ಇಂದಿನ ಕಾಲಘಟ್ಟದಲ್ಲಿ ರಾಜಕೀಯ ರಂಗದ ಪ್ರವೇಶ ಮತ್ತು ರಾಜನೀತಿಯಲ್ಲಿ ಆಯಕಟ್ಟಿನ ಸ್ಥಾನ ಪಡೆಯುವುದೆಂದರೆ ಭಾರಿ ಕಸರತ್ತಿನ ಸಂಗತಿಯೇ. ಈ ಬಾರಿಯ ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮನೆಕೆಲಸದ ಹೆಣ್ಣುಮಗಳು, ಕಾರ್ ಚಾಲಕನ ಪುತ್ರ ಹೀಗೆ ಸಮಾಜದ ಬೇರೆ ಬೇರೆ ವಲಯದಿಂದ ಜನಪ್ರತಿನಿಧಿಯಾಗಿ ಗಮನ ಸೆಳೆದಿದ್ದಾರೆ. ಮತ್ತೊಂದೆಡೆ, ಇದಕ್ಕೆ ಅಪವಾದವೆಂಬಂತೆ ಒಂದೇ ಕುಟುಂಬದ ಸದಸ್ಯರಿಗೂ ಮತ್ತೆ ಅಧಿಕಾರದ ಬಾಗಿಲು ತೆರೆದಿದೆ. ಉದಾಹರಣೆಗೆ, ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಸಭೆ ಸದಸ್ಯರಾಗಿದ್ದಾರೆ, ಅವರ ಪುತ್ರ ಬಿಹಾರದ ಆರೋಗ್ಯ ಸಚಿವರು. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಸಿಂಗ್ ಯಾದವ್, ಅವರ ಪತ್ನಿ ಡಿಂಪಲ್ ಯಾದವ್ ಇಬ್ಬರೂ ಲೋಕಸಭಾ ಸದಸ್ಯರು. ಕೇರಳದಲ್ಲಿ ಪತಿ ಲೋಕಸಭಾ ಸಂಸದ, ಪತ್ನಿ ಶಾಸಕಿ. ಕರ್ನಾಟಕ ಸೇರಿ ದೇಶದಾದ್ಯಂತ ಇಂಥ ನಿದರ್ಶನಗಳಿದ್ದು, ಕುಟುಂಬ ರಾಜಕಾರಣದ ಹೊಸ ಸ್ವರೂಪದ ಕುರಿತಾದ ಸ್ವಾರಸ್ಯಕರ ಮಾಹಿತಿ ಇಲ್ಲಿದೆ.
ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ವಂಶ ಪಾರಂಪರ್ಯ ರಾಜಕಾರಣ ಅಥವಾ ಒಂದೇ ಕುಟುಂಬದ ಹಲವು ಸದಸ್ಯರು ಜನಪ್ರತಿನಿಧಿಗಳಾಗಿರುವುದು ದಶಕಗಳಿಂದ ನಡೆದುಬಂದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಟ್ರೆಂಡ್ ಹೆಚ್ಚುತ್ತಿದೆ. ವಿವಿಧ ರಾಜ್ಯಗಳಲ್ಲಿ ಒಂದೇ ಕುಟುಂಬದ ಇಬ್ಬರು ಅಥವಾ ಮೂವರು ಸದಸ್ಯರು ಸಂಸದರಾಗಿ ಅಥವಾ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವಿಷಯದಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ನಡುವೆ ಯಾವುದೇ ಭೇದವಿಲ್ಲ. ಸಣ್ಣ ಪಕ್ಷದಿಂದ ಹಿಡಿದು, ಎಲ್ಲ ಪಕ್ಷಗಳು ಕೂಡ ಕುಟುಂಬ ಸದಸ್ಯರಿಗೆ ಮಣೆ ಹಾಕಿವೆ.
ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಹಿರಿಯ ರಾಜಕಾರಣಿ ಹಾಗೂ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಶರದ್ ಪವಾರ್ ಬಣ) ಮುಖ್ಯಸ್ಥ ಶರದ್ ಪವಾರ್ (85) 2014ರಿಂದ ರಾಜ್ಯಸಭಾ ಸದಸ್ಯರು. ಇವರ ಪುತ್ರಿ ಸುಪ್ರಿಯಾ ಸುಲೆ (56) ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರದ ಲೋಕಸಭಾ ಸದಸ್ಯೆ. ವಿಮಾನ ಅಪಘಾತದಲ್ಲಿ ಇತ್ತೀಚೆಗೆ ಮೃತಪಟ್ಟ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ (62) ಪ್ರಸ್ತುತ ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಬಾರಾಮತಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದು, ಶಾಸಕಿಯಾಗಿದ್ದಾರೆ. ಸುನೇತ್ರಾ ಪವಾರ್ ಪುತ್ರ ಪಾರ್ಥ್ ಪವಾರ್ (36) ಮಹಾರಾಷ್ಟ್ರದಿಂದ ರಾಜ್ಯಸಭಾ ಸಂಸದರು.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಕುಟುಂಬವು ಬಲಿಷ್ಠವಾಗಿದೆ. ಅಖಿಲೇಶ್ ಯಾದವ್ (52) ಉತ್ತರಪ್ರದೇಶದ ಕನ್ನೌಜ್ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿದ್ದರೆ, ಇವರ ಪತ್ನಿ ಡಿಂಪಲ್ ಯಾದವ್ (48) ಮೈನ್ಪುರಿ ಕ್ಷೇತ್ರದ ಲೋಕಸಭಾ ಸದಸ್ಯರು. ಅಖಿಲೇಶ್ ಸೋದರ ಸಂಬಂಧಿ (ಚಿಕ್ಕಪ್ಪನ ಮಗ) ಆದಿತ್ಯ ಯಾದವ್ (37) ಬುದೌನ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಸಂಸದರು. ಅಖಿಲೇಶ್ರ ಮತ್ತೊಬ್ಬ ಸೋದರ ಸಂಬಂಧಿ ಅಕ್ಷಯ್ ಯಾದವ್ (39) ಫಿರೋಜಾಬಾದ್ ಕ್ಷೇತ್ರದ ಸಂಸದರು.
ಭಾರತದ ಪ್ರಮುಖ ರಾಜಕೀಯ ಕುಟುಂಬಗಳಲ್ಲಿ ನೆಹರು-ಗಾಂಧಿ ಕುಟುಂಬ ಒಂದು. ಪ್ರಸ್ತುತ ಈ ಕುಟುಂಬದ ಮೂವರು ಸದಸ್ಯರು ಸಂಸತ್ತಿನಲ್ಲಿದ್ದಾರೆ. ಎಐಸಿಸಿ ಮಾಜಿ ಅಧ್ಯಕ್ಷೆ, ಸಂಯುಕ್ತ ಪ್ರಗತಿಪರ ರಂಗದ (ಯುಪಿಎ) ಮಾಜಿ ಅಧ್ಯಕ್ಷೆ 79 ವರ್ಷ ವಯಸ್ಸಿನ ಸೋನಿಯಾ ಗಾಂಧಿ ಒಟ್ಟು ಐದು ಬಾರಿ ಲೋಕಸಭಾ ಸದಸ್ಯರಾಗಿದ್ದರು. ಪ್ರಸ್ತುತ ರಾಜಸ್ಥಾನದಿಂದ ರಾಜ್ಯಸಭಾ ಸದಸ್ಯರು. ಪುತ್ರ ರಾಹುಲ್ ಗಾಂಧಿ (55) ಉತ್ತರ ಪ್ರದೇಶದ ರಾಯ್ಬರೇಲಿಯಿಂದ ಲೋಕಸಭಾ ಸದಸ್ಯರು, ಪ್ರತಿಪಕ್ಷ ನಾಯಕರು. ಸೋನಿಯಾ ಪುತ್ರಿ, ರಾಹುಲ್ ಸಹೋ ದರಿ ಪ್ರಿಯಾಂಕಾ ಗಾಂಧಿ ವಾದ್ರಾ (54) ಕೇರಳದ ವಯನಾಡು ಕ್ಷೇತ್ರದ ಲೋಕಸಭಾ ಸದಸ್ಯರು.
ಬಿಹಾರದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ (ಆರ್ಜೆಡಿ) ಲಾಲು ಪ್ರಸಾದ್ ಯಾದವ್ (77) ಕುಟುಂಬದ ರಾಜಕೀಯ ವರ್ಚಸ್ಸು ಗಮನಾರ್ಹವಾದದ್ದು. ಲಾಲು ಪತ್ನಿ ರಾಬ್ರಿ ದೇವಿ (57) ವಿಧಾನ ಪರಿಷತ್ ಸದಸ್ಯರು ಮತ್ತು ವಿಧಾನ ಪರಿಷತ್ನಲ್ಲಿ ವಿರೋಧ ಪಕ್ಷದ ನಾಯಕರು. ಲಾಲು ಕಿರಿಯ ಪುತ್ರ ತೇಜಸ್ವಿ ಯಾದವ್ (36) ಶಾಸಕರು ಹಾಗೂ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕರು. ಲಾಲು ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ (38) ಪ್ರಸ್ತುತ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುತ್ರಿ ಮೀಸಾ ಭಾರತಿ (49) ಬಿಹಾರದ ಪಾಟಲಿಪುತ್ರ ಕ್ಷೇತ್ರದ ಲೋಕಸಭಾ ಸದಸ್ಯೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (92) 2020ರಿಂದ ಕರ್ನಾಟಕದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿದ್ದಾರೆ. ಮಾತ್ರವಲ್ಲ, ಈ ಇಳಿ ವಯಸ್ಸಿನಲ್ಲೂ ದೇವೇಗೌಡರು ರಾಜ್ಯಸಭೆ ಕಲಾಪಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು, ಕರ್ನಾಟಕದ ನೆಲ-ಜಲ ಸೇರಿದಂತೆ ಇತರ ಪ್ರಮುಖ ವಿಷಯಗಳ ಬಗ್ಗೆ ದನಿ ಎತ್ತುತ್ತಿದ್ದಾರೆ. ದೇವೇಗೌಡರ ಪುತ್ರ ಎಚ್.ಡಿ.ರೇವಣ್ಣ (68) ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರದ ಶಾಸಕರು. ಎಚ್.ಡಿ.ರೇವಣ್ಣ ಪುತ್ರ ಸೂರಜ್ ರೇವಣ್ಣ (38) ವಿಧಾನ ಪರಿಷತ್ ಸದಸ್ಯರು. ದೇವೇಗೌಡರ ಇನ್ನೊಬ್ಬ ಪುತ್ರ ಎಚ್.ಡಿ. ಕುಮಾರಸ್ವಾಮಿ (66) 2024ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಗೆದ್ದು, ಪ್ರಸ್ತುತ ಕೇಂದ್ರದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇವೇಗೌಡರ ಅಳಿಯ (ಪುತ್ರಿ ಅನಸೂಯ ಅವರ ಪತಿ), ಖ್ಯಾತ ಹೃದಯರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರು (ಬಿಜೆಪಿ).
