Thackeray Brothers | ಠಾಕ್ರೆ ಸಹೋದರರು
ಮುಂಬೈ: ಸೋದರಸಂಬಂಧಿ ಉದ್ಧವ್ ಠಾಕ್ರೆ ಜೊತೆಗಿನ ಸುಮಾರು ಎರಡು ದಶಕಗಳ ಭಿನ್ನಾಭಿಪ್ರಾಯಕ್ಕೆ ಇತಿಶ್ರೀ ಹಾಡಿರುವ ರಾಜ್ ಠಾಕ್ರೆ, ಜನವರಿ 15 ರಂದು ನಡೆಯಲಿರುವ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವುದಾಗಿ ಬುಧವಾರ (ಡಿ.24) ಘೋಷಿಸಿದ್ದಾರೆ.
ತಮ್ಮ ಪಕ್ಷಗಳ ನಡುವೆ ಔಪಚಾರಿಕ ಸೀಟು ಹಂಚಿಕೆಯನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಇಬ್ಬರು ನಾಯಕರು ತಿಳಿಸಿದ್ದಾರೆ.
ಸಹೋದರರಿಬ್ಬರು ತಮ್ಮ ಕುಟುಂಬಗಳೊಂದಿಗೆ ವೇದಿಕೆಯತ್ತ ಹೆಜ್ಜೆ ಹಾಕುತ್ತಿದ್ದಂತೆ, ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಆ ಕ್ಷಣವನ್ನು ಶುಭಾರಂಭ ಎಂದು ಬಣ್ಣಿಸಿದರು. ಬಿಎಂಸಿ ಮತ್ತು ಇತರ ಪುರಸಭೆಗಳ ಮೇಲೆ ಮೈತ್ರಿಕೂಟದ ಧ್ವಜ ಹಾರಾಡುವುದನ್ನು ಎದುರು ನೋಡುತ್ತಿರುವ ಸನ್ನಿವೇಶವನ್ನು ಸಕಾರಾತ್ಮಕ ಆರಂಭ ಎಂದಿರುವ ರಾವತ್, ಇದನ್ನು ಠಾಕ್ರೆ ಸಹೋದರರಿಂದ ಮಾತ್ರ ಮಾಡಲು ಸಾಧ್ಯ ಎಂದು ಹೇಳಿದರು.
ಕೈ ಜೋಡಿಸಿದ ಠಾಕ್ರೆ ಬ್ರದರ್ಸ್...
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉದ್ಧವ್, ನಾವಿಬ್ಬರು ಶಾಶ್ವತವಾಗಿ ಒಗ್ಗಟ್ಟಿನಿಂದ ಇರಲು ಒಗ್ಗೂಡಿದ್ದು, ಮರಾಠಿ ಜನರ ಅಭಿವೃದ್ದಿಗಾಗಿ ಇದು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಮಹಾರಾಷ್ಟ್ರಕ್ಕಾಗಿ ಹೋರಾಟ ನಡೆಸಿದ ತಮ್ಮ ಅಜ್ಜ ಪ್ರಬೋಧಂಕರ್ ಠಾಕ್ರೆ ಪರಂಪರೆಯನ್ನು ನೆನಪಿಸಿಕೊಂಡ ಉದ್ಧವ್, ಮುಂಬೈ ರಾಜ್ಯದ ಭಾಗವಾದ ಬಳಿಕ, ಬಾಳಾಸಾಹೇಬ್ ಠಾಕ್ರೆ ಶಿವಸೇನೆಯನ್ನು ಸ್ಥಾಪಿಸಿದರು ಎಂದು ಹೇಳಿದರು.
ಕೆಲವು ಶಕ್ತಿಗಳು ಮುಂಬೈಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದು, ಮುಂಬೈಯನ್ನು ಮರಾಠಿ ಜನರಿಂದ ಕಿತ್ತುಕೊಳ್ಳಲು ಯಾವುತ್ತಿಗೂ ಸಾಧ್ಯವಿಲ್ಲ ಎಂದರು. ಬಿಜೆಪಿಯ ಬಟೇಂಗೆ ತೋ ಕಟೇಂಗೆ ಘೋಷಣೆಯನ್ನು ಉಲ್ಲೇಖಿಸಿದ ಉದ್ಧವ್ ಠಾಕ್ರೆ, ನಾವೆಲ್ಲಾ ಒಗ್ಗಟ್ಟಿನಿಂದ ಇರಬೇಕೆಂದು ಕರೆ ನೀಡಿದರು, ಈಗ ನಾವು ಎಡವಿದರೆ ಅದು ವಿಭಜನೆಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ ವಿರುದ್ಧ ರಾಜ್ ಠಾಕ್ರೆ ಟೀಕಾ ಪ್ರಹಾರ
ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದರು. ಮಹಾರಾಷ್ಟ್ರ ಎನ್ನುವುದು ಎಲ್ಲಕ್ಕಿಂತ ದೊಡ್ಡದಾಗಿದ್ದು, ಆಂತರಿಕ ಸಂಘರ್ಷಗಳಿಂದ ರಾಜ್ಯ ಹಿಂದುಳಿಯಬಾರದು ಎಂದರು. ಮಕ್ಕಳ ಅಪಹರಣದಲ್ಲಿ ತೊಡಗಿರುವ ಗ್ಯಾಂಗ್‌ಗಳು ರಾಜ್ಯದಲ್ಲಿ ಮುಕ್ತವಾಗಿ ಸುತ್ತಾಡುತ್ತಿದ್ದರೆ, ಅಂತಹ ಗುಂಪುಗಳನ್ನು ಎರಡು ಪಕ್ಷಗಳು ಮುನ್ನಡೆಸುತ್ತಿವೆ ಎಂದು ಆರೋಪಿಸಿದರು. ರಾಜ್ಯವು ಬಹಳ ಸಮಯದಿಂದ ಈ ಕ್ಷಣಕ್ಕಾಗಿ ಕಾಯುತ್ತಿತ್ತು ಎಂದಿರುವ ರಾಜ್, ಶಿವಸೇನೆ ಯುಬಿಟಿ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ನಡುವಿನ ಮೈತ್ರಿ ಈಗ ರಚನೆಯಾಗಿದೆ ಎಂದು ಘೋಷಿಸಿದರು(ಏಜೆನ್ಸೀಸ್).