ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ  
ದೇಶ

ಅಸ್ಸಾಂ ವಿಧಾನಸಭೆಯಲ್ಲಿ ಯುಸಿಸಿ ಬಿಲ್ ಮಂಡನೆ: ಮಸೂದೆ ಮುಸ್ಲಿಂ ಮಹಿಳೆಯರಿಗೆ ಹೊಸ ಜೀವನ ನೀಡಲಿದೆ: ಸಿಎಂ ಶರ್ಮಾ | UCC Bill

ಗುವಾಹಟಿ: ಅಸ್ಸಾಂ ವಿಧಾನಸಭೆಯ ಚುನಾವಣೆಯಲ್ಲಿ ಮೂರನೇ ಭಾರಿಗೆ ಐತಿಹಾಸಿಕ ಗೆಲುವಿನ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಚುನಾವಣೆ ಮುನ್ನ ಭರವಸೆ ನೀಡಿದಂತೆ ಇಂದು(ಮೇ 26) ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ(UCC Bill) ಮಸೂದೆಯನ್ನು ಮಂಡಿಸಿದೆ.
ವಿಧಾನಸಭಾ ಅಧಿವೇಶನದಲ್ಲಿ ಮಸೂದೆ ಮಂಡಿಸಿ ಮಾತನಾಡಿರುವ ಸಿಎಂ ಹಿಮಂತ ಬಿಸ್ವಾ ಶರ್ಮಾ, ನಾವು ಯುಸಿಸಿ ಮಸೂದೆಯನ್ನು ಪರಿಚಯಿಸಿದ್ದೇವೆ. ಇದು ದಶಕಗಳಿಂದ ತುಳಿತಕ್ಕೊಳಗಾದ ಅಲ್ಪಸಂಖ್ಯಾತ ಮಹಿಳೆಯರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ. 
ನಾವು ಅಧಿಕಾರಕ್ಕೆ ಮರಳಿದರೆ ಯುಸಿಸಿಯನ್ನು ಜಾರಿಗೆ ತರುತ್ತೇವೆ ಎಂದು ಜನಕ್ಕೆ ಭರವಸೆ ನೀಡಿದ್ದೇವು. ಸಾಧ್ಯವಾದರೆ ನಮ್ಮನ್ನು ತಡೆಯುವಂತೆ  ಪ್ರತಿಪಕ್ಷಗಳಿಗೂ ಹೇಳಿದ್ದೆ. ಆದರೆ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ನೀಡಿದ ಭರವಸೆ ಈಡೇರಿಸಲು ಬದ್ಧರಾಗಿದ್ದೇವೆ. ಮೊದಲ ಭಾಗವಾಗಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದೇವೆ ಎಂದು ಪ್ರತಿಪಾದಿಸಿದ್ದಾರೆ.
ಉತ್ತರಾಖಂಡ ಮತ್ತು ಗುಜರಾತ್ ಬಳಿಕ ಯುಸಿಸಿಯನ್ನು ತಂದ ಮೂರನೇ ರಾಜ್ಯ ನಮ್ಮ ಅಸ್ಸಾಂ ಆಗಲಿದೆ. ನನಗೆ ಹೆಮ್ಮೆ ಅನಿಸುತ್ತದೆ. ಇನ್ಮುಂದೆ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರು ಸುರಕ್ಷಿತ ಮತ್ತು ಸ್ವತಂತ್ರ ಜೀವನವನ್ನು ನಡೆಸುತ್ತಾರೆ ಎಂದಿದ್ದಾರೆ.
ಅಸ್ಸಾಂನಲ್ಲಿ ಗೋಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ಬಳಿಕ ಈದ್ ಸಮಯದಲ್ಲಿ ಗೋಹತ್ಯೆ ನಿಂತಿದೆ. ಇದರಿಂದಾಗಿ ರಾಜ್ಯದಲ್ಲಿ ಶಾಂತಿ ನೆಲೆಸಿದೆ. ಐದು ವರ್ಷಗಳ ಹಿಂದೆ ನಾವು ಕಾಯ್ದೆ ಪರಿಚಯಿಸಿದಾಗ ನಿರ್ದಿಷ್ಟ ಸಮುದಾಯದ ವಿರುದ್ಧ ಬಲವಾದ ಕಾನೂನುಗಳನ್ನು ಜಾರಿಗೆ ತಂದಿದ್ದಕ್ಕಾಗಿ ವಿಧಾನಸಭೆಯಲ್ಲಿ ಮತ್ತು ಹೊರಗೆ ಕೆಲವರು ನಮ್ಮನ್ನು ಟೀಕಿಸಿದ್ದರು. ಇಂದು ನಮ್ಮ ಕಳಕಳಿಯನ್ನು ಕೆಲವು ಮುಸ್ಲಿಂ ಸಂಘಟನೆಗಳು ಹಿಂದೂ ಸಮುದಾಯದ ಭಾವನೆಗಳನ್ನು ಗೌರವಿಸಿ ಈದ್ ಸಮಯದಲ್ಲಿ ಗೋವುಗಳನ್ನು ಬಲಿ ನೀಡಲ್ಲ ಎಂಬ ನಿರ್ಧಾರಕ್ಕೆ ಬಂದಿವೆ. ಅವರಿಗೆ ನನ್ನ ಧನ್ಯವಾದ ಎಂದು ಹೇಳಿದ್ದಾರೆ (ಏಜೆನ್ಸೀಸ್).