BMC Elections | ಮಹಾವಿಕಾಸ್​ ಅಘಾಡಿ ನಾಯಕರು 
ದೇಶ

BMC Elections | ಮಹಾವಿಕಾಸ್​ ಅಘಾಡಿಯಲ್ಲಿ ಒಡಕು..ಸ್ವತಂತ್ರ ಸ್ಪರ್ಧೆಗೆ ಕಾಂಗ್ರೆಸ್​ ನಿರ್ಧಾರ, ಉದ್ಧವ್​ ಬಣದಿಂದ ಪ್ಲ್ಯಾನ್​ ಬಿ ಸಿದ್ಧ

ಮುಂಬೈ: ಮುಂಬರುವ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಪಕ್ಷಗಳು ತಯಾರಿ ನಡೆಸುತ್ತಿರುವ ಬೆನ್ನಲ್ಲೆ, ಮುಂಬೈನಲ್ಲಿ ರಾಜಕೀಯ ತಂತ್ರ- ಪ್ರತಿತಂತ್ರಗಳು ತೀವ್ರಗೊಂಡಿದ್ದು, ಮಹಾ ವಿಕಾಸ್ ಅಘಾಡಿಯಲ್ಲಿ ಅಸಮಧಾನದ ಹೊಗೆ ಇಡೀ ಮೈತ್ರಿಕೂಟವನ್ನೇ ಸುತ್ತುವರೆಯುವ ಸಾಧ್ಯತೆ ಇದೆ.
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಎಂದು ಸಾರ್ವಜನಿಕವಾಗಿ ಘೋಷಿಸಿತ್ತು, ಇತ್ತ ಉದ್ಧವ್ ಠಾಕ್ರೆಯ ಶಿವಸೇನೆ, ಕಾಂಗ್ರೆಸ್ ಮೈತ್ರಿಕೂಟದಿಂದಲೇ ಚುನಾವಣಾ ಕಣಕ್ಕೆ ಧುಮುಕಲಿ ಎಂದು ಹೈಕಮಾಂಡ್ ಮನವೊಲಿಕೆಗೆ ಪ್ರಯತ್ನಿಸುತ್ತಿದೆ.

ರಾಜ್ ಠಾಕ್ರೆ ಪ್ರವೇಶಕ್ಕೆ ಕಾಂಗ್ರೆಸ್ ವಿರೋಧ.....

ರಾಜ್ ಠಾಕ್ರೆ ಅವರನ್ನೊಳಗೊಂಡ ಯಾವುದೇ ಮೈತ್ರಿಕೂಟಕ್ಕೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುವುದಿಲ್ಲ ಎಂದು ಉದ್ಧವ್ ಠಾಕ್ರೆಗೆ ಕಾಂಗ್ರೆಸ್ ಸ್ಪಷ್ಟಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮಹಾವಿಕಾಸ್​ನ ಒಕ್ಕೂಟದ ಭಾಗವಾಗುವುದಾದರೆ ನಾವು ಮೈತ್ರಿಕೂಟದಿಂದ ಹೊರನಡೆಯುತ್ತೇವೆ ಎಂದು ಪಕ್ಷ ಎಚ್ಚರಿಸಿದೆ ಎಂದು ವರದಿಯಾಗಿದೆ.
  • ಬಿಜೆಪಿ ನೇತೃತ್ವದ ಮಹಾಯುತಿ ವಿರುದ್ಧ ಪ್ರತ್ಯೇಕವಾಗಿ ಸ್ಪರ್ಧಿಸುವುದರಿಂದ ಕಾಂಗ್ರೆಸ್ ಮತ್ತು ಶಿವಸೇನೆ ಎರಡಕ್ಕು ನಷ್ಟ.
  • ಮುಂಬೈನಲ್ಲಿ ಆಡಳಿತ ಪಕ್ಷದ ಮೈತ್ರಿಕೂಟವನ್ನು ಎದುರಿಸಲು ಸಂಘಟಿತ ವಿರೋಧಪಕ್ಷದ ಅವಶ್ಯಕತೆ ಇದೆ.

ಒಗ್ಗಟ್ಟಿನಲ್ಲಿ ಬಲವಿದೆ ಎಂದ ಶರದ್ ಪವಾರ್

ಶರದ್ ಪವಾರ್​ರ ಎನ್​ಸಿಪಿ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಬಿಎಂಸಿ ಚುನಾವಣೆಯಲ್ಲಿ ಎದುರಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದೆ, ಉದ್ಧವ್ ಠಾಕ್ರೆ ಅವರ ಶಿವಸೇನೆ ಸೇರಿದಂತೆ ಸಂಪೂರ್ಣ ಎಂವಿಎ ಸೂತ್ರದಡಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಶರದ್​ ಪವಾರ್ ಒಲವು ಹೊಂದಿದ್ದಾರೆ.
ಒಗ್ಗಟ್ಟನ್ನು ಮುಂದುವರೆಸುವ ಪ್ರಯತ್ನದ ಫಲವಾಗಿ ಎನ್​ಸಿಪಿಯ ಹಿರಿಯ ನಾಯಕ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರನ್ನು ವೈಯಕ್ತಿಕವಾಗಿ ಸಂಪರ್ಕಿಸಿದ್ದಾರೆ ಎನ್ನಲಾಗಿದ್ದು, ಮುಂದಿನ ವಾರ ನಡೆಯಲಿರುವ ಕಾಂಗ್ರೆಸ್-ಎನ್‌ಸಿಪಿ (ಎಸ್‌ಪಿ) ಜಂಟಿ ಸಭೆಯು ಮೈತ್ರಿಕೂಟದ ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆ ಇದೆ.

ಉದ್ಧವ್ ಪ್ಲ್ಯಾನ್​ ಬಿ..

ಒಂದು ವೇಳೆ ಕಾಂಗ್ರೆಸ್ ರಾಜ್ ಠಾಕ್ರೆರನ್ನು ಸೇರ್ಪಡೆ ಮಾಡಿಕೊಳ್ಳಲು ಮಹಾ ವಿಕಾಸ್​ ಅಘಾಡಿಯ ನಾಯಕರು ನಿರಾಕರಿಸಿದರೆ, ಮಾಜಿ ಸಿಎಂ ಉದ್ಧವ್ ಠಾಕ್ರೆ ಪ್ಲಾನ್ ಬಿ ಸಿದ್ಧಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪರ್ಯಾಯ ರಂಗವು ಉದ್ಧವ್-ರಾಜ್-ಪವಾರ್ ಮೈತ್ರಿಕೂಟವಾಗಿದ್ದು, ಠಾಕ್ರೆ ಸೋದರರು, ಎನ್​ಸಿಪಿಯ ಶರದ್ ಪವಾರ್ ಬೆಂಬಲದೊಂದಿಗೆ ಚುನಾವಣೆಯಲ್ಲಿ ಆಡಳಿತರೂಢ ಮಹಾಯುತಿ ಸರ್ಕಾರವನ್ನು ಎದುರಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಏಕಾಂಗಿಯಾಗಿ ಸ್ಪರ್ಧಿಸಲು ಸಮಾಜವಾದಿ ಪಕ್ಷ ನಿರ್ಧಾರ

ವಿರೋಧ ಪಕ್ಷದ ಒಟಕ್ಕೆ ತಡೆಯೊಡ್ಡಲು ಮತ್ತೊಂದು ಪಕ್ಷ ಸಿದ್ಧವಾದಂತಿದ್ದು, ಸಮಾಜವಾದಿ ಪಕ್ಷದ ನಾಯಕ ಅಬು ಅಸಿಮ್ ಅಜ್ಮಿ, ಎಸ್‌ಪಿ ಬಿಎಂಸಿ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷ ಕೊನೆಯ ಕ್ಷಣದ ದ್ರೋಹ, ಅಸಮಂಜಸ ನಿರ್ಧಾರ ತೆಗೆದುಕೊಳ್ಳುವುದು, ಅದರ ದುರಹಂಕಾರ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ನಿರ್ಲಕ್ಷಿಸಿದೆ ಎಂದು ಅಜ್ಮಿ ಆರೋಪಿಸಿದ್ದಾರೆ.
227 ಬಿಎಂಸಿ ಸ್ಥಾನಗಳ ಪೈಕಿ, ಸುಮಾರು 150 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎಸ್‌ಪಿ ಯೋಚನೆ ನಡೆಸಿದ್ದು, ಕಾಂಗ್ರೆಸ್ ಸೇರಿದಂತೆ ಮಹಾವಿಕಾಸ್​ ಅಘಾಡಿಯೊಂದಿಗಿನ ಮೈತ್ರಿಯನ್ನು ತಳ್ಳಿಹಾಕಿ, ಕೋಮು ಸಾಮರಸ್ಯದ ಬಗೆಗಿನ ತನ್ನ ಬದ್ಧತೆಯನ್ನು ಒತ್ತಿಹೇಳಿದೆ.

ಮಹಾಯುತಿ ಒಗ್ಗಟ್ಟು...

ವಿರೋಧ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳ ನಡುವೆಯೇ, ಬಿಜೆಪಿ, ಶಿವಸೇನೆ (ಶಿಂಧೆ ಬಣ) ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ಗಳನ್ನು ಒಳಗೊಂಡ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು ಬಿಎಂಸಿ ಚುನಾವಣೆಗಳನ್ನು ಒಗ್ಗಟ್ಟಿನಿಂದ ಸ್ಪರ್ಧಿಸುವ ನಿರ್ಧಾರವನ್ನು ದೃಢಪಡಿಸಿದೆ.
ಇದೇ ವಿಷಯವಾಗಿ ಮಾತನಾಡಿರುವ ಮಹಾರಾಷ್ಟ್ರ ಸಚಿವ ಚಂದ್ರಶೇಖರ್ ಬವಾಂಕುಲೆ, ಮೈತ್ರಿಕೂಟವು ಮೂರನೇ ಎರಡರಷ್ಟು ಬಹುಮತ ಮತ್ತು 51% ಮತಗಳನ್ನು ಪಡೆಯುವ ಗುರಿಯನ್ನು ಹೊಂದಿದೆ ಎಂದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾನ ಡಿಸೆಂಬರ್ 2 ರಂದು ನಡೆಯಲಿದ್ದು, 3 ರಂದು ಮತ ಎಣಿಕೆ ನಡೆಯಲಿದೆ(ಏಜೆನ್ಸೀಸ್​).