ದೆಹಲಿಯ ಚಾವ್ರಿ ಬಜಾರ್‌ನಲ್ಲಿ ಭೀಕರ ದುರಂತ: 3 ಮಹಡಿಯ ಕಟ್ಟಡ ಕುಸಿದು ಇಬ್ಬರು ಸಾವು, ಹಲವರು ಸಿಲುಕಿರುವ ಶಂಕೆ..! 
ದೇಶ

ದೆಹಲಿಯ ಚಾವ್ರಿ ಬಜಾರ್‌ನಲ್ಲಿ ಭೀಕರ ದುರಂತ: 3 ಮಹಡಿಯ ಕಟ್ಟಡ ಕುಸಿದು ಇಬ್ಬರು ಸಾವು, ಹಲವರು ಸಿಲುಕಿರುವ ಶಂಕೆ..! Delhi Building Collapse

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮತ್ತೆ ಕಟ್ಟಡ ಕುಸಿತದ ಭೀಕರ ದುರಂತವೊಂದು ( Delhi Building Collapse ) ಸಂಭವಿಸಿದೆ. ಹಳೆಯ ದೆಹಲಿಯ ಜನನಿಬಿಡ ಚಾವ್ರಿ ಬಜಾರ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೂರು ಮಹಡಿಯ ಕಟ್ಟಡವೊಂದು ಧರಾಶಾಹಿಯಾಗಿದ್ದು, ಇಬ್ಬರು ದುರಂತ ಸಾವಿಗೀಡಾಗಿದ್ದಾರೆ.

ಗುರುವಾರ ಬೆಳಗ್ಗೆ ಸುಮಾರು 9:50ರ ಸುಮಾರಿಗೆ ಚಾವ್ರಿ ಬಜಾರ್ ಮೆಟ್ರೋ ನಿಲ್ದಾಣದ ಸಮೀಪದ ಗಲ್ಲಿ ಸಿತಾರಾದಲ್ಲಿ ನಡೆದ ಈ ಘಟನೆಯಲ್ಲಿ ಇಬ್ಬರು ದುರ್ಮರಣಕ್ಕೀಡಾಗಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೇ ಏರಿಯಾದಲ್ಲಿ ಕೆಲಸ ಮಾಡುತ್ತಿದ್ದ ಹಲವು ಕಾರ್ಮಿಕರು ಹಾಗೂ ಸಾರ್ವಜನಿಕರು ಬೃಹತ್ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಶಂಕೆಯಿದ್ದು, ಸ್ಥಳೀಯ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣಾ ಪಡೆಗಳು ತಕ್ಷಣವೇ ಕಾರ್ಯಪ್ರವೃತ್ತವಾಗಿವೆ. ನೀರಿನ ಟ್ಯಾಂಕರ್‌ಗಳು ಹಾಗೂ ರಕ್ಷಣಾ ವಾಹನಗಳು ಸೇರಿದಂತೆ ಕನಿಷ್ಠ ಆರು ಅಗ್ನಿಶಾಮಕ ಘಟಕಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಜೆಸಿಬಿ ಯಂತ್ರಗಳ ನೆರವಿನಿಂದ ಅವಶೇಷಗಳನ್ನು ತೆರವುಗೊಳಿಸಿ, ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯಲು ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಈ ದುರಂತವು ದೆಹಲಿಯಲ್ಲಿ ಕಟ್ಟಡಗಳ ಭದ್ರತೆ ಮತ್ತು ನಿರ್ಮಾಣ ಕಾಮಗಾರಿಗಳ ಸುರಕ್ಷತೆಯ ಮೇಲಿನ ಪ್ರಶ್ನೆಗಳನ್ನು ಮತ್ತೊಮ್ಮೆ ಬಲವಾಗಿ ಮುನ್ನೆಲೆಗೆ ತಂದಿದೆ.