ಎಸ್.ಎಸ್. ಮಲ್ಲಿಕಾರ್ಜುನ್ (58) ರಾಜ್ಯದ ತೋಟಗಾರಿಕೆ ಸಚಿವರು. ಪತ್ನಿ ಪ್ರಭಾ ಮಲ್ಲಿಕಾರ್ಜುನ್ (50) 2024ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು, ದಾವಣಗೆರೆ ಕ್ಷೇತ್ರವನ್ನು 18ನೇ ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಈ ದಂಪತಿಯ ಪುತ್ರ ಶಾಮನೂರು ಸಮರ್ಥ್ (27) ಇತ್ತೀಚೆಗೆ ನಡೆದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದು, ವಿಧಾನಸಭೆ ಪ್ರವೇಶಿಸಿದ್ದಾರೆ.
ಕಾಂಗ್ರೆಸ್ಸಿನ ಪ್ರಭಾವಿ ರಾಜಕಾರಣಿ, ಕರ್ನಾಟಕದ ಅರಣ್ಯ, ಜೀವಿಶಾಸ್ತ್ರ ಮತ್ತು ಸಚಿವ ಈಶ್ವರ ಖಂಡ್ರೆ (64) ಬೀದರ್ ಜಿಲ್ಲೆಯ ಭಾಲ್ಕಿ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇವರ ಪುತ್ರ ಸಾಗರ್ ಖಂಡ್ರೆ (28) ಬೀದರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಜಕಾರಣ ದಲ್ಲಿ ಹಿಡಿತ ಹೊಂದಿರುವ ರಮೇಶ್ ಜಾರಕಿಹೊಳಿ (66) ಬೆಳಗಾವಿ ಜಿಲ್ಲೆಯ ಗೋಕಾಕ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಶಾಸಕರು. ಇವರ ಸಹೋದರರಾದ ಸತೀಶ್ ಜಾರಕಿಹೊಳಿ (63) ಕರ್ನಾಟಕದ ಲೋಕೋಪಯೋಗಿ ಸಚಿವರು (ಕಾಂಗ್ರೆಸ್). ಇನ್ನೋರ್ವ ಸಹೋದರ ಲಖನ್ ಜಾರಕಿಹೊಳಿ (54) ವಿಧಾನ ಪರಿಷತ್ ಸದಸ್ಯರು (ಕಾಂಗ್ರೆಸ್). ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ (29) ಪ್ರಸ್ತುತ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರು (ಕಾಂಗ್ರೆಸ್).
9 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿ ಪ್ರಸ್ತುತ ಎಐಸಿಸಿ ಅಧ್ಯಕ್ಷರಾಗಿರುವ 83 ವಯಸ್ಸಿನ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ದಿಂದ ರಾಜ್ಯಸಭೆ ಸದಸ್ಯರು. ಇವರ ಪುತ್ರ ಪ್ರಿಯಾಂಕ್ ಖರ್ಗೆ ಚಿತ್ತಾಪುರ ಕ್ಷೇತ್ರದ ಶಾಸಕರು ಮತ್ತು ಕರ್ನಾಟಕದ ಐಟಿ ಸಚಿವರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (83) ಅವರ ಪುತ್ರ ಬಿ.ವೈ.ರಾಘವೇಂದ್ರ (52) ಶಿವಮೊಗ್ಗ ಕ್ಷೇತ್ರದ ಲೋಕಸಭಾ ಸದಸ್ಯರು. ಇನ್ನೋರ್ವ ಪುತ್ರ ಬಿ.ವೈ.ವಿಜಯೇಂದ್ರ (47) ಶಾಸಕರು, ಬಿಜೆಪಿ ರಾಜ್ಯಾಧ್ಯಕ್ಷರು.