ಸರ್ಕಾರ ವಂಚನೆಯ ದಾರಿ ಹಿಡಿದಿದೆ, ಈ ವ್ಯವಸ್ಥೆಯನ್ನು ಹೇಗೆ ಜಾರಿಗೆ ತರುತ್ತಿದೆ ಎಂಬುದನ್ನು ನಾನು ಎಲ್ಲರ ಗಮನಕ್ಕೆ ತರಲು ಬಯಸುತ್ತೇನೆ. ಆಡಳಿತ ನಡೆಸುತ್ತಿರುವವರು ಯಾವುದೇ ಬೆಲೆ ತೆತ್ತಾದರೂ ಸರಿ ಚುನಾವಣೆಗಳನ್ನು ಗೆಲ್ಲಲು ಬಯಸುತ್ತಾರೆ, ಅದಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ ಎಂದು ಹೇಳಿದರು.
ವಿಷಯ ಬಹಿರಂಗವಾಗಿದ್ದೇಗೆ..?
ಈ ವಿಷಯವನ್ನು ಮೊದಲು ಕಲ್ಯಾಣ್ ಕ್ಷೇತ್ರದ ಮಹಾರಾಷ್ಟ್ರ ನವನಿರ್ಮಾಣ ಸೇನಾ ಅಭ್ಯರ್ಥಿ ಊರ್ಮಿಳಾ ತಾಂಬೆ ಪ್ರಸ್ತಾಪಿಸಿದ್ದು, ರಾಜ್ಯ ಚುನಾವಣಾ ಆಯೋಗವು ಆಡಳಿತ ಪಕ್ಷಕ್ಕೆ ಸಹಾಯವಾಗುವಂತೆ ಅಳಿಸಲಾಗದ ಶಾಯಿಯ ಬದಲಿಗೆ ಮಾರ್ಕರ್ ಪೆನ್ನುಗಳನ್ನು ಉದ್ದೇಶಪೂರ್ವಕವಾಗಿ ಬಳಸುತ್ತಿದೆ ಎಂದು ಆರೋಪಿಸಿದರು. ಈ ಸುದ್ದಿ ಬಹಿರಂಗಗೊಂಡ ಬೆನ್ನಲ್ಲೇ ಮುಂಬೈ ತಕ್‌ನ ಪತ್ರಕರ್ತರು ಸತ್ಯಶೋಧನೆ ನಡೆಸಿ, ಅಸಿಟೋನ್ ಹಚ್ಚಿದ ಬಳಿಕ ಬೆರಳಿನ ಮೇಲಿನ ಗುರುತು ಮಾಯವಾಗಿದೆ ಎಂದು ತೋರಿಸಿದರು.
ಚುನಾವಣಾ ಆಯೋಗ ಹೇಳಿದ್ದೇನು..?
ಈ ಎಲ್ಲಾ ಆರೋಪಗಳಿಗೆ ರಾಜ್ಯ ಚುನಾವಣಾ ಆಯೋಗವು ಸ್ಪಷ್ಟನೆ ನೀಡಿದ್ದು, ಮತದಾರನು ಶಾಯಿಯನ್ನು ಒರೆಸುವ ಮೂಲಕ ಮತ್ತೆ ಮತ ಚಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಮತದಾರರ ಬೆರಳಿನಿಂದ ಶಾಯಿಯನ್ನು ಅಳಿಸಲು ಪ್ರಯತ್ನಿಸುವ ಮೂಲಕ ಗೊಂದಲ ಸೃಷ್ಟಿಸುವುದು ತಪ್ಪು ಕೃತ್ಯ ಎಂದು ಆಯೋಗ ಹೇಳಿದೆ.
ಮಾರ್ಕರ್ ಪೆನ್ನುಗಳು 2011 ರಿಂದ ಬಳಕೆಯಲ್ಲಿವೆ ಎಂದು ಆಯೋಗ ತಿಳಿಸಿದ್ದು, ಮತದಾರನು ಶಾಯಿಯನ್ನು ಒರೆಸಿ ಮತ ಚಲಾಯಿಸುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಠಾಕ್ರೆಯವರ ಆರೋಪಗಳನ್ನು ತಿರಸ್ಕರಿಸಿದರು(ಏಜೆನ್ಸೀಸ್).