ದೆಹಲಿಯಲ್ಲಿ ಇಂತಹ ಕಟ್ಟಡ ದುರಂತಗಳು ಸಂಭವಿಸುತ್ತಿರುವುದು ಇದೇ ಮೊದಲೇನಲ್ಲ, ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಈಶಾನ್ಯ ದೆಹಲಿಯ ಮಿಲನ್ ಗಾರ್ಡನ್ ಪ್ರದೇಶದಲ್ಲೂ ಹಳೆಯ ಮನೆಯೊಂದರ ಮೇಲೆ ಹೊಸ ಮಹಡಿ ನಿರ್ಮಿಸುತ್ತಿದ್ದಾಗ ಭೀಕರ ದುರಂತ ಸಂಭವಿಸಿತ್ತು. ಅಲ್ಲಿ ಹಳೆಯ ಮೇಲ್ಛಾವಣಿ ಕುಸಿದು ಅದರ ಮೇಲಿದ್ದ ಚಾವಣಿಯೂ ಬಿದ್ದ ಪರಿಣಾಮ ಚಂದರ್‌ಪಾಲ್ (60) ಮತ್ತು ವಿಜಯ್ ಕುಮಾರ್ (33) ಎಂಬಿಬ್ಬರು ಸಾವಿಗೀಡಾಗಿದ್ದರು. ಇದಕ್ಕೂ ಮುನ್ನ ಅಕ್ಟೋಬರ್ 7 ರಂದು ಸೀಮಾಪುರಿಯಲ್ಲಿ ನಾಲ್ಕು ಮಹಡಿಯ ಕಟ್ಟಡ ಕುಸಿದು ಮಗು ಸೇರಿದಂತೆ ಮೂವರು ಪ್ರಾಣ ಕಳೆದುಕೊಂಡಿದ್ದರು ಹಾಗೂ ಎಂಟು ಜನ ಗಾಯಗೊಂಡಿದ್ದರು.

ನಿರಂತರವಾಗಿ ಸಂಭವಿಸುತ್ತಿರುವ ಈ ಸರಣಿ ದುರಂತಗಳ ಬೆನ್ನಲ್ಲೇ ದೆಹಲಿ ರಾಜಕೀಯದಲ್ಲೂ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ಆಮ್ ಆದ್ಮಿ ಪಾರ್ಟಿಯ (ಆಪ್) ಹಿರಿಯ ನಾಯಕ ಸೌರಭ್ ಭಾರದ್ವಾಜ್ ಅವರು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹಾಗೂ ದೆಹಲಿ ಮಹಾನಗರ ಪಾಲಿಕೆ (MCD) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಳೆದ ಸೆಪ್ಟೆಂಬರ್ 6 ರಂದು ದಕ್ಷಿಣ ದೆಹಲಿಯ ಸತ್ಯ ನಿಕೇತನದಲ್ಲಿ ಬಾಲಕರ ಪಿಜಿ ಕಟ್ಟಡ ಕುಸಿದು ಬಿದ್ದ ನಂತರ ಎಂಸಿಡಿ ಸುರಕ್ಷತಾ ಆಡಿಟ್ ನಡೆಸಿತ್ತು ಎಂಬುದನ್ನು ನೆನಪಿಸಿದ ಕೇಜ್ರಿವಾಲ್​, "ರೇಖಾ ಗುಪ್ತಾ ಅವರ ಸರ್ಕಾರ ಮತ್ತು ಎಂಸಿಡಿ ದೆಹಲಿಯ ಎಲ್ಲ ಕಟ್ಟಡಗಳ ಸುರಕ್ಷತಾ ಆಡಿಟ್ ನಡೆಸಿದ್ದರೂ ಸಹ ಕಟ್ಟಡಗಳು ನಿರಂತರವಾಗಿ ಕುಸಿಯುತ್ತಿರುವುದು ಏಕೆ?" ಎಂದು ನೇರವಾಗಿ ಪ್ರಶ್ನಿಸಿ ಕಿಡಿಕಾರಿದ್ದಾರೆ, (ಏಜೆನ್ಸೀಸ್​).